
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಐಐಟಿಯನ್ ಬಾಬಾ ಎಂದೇ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಖ್ಯಾತಿ ಪಡೆದ ಇಂಜಿನಿಯರ್ ಅಭಯ್ ಬಾಬಾನನ್ನು ಜುನಾ ಅಖಾರದಿಂದ ಕಿತ್ತು ಹಾಕಲಾಗಿದೆ. ಮಹಾಕುಂಭ ಮೇಳ 2025ರ ಆರಂಭವಾಗುತ್ತಿದ್ದಂತೆ ಹಲವು ಸಾಧುಗಳು ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಸುದ್ದಿಯಾಗಿ ಸಾಕಷ್ಟು ಮುನ್ನಲೆಗೆ ಬಂದಿದ್ದರು. ಹೀಗೆ ಅಲ್ಪ ಸಮಯದಲ್ಲಿ ಸಾಕಷ್ಟು ಸುದ್ದಿಯಾದವರಲ್ಲಿ 'ಐಐಟಿಯನ್ ಬಾಬಾ' ಎಂಜಿನಿಯರ್ ಅಭಯ್ ಸಿಂಗ್ ಬಾಬಾ ಕೂಡ ಒಬ್ಬರು ಅವರನ್ನು ನಿನ್ನೆ ರಾತ್ರಿ ಜುನಾ ಅಖಾರದಿಂದ ಹೊರ ಹಾಕಲಾಗಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಅಭಯ್ ಸಿಂಗ್ ತಮ್ಮ ಗುರು ಮಹಂತ್ ಸೋಮೇಶ್ವರ ಪುರಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ಅವರನ್ನು ಹೊರ ಹಾಕಲಾಗಿದೆ ಎಂಬ ಮಾಹಿತಿ ಇದೆ. ಈ ಬೆಳವಣಿಗೆಯಿಂದಾಗಿ ಅಖಾರ ಶಿಬಿರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಸಿಂಗ್ ಅವರು ಪ್ರವೇಶಿಸುವುದಕ್ಕೆ ನಿಷೇಧ ಹೇರಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಜುನಾ ಅಖಾರದ ಮುಖ್ಯ ಪೋಷಕ ಮಹಂತ್ ಹರಿ ಗಿರಿ ಅಂಗ್ಲ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಅಭಯ್ ಅವರ ವರ್ತನೆಯೂ ಗುರು ಶಿಷ್ಯ ಪರಂಪರೆ ಹಾಗೂ ಸನ್ಯಾಸಿಗಳ ತತ್ವಕ್ಕೆ ವಿರುದ್ಧವಾಗಿದೆ. ಗುರುಗಳನ್ನು ಅಗೌರವದಿಂದ ಕಾಣುವುದು ಹಾಗೂ ಸನಾತನ ಧರ್ಮ ಮತ್ತು ಅಖಾಡದ ಬಗ್ಗೆ ಗೌರವದ ಕೊರತೆಯನ್ನು ತೋರಿಸುತ್ತದೆ. ಜುನಾ ಅಖಾಡದಲ್ಲಿ ಶಿಸ್ತು ಅತ್ಯಂತ ಮಹತ್ವದ್ದಾಗಿದೆ ಮತ್ತು ಯಾರೂ ಅದಕ್ಕಿಂತ ಮೇಲಲ್ಲ ನಾನು ಕೂಡ ಮೇಲಲ್ಲ, ಹಾಗೆಯೇ ಅಭಯ್ ಸಿಂಗ್‌ನಂತಹ ಯಾರೂ ಕೂಡ ಅಲ್ಲ ಎಂದು ಮಹಂತ್ ಹರಿ ಗಿರಿ ಹೇಳಿದ್ದರು. ಅಭಯ್ ಸಿಂಗ್ ತನ್ನ ಗುರುಗಳನ್ನು ಗೌರವಿಸಲು ಮತ್ತು ಅದರ ಶಿಸ್ತನ್ನು ಪಾಲಿಸಲು ಕಲಿಯುವವರೆಗೆ ಅಖಾಡದಿಂದ ಅವರನ್ನು ನಿಷೇಧಿಸಲಾಗುವುದು ಎಂದು ಅಖಾಡ ಸ್ಪಷ್ಟಪಡಿಸಿದೆ.
ಅಭಯ್ ಸಿಂಗ್, ಐಐಟಿ ಬಾಂಬೆಯಿಂದ ಪದವಿ ಪಡೆದು ನಂತರ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ಆದರೆ ನಂತರ ತಮ್ಮ ಈ ಹುದ್ದೆಯನ್ನು ತೊರೆದು ಜುನಾ ಅಖಾರದ ಮಹಂತ್ ಸೋಮೇಶ್ವರ ಪುರಿ ಅವರ ಶಿಷ್ಯರಾಗಿ ಸನ್ಯಾಸತ್ವ ಸ್ವೀಕರಿಸಿದರು. ಪ್ರಸ್ತುತ ನಡೆಯುತ್ತಿರುವ ಮಹಾಕುಂಭಮೇಳದಿಂದಾಗಿ ಅವರು ಗಮನಾರ್ಹ ಜನಪ್ರಿಯತೆಯನ್ನು ಗಳಿಸಿದರು, ವಿಶೇಷವಾಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ವೈರಲ್ ಸಂದರ್ಶನವು ಅವರನ್ನು ರಾತ್ರೋರಾತ್ರಿ ಸೆಲೆಬ್ರಿಟಿಯನ್ನಾಗಿ ಮಾಡಿತು. ಅವರ ಬದುಕಿನ ಕತೆಯನ್ನು ಪ್ರಮುಖ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ವ್ಯಾಪಕವಾಗಿ ವರದಿ ಮಾಡಿದ್ದವು.
ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಅಭಯ್ ಸಿಂಗ್, ತಮ್ಮ ವಿವಾದಾತ್ಮಕ ರೀಲ್‌ನಿಂದಾಗಿ ಸುದ್ದಿಯಾಗಿದ್ದು, ಗುರು ಶಿಷ್ಯ ಹಾಗೂ ಅಪ್ಪ ಮಗನ ನಡುವಿನ ಭಿನ್ನಾಭಿಪ್ರಾಯದ ನಂತರ ಐಐಟಿಯನ್ ಬಾಬಾ ತಮ್ಮ ತಂದೆಯನ್ನು 'ಹಿರಣ್ಯಕಶಿಪು' ಮತ್ತು ಗುರುಗಳನ್ನು 'ಪಾಗಲ್' (ಹುಚ್ಚು) ಎಂದು ಕರೆದರು, ಇದರಿಂದ ಅಖಾರದೊಳಗೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ವ್ಯಾಪಕ ಆಗ್ರಹ ಕೇಳಿಬಂದಿತ್ತು., ಅಂತಿಮವಾಗಿ ಶನಿವಾರ ರಾತ್ರಿ ಅವರನ್ನು ಜುನಾ ಅಖಾರದಿಂದ ಹೊರಹಾಕಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ