
ಪಾನಿಪುರಿ ಅಂದ್ರೆ ಸಾಕು ಅದೆಷ್ಟೋ ಮಂದಿಯ ಬಾಯಲ್ಲಿ ನೀರು ಬರುತ್ತೆ. ಸಂಜೆ ಏನಾದರೂ ಸರಿ ಒಂದು ರೌಂಡ್ ಪಾನಿ ಇಳಿಸಿದ ಮೇಲೆಯೇ ಸಮಾಧಾನ ಅನ್ನೋರು ಇದ್ದಾರೆ. ಇದೀಗ ಇದೇ ಪಾನಿಪುರಿ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ರಸ್ತೆ ಬದಿಯಲ್ಲಿ ಪಾನಿಪುರಿ ತಿಂದ ಒಂದೇ ಕುಟುಂಬದ ಏಳು ಜನರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ನಡೆದಿದೆ.
ಏನಿದು ಘಟನೆ?
ಛತ್ತೀಸ್‌ಗಢದ ಪರ್ಸದಾ ಗ್ರಾಮದ ಕುಟುಂಬ ಒಂದು ಭಾನುವಾರ ರಾತ್ರಿ ದುರ್ಗಾ ಪೂಜೆಯ ಪೆಂಡಾಲ್‌ಗಳನ್ನು ನೋಡಲು ಬಿಲಾಸ್‌ಪುರಕ್ಕೆ ಬಂದಿತ್ತು. ಪೂಜೆ ಮುಗಿಸಿ ಮಧ್ಯರಾತ್ರಿ ಮನೆಗೆ ಮರಳುವಾಗ.. ರಸ್ತೆ ಬದಿಯ ಅಂಗಡಿ ಒಂದರಲ್ಲಿ ಪಾನಿಪುರಿ ತಿಂದಿದ್ದಾರೆ. ಪಾನಿಪುರಿ ತಿಂದ ಕೆಲವೇ ಕ್ಷಣಗಳಲ್ಲಿ ಕುಟುಂಬದ ಸದಸ್ಯರಿಗೆ ವಾಂತಿ, ತೀವ್ರ ಹೊಟ್ಟೆನೋವು ಮತ್ತು ಹೊಟ್ಟೆ ಸೆಳೆತ ಕಾಣಿಸಿಕೊಂಡಿದೆ. ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ, ತಕ್ಷಣವೇ ಎಲ್ಲರನ್ನೂ ಬಿಲಾಸ್‌ಪುರದ ಸಿಮ್ಸ್ (CIMS) ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಮಕ್ಕಳ ಸ್ಥಿತಿ ಗಂಭೀರ
ಆಸ್ಪತ್ರೆಗೆ ದಾಖಲಾದವರಲ್ಲಿ ಮಹೇಶ್ ಸಾಹು (32), ಸಂತೋಷ್ (27), ಪ್ರಭಾ (26), ಸುಮನ್ (18), ಸುಜಿತಾ (16), ಸೋಮೇಶ್ (15) ಮತ್ತು 6 ವರ್ಷದ ಬಾಲಕ ಶಿವಾಂಶ್ ಸಾಹು ಸೇರಿದ್ದಾರೆ. ಇವರಲ್ಲಿ ಮೂವರು ಮಕ್ಕಳ ಸ್ಥಿತಿ ಗಂಭೀರವಾಗಿದೆ. 6 ವರ್ಷದ ಬಾಲಕನನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಪ್ರಸ್ತುತ ಎಲ್ಲರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಲುಷಿತ ಆಹಾರದಿಂದಾಗಿ (ಫುಡ್ ಪಾಯ್ಸನಿಂಗ್) ಹೀಗಾಗಿರಬಹುದು ಎಂದು ಶಂಕಿಸಲಾಗಿದೆ.
ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಸಂಬಂಧಪಟ್ಟ ಪಾನಿಪುರಿ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾನಿಪುರಿ, ಮಸಾಲಾ ನೀರು ಹಾಗೂ ಇತರ ಪದಾರ್ಥಗಳ ಮಾದರಿಗಳನ್ನು (ಸ್ಯಾಂಪಲ್) ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ