
ನವದೆಹಲಿ(ಜು.23): ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ಪ್ರಶ್ನಿಸಿ ವಿವಾದಿತ ಟ್ವೀಟ್ ಮಾಡಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್‌ಗೆ ಸುಪ್ರಿಂಕೋರ್ಟ್ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಕಳೆದ ತಿಂಗಳು ಸರಣಿ ಟ್ವೀಟ್ ಮಾಡಿದ್ದ ಪ್ರಶಾಂತ್ ಭೂಷಣ್, ‘ಭವಿಷ್ಯದಲ್ಲಿ ಇತಿಹಾಸಕಾರರು ಅಧಿಕೃತವಾಗಿ ತುರ್ತುಪರಿಸ್ಥಿತಿ ಹೇರದೆಯೇ ಈ ಹಿಂದಿನ 6 ವರ್ಷದಲ್ಲಿ ಪ್ರಜಾಪ್ರಭುತ್ವವನ್ನು ಹೇಗೆ ನಾಶ ಮಾಡಲಾಗಿದೆ ಎಂಬುದನ್ನು ಗಮನಿಸಿದಾಗ ಅದರಲ್ಲಿ ನ್ಯಾಯಾಂಗದ ಪಾತ್ರವೂ ಕಾಣುತ್ತದೆ. ಅದರಲ್ಲೂ ಮುಖ್ಯವಾಗಿ ಈ ಹಿಂದಿನ ಸುಪ್ರೀಂಕೋರ್ಟ್‌ನ ನಾಲ್ವರು ಮುಖ್ಯ ನ್ಯಾಯಮೂರ್ತಿಗಳ ಪಾತ್ರ ಎದ್ದು ಕಾಣುತ್ತದೆ’ ಎಂದು ಟೀಕಿಸಿದ್ದರು. ಜೊತೆಗೆ ಹಾಲಿ ಮುಖ್ಯನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಬಿಜೆಪಿ ಮುಖಂಡರೊಬ್ಬರಿಗೆ ಸೇರಿದ ಸೂಪರ್ ಬೈಕ್‌ವೊಂದರಲ್ಲಿ ಮಾಸ್ಕ್ ಧರಿಸದೇ ಕುಳಿತುಕೊಂಡಿರುವ ಫೋಟೋವನ್ನು ಕೂಡ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದರು.
ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಸುಪ್ರೀಂಕೋರ್ಟ್, ಪ್ರಶಾಂತ್ ಭೂಷಣ್‌ಗೆ ನಿಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ವಿವರಣೆಯನ್ನು ನೀಡುವಂತೆ ಸೂಚಿಸಿದೆ. ಅಲ್ಲದೇ ಪ್ರಶಾಂತ್ ಭೂಷಣ್ ಅವರ ವಿವಾದಿತ ಟ್ವಿಟ್‌ಗಳನ್ನು ಏಕೆ ಅಳಿಸಿಹಾಕಿಲ್ಲ ಎಂದು ಟ್ವಿಟರ್ ಸಂಸ್ಥೆಯನ್ನು ಕೋರ್ಟ್ ತರಾಟೆ ತೆಗೆದುಕೊಂಡಿದೆ. ಇದೇ ವೇಳೆ ಈ ಪ್ರಕರಣದಲ್ಲಿ ನೆರವಾಗುವಂತೆ ಅಟಾರ್ನಿ ಜನರಲ್‌ಗೆ ಸೂಚಿಸಿರುವ ಕೋರ್ಟ್, ಮುಂದಿನ ವಿಚಾರಣೆಯನ್ನು ಆ.5ಕ್ಕೆ ಮುಂದೂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ