
ನವದೆಹಲಿ (ಅ.21): ಪ್ರತಿಭಟನಾ ಸ್ಥಳವೆಂದು ರದ್ದುಗೊಳಿಸಲಾಗಿರುವ ದೆಹಲಿಯ ಐತಿಹಾಸಿಕ ಜಂತರ್ ಮಂತರ್ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ ರಾಷ್ಟ್ರಧ್ವಜ ಹಾರಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ 'ಕಾಕ್ರೋಚ್ ಜನತಾ ಪಾರ್ಟಿ' (CJP) ನಾಯಕರಾದ ಸೌರವ್ ದಾಸ್ ಹಾಗೂ ಆಶುತೋಷ್ ರಾಂಕಾ ಅವರನ್ನು 7 ದಿನಗಳ ನ್ಯಾಯಾಂಗ ಬಂಧನದ ಬಳಿಕ ಬಿಡುಗಡೆ ಮಾಡಲು ದೆಹಲಿಯ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ. ಅಕ್ಟೋಬರ್ 14 ರಿಂದ ನ್ಯಾಯಾಂಗ ಬಂಧನದಲ್ಲಿದ್ದ ಸಿಜೆಪಿಯ ಅಧಿಕೃತ ವಕ್ತಾರರಾದ ಆಶುತೋಷ್ ರಾಂಕಾ ಹಾಗೂ ಸೌರವ್ ದಾಸ್ ಅವರನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಲು ಆದೇಶ ಹೊರಡಿಸಲಾಗಿದೆ.
ನಿಷೇಧಿತ ಜಂತರ್ ಮಂತರ್ ಆವರಣದ ಬೀಗ ಹಾಕಲಾಗಿದ್ದ ಬಾಗಿಲುಗಳನ್ನು ಏರಿ ಅಕ್ಟೋಬರ್ 13 ರಂದು ಒಳಗೆ ಪ್ರವೇಶಿಸಿದ್ದ ರಾಂಕಾ ಹಾಗೂ ದಾಸ್, ಸರ್ಕಾರದ ವಿರುದ್ಧ ರಾಷ್ಟ್ರಧ್ವಜ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರು. ಇದಕ್ಕೂ ಮುನ್ನ ಅಕ್ಟೋಬರ್ 10 ರಂದು ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದ ವೇಳೆ, ಅವರು ಬರೆದುಕೊಟ್ಟಿದ್ದ 'ಪೀಸ್ ಬಾಂಡ್' ಅನ್ನು (Peace bond) ಈ ಕೃತ್ಯದ ಮೂಲಕ ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ ಎಂದು ಸರ್ಕಾರಿ ಅಭಿಯೋಜಕರು (Prosecution) ಕೋರ್ಟ್‌ಗೆ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 14 ರಂದು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಎದುರು ಇವರನ್ನು ಹಾಜರುಪಡಿಸಿದಾಗ, ಆರಂಭದಲ್ಲಿ 5 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ತದನಂತರ ಸೋಮವಾರ ಅವರ ಬಂಧನ ಅವಧಿಯನ್ನು ಮತ್ತಷ್ಟು 2 ದಿನಗಳ ಕಾಲ ವಿಸ್ತರಿಸಲಾಗಿತ್ತು.
ಆದರೆ, ಸಿಜೆಪಿ ಪಕ್ಷವು "ತಮ್ಮ ನಾಯಕರ ಬಿಡುಗಡೆಯನ್ನು ಉದ್ದೇಶಪೂರ್ವಕವಾಗಿ ತಡೆಯಲು ಪ್ರಕ್ರಿಯೆಗಳನ್ನು ವಿಳಂಬಗೊಳಿಸಲಾಗುತ್ತಿದೆ" ಎಂದು ಆರೋಪಿಸಿ ಬಂಧನ ಅವಧಿ ವಿಸ್ತರಣೆಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಬುಧವಾರ ಈ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ನಾಯಕರು ಕೈಗೊಂಡ 'ಬಾಂಡ್ ಉಲ್ಲಂಘನೆ'ಯನ್ನು ತೀವ್ರವಾಗಿ ಎತ್ತಿ ತೋರಿಸಿತು. ವಿದೇಶಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳನ್ನು ಪರೋಕ್ಷವಾಗಿ ಉಲ್ಲೇಖಿಸಿದ ಪೀಠವು, ಪ್ರತಿಭಟನಾಕಾರರ ಜವಾಬ್ದಾರಿಯನ್ನು ನೆನಪಿಸಿತು.
"ನೀವು ಪ್ರತಿಭಟನೆಯ ಮುಂಚೂಣಿಯಲ್ಲಿದ್ದೀರಿ. ನೀವು ಬ್ಯಾರಿಕೇಡ್‌ಗಳನ್ನು ಮುರಿದಾಗ, ನಿಮ್ಮನ್ನು ನೋಡಿ ಇತರ ಜನರೂ ಅದನ್ನೇ ಅನುಸರಿಸುವ ಅಪಾಯವಿರುತ್ತದೆ. ಆ ಬಳಿಕ ಬರುವ ಜನರು ನಿಮ್ಮ ನಿಯಂತ್ರಣದಲ್ಲಿ ಇರದಿರಬಹುದು. ನಮ್ಮ ದೇಶದ ಹೊರಗೆ ಇದು ಸಂಭವಿಸಿರುವುದನ್ನು ನಾವು ನೋಡಿದ್ದೇವೆ. ವಿದ್ಯಾರ್ಥಿ ಪ್ರತಿಭಟನೆಯಾಗಿ ಆರಂಭವಾದದ್ದು ಅಂತಿಮವಾಗಿ ಕಟ್ಟಡಗಳಿಗೆ ಬೆಂಕಿ ಹಚ್ಚುವ ಹಾಗೂ ಹಿಂಸಾಚಾರದ ಹಂತಕ್ಕೆ ತಲುಪಿತ್ತು" ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ಅರ್ಜಿದಾರರ ವಯಸ್ಸನ್ನು ವಿಚಾರಿಸಿದ ಪೀಠಕ್ಕೆ, ಅವರ ವಯಸ್ಸು 27 ಮತ್ತು 31 ವರ್ಷ ಎಂದು ತಿಳಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, "ಅವರೇನು ಜೆನ್ ಜಿ (Gen Z) ವಯಸ್ಸಿನವರಲ್ಲ. ಮಿಲೆನಿಯಲ್ಸ್‌ಗಳಿಗೆ ಈಗ ಎಷ್ಟು ವಯಸ್ಸು?" ಎಂದು ಪ್ರಶ್ನಿಸಿತು.
ಜೊತೆಗೆ ಸಿಜೆಪಿಯ ಸಾಲು ಸಾಲು ಪ್ರತಿಭಟನೆಗಳ ಉದ್ದೇಶವನ್ನು ಪ್ರಶ್ನಿಸಿದ ಕೋರ್ಟ್, "ಹಿಂದೆ (ಜೂನ್ ಮತ್ತು ಜುಲೈನಲ್ಲಿ) ನೀಟ್ (NEET) ಪರೀಕ್ಷೆ ಸೇರಿದಂತೆ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿ ಪ್ರತಿಭಟನೆ ಎಂದು ಮಕ್ಕಳು ಭಾಗವಹಿಸಿದ್ದರು. ಆದರೆ ಈಗಿನ ಪ್ರತಿಭಟನೆಯ ಉದ್ದೇಶವೇ ಬೇರೆಯಾಗಿದೆ. ಪ್ರತಿಭಟಿಸುವ ವ್ಯಕ್ತಿಗಳು ಮಾತ್ರ ಅವರೇ ಇದ್ದಾರೆ, ಆದರೆ ಪ್ರತಿಭಟನೆಯ ಕಾರಣಗಳು ಮಾತ್ರ ಬದಲಾಗುತ್ತಿವೆ" ಎಂದು ತೀಕ್ಷ್ಣವಾಗಿ ಟಿಪ್ಪಣಿ ಮಾಡಿತು. ಪ್ರಸ್ತುತ ಸಿಜೆಪಿ ಪಕ್ಷವು, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಅಕ್ರಮ ಎಸಗಲಾಗಿದೆ ಹಾಗೂ ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಕೈಗೊಂಡಿತ್ತು. ಪ್ರಕರಣದ ಸುದೀರ್ಘ ವಿಚಾರಣೆಯ ನಂತರ, ವಿಶೇಷ ಮ್ಯಾಜಿಸ್ಟ್ರೇಟ್ ಆದೇಶದಂತೆ ಇಬ್ಬರೂ ನಾಯಕರ ಬಿಡುಗಡೆಗೆ ಹಾದಿ ಸುಗಮವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ