
ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡಿದ್ದು, ಅವರಲ್ಲಿ ಬಹುತೇಕರು ಪ್ರವಾಸಿಗರಾಗಿದ್ದರು. ಈ ದಾಳಿ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನಗಳನ್ನು ಯುದ್ಧದ ಅಂಚಿಗೆ ತಳ್ಳಿದೆ. ಪರಮಾಣು ಶಸ್ತ್ರಾಸ್ತ್ರ ಸಜ್ಜಿತ ನೆರೆ ರಾಷ್ಟ್ರಗಳಾದ ಭಾರತ - ಪಾಕಿಸ್ತಾನಗಳು ಈಗ ಪರಸ್ಪರರ ಮೇಲೆ ದೋಷಾರೋಪ ನಡೆಸುತ್ತಿದ್ದು, ಭಾರತ ಪಾಕಿಸ್ತಾನದ ಮೇಲೆ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಆರೋಪ ಹೊರಿಸಿದರೆ, ಪಾಕಿಸ್ತಾನ ಭಾರತ ತನ್ನ ಮೇಲೆ ಮಿಲಿಟರಿ ದಾಳಿ ನಡೆಸಲು ಹುನ್ನಾರ ನಡೆಸುತ್ತಿದೆ ಎಂದಿದೆ. 2019ರ ಪುಲ್ವಾಮಾ ದಾಳಿಯ ಬಳಿಕವೂ ಪರಮಾಣು ಸಮರದ ಕಾರ್ಮೋಡ ಕವಿದಿತ್ತು. ಈಗಿನ ಬೆಳವಣಿಗೆಯೂ ಆಗಿನ ಚಿತ್ರಣವನ್ನೇ ನೆನಪಿಸುತ್ತಿದೆ. ಪಾಕಿಸ್ತಾನದ ಅಸ್ಪಷ್ಟ ಪರಮಾಣು ನೀತಿ ಮತ್ತು ಭಾರತ ಅನುಸರಿಸುತ್ತಿರುವ 'ತಾನು ಮೊದಲಾಗಿ ಪರಮಾಣು ಶಸ್ತ್ರಾಸ್ತ್ರ ಬಳಸುವುದಿಲ್ಲ' ಎಂಬ ನಿಲುವೂ ಸಹ ಈಗಿನ ಅನಿಶ್ಚಿತ ಪರಿಸ್ಥಿತಿಯನ್ನು ಇನ್ನಷ್ಟು ತೀವ್ರಗೊಳಿಸುತ್ತಿವೆ. ಒಂದು ವೇಳೆ ಈ ಉದ್ವಿಗ್ನ ಪರಿಸ್ಥಿತಿ ಏನಾದರೂ ಪರಮಾಣು ಯುದ್ಧದ ರೂಪ ಪಡೆದರೆ ಏನಾಗಬಹುದು? ಆ ಯುದ್ಧ ವಿನಾಶಕಾರಿಯಾಗಲಿದ್ದು, ಮಾನವ ಇತಿಹಾಸದಲ್ಲಿ ಕಂಡರಿಯದ ಮಟ್ಟಿನ ವಿಧ್ವಂಸವನ್ನು ಸೃಷ್ಟಿಸಬಲ್ಲದು. ಈ ಅನಾಹುತವನ್ನು ತಡೆಯಲಾದರೂ ನಾವು ಪರಮಾಣು ಯುದ್ಧದ ಗಂಭೀರ ಪರಿಣಾಮಗಳನ್ನು ಅರಿತುಕೊಳ್ಳಬೇಕು.
ಭಾರತ ಮತ್ತು ಪಾಕಿಸ್ತಾನಗಳೆರಡೂ ತಮ್ಮ ಬತ್ತಳಿಕೆಗಳಲ್ಲಿ ಸಾಕಷ್ಟು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿವೆ. 2025ರ ಮಾರ್ಚ್ ತಿಂಗಳ ಫೆಡರೇಶನ್ ಆಫ್ ಅಮೆರಿಕನ್ ಸೈಂಟಿಸ್ಟ್ಸ್ (FAS) ವರದಿ ಭಾರತದ ಬಳಿ ಅಂದಾಜು 180 ಅಣ್ವಸ್ತ್ರ ಸಿಡಿತಲೆಗಳಿದ್ದರೆ, ಪಾಕಿಸ್ತಾನದ ಬಳಿ ಅಂದಾಜು 170 ಅಣ್ವಸ್ತ್ರ ಸಿಡಿತಲೆಗಳಿವೆ ಎಂದಿದೆ. ಇದು ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಪ್ರಿ) ನೀಡಿರುವ 2024ರ ವರದಿಯ ಬಳಿಕ ನಡೆದಿರುವ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಭಾರತ ಪರಮಾಣು ಕಾರ್ಯಕ್ರಮ 1974ರಲ್ಲಿ ಆರಂಭಗೊಂಡಿದ್ದು, ಭಾರತದ ಬಳಿ 10ರಿಂದ 40 ಕಿಲೋಟನ್ ತನಕದ ಸಿಡಿತಲೆಗಳಿವೆ. ಕೆಲವು ಅಂದಾಜಿನ ಪ್ರಕಾರ, ಭಾರತದ ಬಳಿ 200 ಕಿಲೋಟನ್ ತನಕದ ಸಿಡಿತಲೆಗಳೂ ಇವೆ. ಇನ್ನು 1998ರಿಂದ ಪರಮಾಣು ರಾಷ್ಟ್ರವಾಗಿರುವ ಪಾಕಿಸ್ತಾನದ ಬಳಿ ಭಾರತದ ಬಳಿ ಭಾರತದ ಪ್ರಬಲ, ಸಾಂಪ್ರದಾಯಿಕ ಸೇನಾಪಡೆಗಳನ್ನು ಎದುರಿಸಲು 5ರಿಂದ 12 ಕಿಲೋಟನ್ ತನಕದ ಸಿಡಿತಲೆಗಳಿವೆ. ಉಭಯ ದೇಶಗಳೂ ತಮ್ಮ ಪರಮಾಣು ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಿದ್ದು, 2023ರಲ್ಲಿ ಭಾರತ ತನ್ನ ಪರಮಾಣು ಕಾರ್ಯಕ್ರಮಗಳಿಗೆ 2.7 ಬಿಲಿಯನ್ ಡಾಲರ್ ವೆಚ್ಚ ಮಾಡಿದ್ದರೆ, ಪಾಕಿಸ್ತಾನ 1 ಬಿಲಿಯನ್ ಡಾಲರ್ ವಿನಿಯೋಗಿಸಿತ್ತು ಎಂದು ಇಂಟರ್ನ್ಯಾಷನಲ್ ಕ್ಯಾಂಪೇನ್ ಟು ಅಬಾಲಿಷ್ ನ್ಯೂಕ್ಲಿಯರ್ ವೆಪನ್ಸ್ (ICAN) ವರದಿ ಮಾಡಿದೆ.
ಭಾರತದ ಕ್ಷಿಪಣಿ ಸಾಮರ್ಥ್ಯ
ಭಾರತದ ಕ್ಷಿಪಣಿ ವ್ಯವಸ್ಥೆಗಳು ಸಾಕಷ್ಟು ಆಧುನಿಕವೂ, ದೀರ್ಘ ವ್ಯಾಪ್ತಿಯವೂ ಆಗಿವೆ. ಅಗ್ನಿ ಸರಣಿಯ ಕ್ಷಿಪಣಿಗಳು - ಅಗ್ನಿ-I (700 ಕಿಲೋಮೀಟರ್), ಅಗ್ನಿ-II (2,000 ಕಿಲೋಮೀಟರ್), ಅಗ್ನಿ-III (3,200 ಕಿಲೋಮೀಟರ್), ಅಗ್ನಿ-IV (4,000 ಕಿಲೋಮೀಟರ್), ಮತ್ತು ಅಗ್ನಿ-V (5,000 - 8,000 ಕಿಲೋಮೀಟರ್) ಪಾಕಿಸ್ತಾನದಾದ್ಯಂತ ಮತ್ತು ಚೀನಾದ ಒಳಗೂ ಅಣ್ವಸ್ತ್ರ ಸಿಡಿತಲೆಗಳನ್ನು ಒಯ್ಯಬಲ್ಲವು. ಅಗ್ನಿ-V ಒಂದು ಇಂಟರ್‌ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು (ICBM), ಅದನ್ನು 2024ರಲ್ಲಿ ಹಲವು ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರಿಎಂಟ್ರಿ ವೆಹಿಕಲ್ಸ್ (MIRVs) ಎದುರು ಪರೀಕ್ಷಿಸಿ, ಹಲವು ಗುರಿಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಸಾಬೀತುಪಡಿಸಲಾಗಿತ್ತು. ಭಾರತದ ಪೃಥ್ವಿ-II (350 ಕಿಲೋಮೀಟರ್) ಮತ್ತು ಅಭಿವೃದ್ಧಿ ಹೊಂದುತ್ತಿರುವ ನಿರ್ಭಯ್ ಕ್ರೂಸ್ ಕ್ಷಿಪಣಿಗಳು (1,000 ಕಿಲೋಮೀಟರ್) ಸಹ ಪರಮಾಣು ಸಾಮರ್ಥ್ಯ ಹೊಂದಿವೆ. ಐಎನ್ಎಸ್ ಅರಿಹಂತ್ ಸಬ್‌ಮರೀನ್‌ನಂತಹ ಸಮುದ್ರ ಆಧಾರಿತ ವ್ಯವಸ್ಥೆಗಳು ಕೆ-15 (750 ಕಿಲೋಮೀಟರ್) ಮತ್ತು ಕೆ-4 (3,500 ಕಿಲೋಮೀಟರ್) ಸಬ್‌ಮರೀನ್‌ನಿಂದ ಉಡಾವಣೆಗೊಳ್ಳುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು (SLBMs) ಹೊಂದಿದ್ದು, ಈ ಮೂಲಕ ಭಾರತ ಭೂಮಿ, ಆಕಾಶ ಮತ್ತು ಸಮುದ್ರಗಳಿಂದಲೂ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯ ಗಳಿಸಿದೆ. ಇವುಗಳು ಕರಾಚಿಯಿಂದ ಇಸ್ಲಾಮಾಬಾದ್ ತನಕ ಪಾಕಿಸ್ತಾನದ ಯಾವುದೇ ನಗರವನ್ನು, ಅಷ್ಟೇ ಯಾಕೆ, ಚೀನಾದ ಬೀಜಿಂಗ್ ಮೇಲೂ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ.
ಪಾಕಿಸ್ತಾನದ ಕ್ಷಿಪಣಿ ಸಾಮರ್ಥ್ಯ
ಪಾಕಿಸ್ತಾನದ ಕ್ಷಿಪಣಿಗಳು ಭಾರತವನ್ನು ತಡೆಯುವ ನಿಟ್ಟಿನಲ್ಲಿ ರೂಪಿತವಾಗಿವೆ. ಶಹೀನ್ ಸರಣಿಯ ಕ್ಷಿಪಣಿಗಳು - ಶಹೀನ್-I (750 ಕಿಲೋಮೀಟರ್), ಶಹೀನ್-IA (900 ಕಿಲೋಮೀಟರ್), ಶಹೀನ್-II (2,000 ಕಿಲೋಮೀಟರ್), ಶಹೀನ್-III (2,750 ಕಿಲೋಮೀಟರ್) - ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿದಂತೆ, ಭಾರತದ ಯಾವ ಭಾಗದ ಮೇಲೂ ದಾಳಿ ನಡೆಸುವ ಸಾಮರ್ಥ್ಯ ಗಳಿಸಿವೆ. ಉತ್ತರ ಕೊರಿಯಾದ ನೊಡೊಂಗ್ ಕ್ಷಿಪಣಿ ಆಧಾರಿತವಾದ ಘೋರಿ (1,300 ಕಿಲೋಮೀಟರ್) ಮತ್ತು ಕಡಿಮೆ ವ್ಯಾಪ್ತಿಯ ನಸರ್ (70 ಕಿಲೋಮೀಟರ್) ಕ್ಷಿಪಣಿಗಳು ಯುದ್ಧರಂಗದಲ್ಲಿ ಬಳಸುವಂತಹ ಕ್ಷಿಪಣಿಗಳಾಗಿದ್ದು, ಪರಮಾಣು ಸಾಮರ್ಥ್ಯ ಹೊಂದಿವೆ. ಇನ್ನು ಮಿರೇಜ್ III ಯುದ್ಧ ವಿಮಾನದಿಂದ ಪ್ರಯೋಗಿಸಬಲ್ಲ ರಾದ್ ಕ್ರೂಸ್ ಕ್ಷಿಪಣಿ (350 - 600 ಕಿಲೋಮೀಟರ್) ಮತ್ತು ಬಾಬರ್ ಕ್ರೂಸ್ ಕ್ಷಿಪಣಿ (700 ಕಿಲೋಮೀಟರ್) ಪಾಕಿಸ್ತಾನದ ಕ್ಷಿಪಣಿ ವೈವಿಧ್ಯತೆಯನ್ನು ಹೆಚ್ಚಿಸಿವೆ. ಪಾಕಿಸ್ತಾನದ ಬಳಿ ಪರಮಾಣು ಚಾಲಿತ ಸಬ್‌ಮರೀನ್‌ಗಳು ಇಲ್ಲವಾದರೂ, ಅದು ಬಾಬರ್-3 ಸಾಂಪ್ರದಾಯಿಕ ಸಬ್‌ಮರೀನ್ ಮೂಲಕ ಸಮುದ್ರ ಆಧಾರಿತ ದಾಳಿ ನಡೆಸುವ ಸಾಧ್ಯತೆಗಳನ್ನು ಅನ್ವೇಷಿಸುತ್ತಿದೆ. ಇವುಗಳು ಭಾರತದ ದೆಹಲಿ, ಮುಂಬೈ, ಮತ್ತು ಬೆಂಗಳೂರಿನಂತಹ ನಗರಗಳ ಮೇಲೂ ದಾಳಿ ನಡೆಸಬಲ್ಲವಾಗಿದ್ದು, ಭಾರತದ ಪಾಲಿಗೆ ಅಪಾಯಕಾರಿಯಾದೀತು.
ಪರಮಾಣು ಯುದ್ಧಕ್ಕೆ ಬಲಿ - ಬೆಲೆ
ಒಂದು ವೇಳೆ ಪರಮಾಣು ಯುದ್ಧ ನಡೆದರೆ, ಆ ದುರಂತವನ್ನು ಊಹಿಸಲೂ ಸಾಧ್ಯವಿಲ್ಲ. ರುಟ್‌ಗಜ಼್ ವಿಶ್ವವಿದ್ಯಾಲಯದ 2019ರ ಅಧ್ಯಯನವೊಂದರ ಪ್ರಕಾರ, ಭಾರತ 100 ಅಣ್ವಸ್ತ್ರ ಸಿಡಿತಲೆಗಳನ್ನು ಬಳಸಿದರೆ, ಮತ್ತು ಪಾಕಿಸ್ತಾನ 150 ಅಣ್ವಸ್ತ್ರ ಸಿಡಿತಲೆಗಳನ್ನು ಬಳಸಿದರೆ, 50ರಿಂದ 125 ಮಿಲಿಯನ್ ಜನರು ತಕ್ಷಣವೇ ಸಾವಿಗೀಡಾಗಬಹುದು. ಇದು ಎರಡನೇ ಮಹಾಯುದ್ಧದ ಸಾವಿನ ಸಂಖ್ಯೆಯನ್ನೂ ಮೀರಿರಲಿದೆ. ಆಗಸ್ಟ್ 1945ರಲ್ಲಿ ಅಮೆರಿಕಾ ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಪ್ರಯೋಗಿಸಿದ ಬಾಂಬ್ ದಾಳಿಯೂ ಇದರ ಮುಂದೆ ಏನೂ ಅಲ್ಲ ಎನಿಸಬಹುದು! ಹಿರೋಷಿಮಾ ಮೇಲೆ ಪ್ರಯೋಗಿಸಿದ 'ಲಿಟ್ಲ್ ಬಾಯ್' ಬಾಂಬ್ 15 ಕಿಲೋಟನ್ ಸಾಮರ್ಥ್ಯ ಹೊಂದಿದ್ದು, 70,000 - 1,40,000 ಜನರ ಸಾವಿಗೆ ಕಾರಣವಾಗಿತ್ತು. ಇನ್ನು ನಾಗಸಾಕಿ ಮೇಲೆ ಪ್ರಯೋಗಿಸಿದ 'ಫ್ಯಾಟ್ ಮ್ಯಾನ್' ಬಾಂಬ್ 20 ಕಿಲೋಟನ್ ಸಾಮರ್ಥ್ಯ ಹೊಂದಿದ್ದು, 35,000 - 74,000 ಜನರನ್ನು ಕೊಂದಿತ್ತು. ಈ ಪ್ರಮಾಣವನ್ನು ನಾವು ಅರ್ಥ ಮಾಡಿಕೊಳ್ಳಬೇಕಾದರೆ, ಪಾಕಿಸ್ತಾನ ದೆಹಲಿಯ ಮೇಲೆ ನಾಗಸಾಕಿಗೆ ಪ್ರಯೋಗಿಸಿದಂತಹ 20 ಕಿಲೋಟನ್ ಪರಮಾಣು ಸಿಡಿತಲೆಯನ್ನು ಪ್ರಯೋಗಿಸುವುದನ್ನು ಊಹಿಸಿಕೊಳ್ಳಿ. ಈ ಸ್ಫೋಟ ಅಂದಾಜು 7 ಚದರ ಕಿಲೋಮೀಟರ್ ಪ್ರದೇಶವನ್ನು ನಾಶಪಡಿಸಿ, ಅತ್ಯಂತ ಜನಭರಿತವಾದ ನಗರದಲ್ಲಿ 5 ಲಕ್ಷದಿಂದ 10 ಲಕ್ಷ ಜನರು ಕ್ಷಣಾರ್ಧದಲ್ಲಿ ಸಾವಿಗೀಡಾಗುವಂತೆ ಮಾಡಬಲ್ಲದು. ಅದರೊಡನೆ, ಆಸ್ಪತ್ರೆಗಳು, ಮನೆಗಳು, ಮತ್ತು ಮೂಲಭೂತ ವ್ಯವಸ್ಥೆಗಳು ನಾಶಗೊಂಡು, ಹಲವಾರು ದಿನಗಳ ಕಾಲ ಬೆಂಕಿ ಉರಿಯಬಹುದು. ಈಗ, ಭಾರತ ಇದಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ಕರಾಚಿಯ ಮೇಲೆ 40 ಕಿಲೋಟನ್ ಸಿಡಿತಲೆಯನ್ನು ಪ್ರಯೋಗಿಸುವುದನ್ನು ಕಲ್ಪಿಸಿಕೊಳ್ಳಿ. ಇದು 10 ಚದರ ಕಿಲೋಮೀಟರ್ ಪ್ರದೇಶವನ್ನು ಧ್ವಂಸಗೊಳಿಸಿ, 6ರಿಂದ 12 ಲಕ್ಷ ಜನರನ್ನು ಸಾಯಿಸಿ, ಪಾಕಿಸ್ತಾನದ ಅತಿದೊಡ್ಡ ನಗರವಾದ ಲಾಹೋರನ್ನು ಸ್ಮಶಾನ ಸದೃಶವಾಗಿಸಬಲ್ಲದು. ಇವು ಕೇವಲ ಒಂದೊಂದು ಸಿಡಿತಲೆಯ ಉದಾಹರಣೆಗಳಷ್ಟೇ! ಹಲವು ಅಣ್ವಸ್ತ್ರ ಸಿಡಿತಲೆಗಳು ದುರಂತವನ್ನು ಅಷ್ಟು ಪಟ್ಟು ಹೆಚ್ಚಿಸುತ್ತಾ ಸಾಗಬಲ್ಲವು. ಆಧುನಿಕ ಸಿಡಿತಲೆಗಳು 12ರಿಂದ 100 ಕಿಲೋಟನ್ ಇದ್ದು, ಭಾರೀ ವಿಧ್ವಂಸವನ್ನೇ ಸೃಷ್ಟಿಸಬಲ್ಲವು. ಪರಮಾಣು ಸ್ಫೋಟ ಸಂಭವಿಸಿದಾಗ ಉಂಟಾಗುವ ಬೆಂಕಿಯ ಚೆಂಡು ಮೈಕ್ರೋಸೆಕೆಂಡಿನಲ್ಲಿ ಸೂರ್ಯನ ಮೇಲ್ಮೈ ತಾಪಮಾನಕ್ಕಿಂತಲೂ 10 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ತಾಪಮಾನಕ್ಕೆ ತಲುಪಬಲ್ಲದು. ಈ ಅಸಾಧಾರಣ ತಾಪಮಾನ ಸೆಕೆಂಡಿಗಿಂತಲೂ ಕಡಿಮೆ ಸಮಯ ಇರುತ್ತದಾದರೂ, ಅದರ ವ್ಯಾಪ್ತಿಯ ಒಳಭಾಗದಲ್ಲಿರುವ ಜನರನ್ನೂ ತಕ್ಷಣವೇ ಆವಿಯಾಗಿಸುತ್ತದೆ. ಕೆಲವೊಂದು ಸೆಕೆಂಡುಗಳ ಕಾಲ ಇರುವ ಥರ್ಮಲ್ ವಿಕಿರಣ ತೀವ್ರ ಉರಿಯನ್ನು ಉಂಟುಮಾಡಬಲ್ಲದಾಗಿದ್ದು, ಜನರು ಸುಟ್ಟ ಗಾಯಗಳಿಂದ ಮತ್ತು ಹೊಗೆಯನ್ನು ಉಸಿರಾಡುವುದರಿಂದ ಸಾಯುವಂತೆ ಮಾಡಬಲ್ಲ ಬೆಂಕಿಯನ್ನು ಸೃಷ್ಟಿಸುತ್ತದೆ. ಶಬ್ದದ ವೇಗಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಸಾಗುವ ಶಾಕ್ ವೇವ್‌ಗಳು ಕಟ್ಟಡಗಳನ್ನು ಧರೆಗುರುಳಿಸಿ, ದೇಹಗಳನ್ನು ನಜ್ಜುಗುಜ್ಜುಗೊಳಿಸುತ್ತದೆ. ದೇಹದ ಒಳಗಿನ ಅಂಗಗಳು ಛಿದ್ರವಾಗುವಂತೆ ಮಾಡುತ್ತವೆ. ಕೆಲ ಸೆಕೆಂಡುಗಳಲ್ಲೇ ದೆಹಲಿ ಅಥವಾ ಕರಾಚಿಯಂತಹ ನಗರಗಳಲ್ಲಿ ಲಕ್ಷಾಂತರ ಜನರು ಸಾವಿಗೀಡಾದರೆ, ಬದುಕುಳಿದವರು ಸುಟ್ಟ ಗಾಯಗಳಿಂದ, ವಿಕಿರಣದ ವಿಷದಿಂದ ನರಳುತ್ತಾರೆ. ಇದರ ಪರಿಣಾಮವಾಗಿ ವಾಂತಿ, ಕೂದಲು ಉದುರುವುದು ಮತ್ತು ಅಂಗಾಂಗ ವೈಫಲ್ಯ ಕಾಣಿಸಿಕೊಳ್ಳಬಹುದು.
ಸ್ಫೋಟದ ನಂತರ: ಪರಮಾಣು ಚಳಿಗಾಲ ಮತ್ತು ಜಾಗತಿಕ ಪತನ
ಪರಮಾಣು ದಾಳಿಯ ನಂತರದ ಪರಿಣಾಮಗಳೂ ಅಷ್ಟೇ ಭೀಕರವಾಗಿರುತ್ತವೆ. ಸ್ಫೋಟಗಳು 16ರಿಂದ 36 ಮಿಲಿಯನ್ ಟನ್‌ಗಳಷ್ಟು ಮಸಿಯನ್ನು ಬಿಡುಗಡೆಗೊಳಿಸಿ, 20ರಿಂದ 35% ಸೂರ್ಯನ ಬೆಳಕನ್ನು ತಡೆಗಟ್ಟಿ, 'ಪರಮಾಣು ಚಳಿಗಾಲ' ಉಂಟುಮಾಡಬಲ್ಲದು. ಭೂಮಿಯ ತಾಪಮಾನ 3.6ರಿಂದ 9 ಡಿಗ್ರಿ ಫ್ಯಾರನ್‌ಹೀಟ್ (2ರಿಂದ 5 ಡಿಗ್ರಿ ಸೆಲ್ಸಿಯಸ್) ಕಡಿಮೆಯಾಗಿ, ಮಳೆಯ ಪ್ರಮಾಣ 15ರಿಂದ 30% ಕಡಿಮೆಯಾಗಬಹುದು. ಆಹಾರ ಉತ್ಪಾದನೆ ಪತನಗೊಂಡು, ಬೆಳೆಯ ಪ್ರಮಾಣ 15ರಿಂದ 30% ಕುಸಿಯಬಹುದು. ಅದರೊಡನೆ ಸಮುದ್ರ ಉತ್ಪನ್ನಗಳೂ 5 - 15% ಕಡಿಮೆಯಾಗಬಹುದು. ಇದರ ಪರಿಣಾಮವಾಗಿ, ದಕ್ಷಿಣ ಏಷ್ಯಾ ಮಾತ್ರವಲ್ಲದೆ, ದೂರದ ದೇಶಗಳ ಕೋಟ್ಯಂತರ ಜನರು ಹಸಿವಿನಿಂದ ನರಳುವಂತಾದೀತು. ವಿಕಿರಣಗಳ ಪರಿಣಾಮವಾಗಿ ಗಾಳಿ, ನೀರು, ಮತ್ತು ಮಣ್ಣು ವಿಷಯುಕ್ತವಾಗಿ, ಕ್ಯಾನ್ಸರ್‌ನಂತಹ ಕಾಯಿಲೆಗಳು, ಹಲವಾರು ತಲೆಮಾರುಗಳ ತನಕ ಹುಟ್ಟುವ ಮಕ್ಕಳಲ್ಲಿ ಅಂಗವೈಕಲ್ಯ, ಮತ್ತು ಅನುವಂಶಿಕ ರೂಪಾಂತರಗಳು ಕಾಣಿಸಿಕೊಳ್ಳಬಲ್ಲವು. ದಕ್ಷಿಣ ಪೆಸಿಫಿಕ್ ಭಾಗಗಳು ವಾಸಿಸಲು ಅಸಾಧ್ಯವಾಗಿ, ವಾತಾವರಣದ ಹೊಗೆಯ ಕಾರಣದಿಂದ ಆ ಪ್ರದೇಶಗಳು ಸುಧಾರಿಸಲು ಒಂದು ದಶಕಕ್ಕೂ ಹೆಚ್ಚು ಕಾಲ ಬೇಕಾದೀತು! ಆರಂಭಿಕ ಸ್ಫೋಟದಲ್ಲಿ ಬದುಕುಳಿದವರು ವಿಕಿರಣದ ಕಾರಣದಿಂದ ನಿಧಾನವಾದ, ಯಾತನಾಮಯ ಸಾವು ಅನುಭವಿಸುವಂತಾದೀತು.
ಇನ್ನು ಜಾಗತಿಕ ಪರಿಣಾಮಗಳೂ ಅಷ್ಟೇ ವಿಧ್ವಂಸಕವಾಗಬಹುದು. ಏಷ್ಯಾದ 280 ಕೋಟಿ ಜನರಿಗೆ ವ್ಯಾಪಾರ ಮತ್ತು ಇಂಧನ ಪೂರೈಕೆ ಸ್ಥಗಿತಗೊಂಡು, ಜಾಗತಿಕ ಆರ್ಥಿಕತೆ ಕುಸಿತಗೊಳ್ಳಬಹುದು. ಪಾಕಿಸ್ತಾನದ ಮಿತ್ರ ರಾಷ್ಟ್ರವಾದ ಚೀನಾ ಏನಾದರೂ ಇದರಲ್ಲಿ ಭಾಗಿಯಾದರೆ, ಆಗ ಜಗತ್ತಿನ ಅರ್ಧದಷ್ಟು ಜನಸಂಖ್ಯೆ ಯುದ್ಧದಲ್ಲಿ ಭಾಗಿಯಾಗಿ, ಪರಿಸ್ಥಿತಿ ಇನ್ನಷ್ಟು ವಿಷಮಗೊಳ್ಳಬಹುದು. ಪರಮಾಣು ಯುದ್ಧದ ಪರಿಣಾಮವಾಗಿ ಕಾಣಿಸಿಕೊಳ್ಳುವ ಆಹಾರದ ಕೊರತೆ ಮತ್ತು ಆರ್ಥಿಕ ಕುಸಿತದಿಂದ ಯಾವ ದೇಶವೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಿರೋಷಿಮಾ ಮತ್ತು ನಾಗಸಾಕಿ ಬಾಂಬ್ ದಾಳಿಗಳು ವಿಧ್ವಂಸಕವಾಗಿದ್ದರೂ, ಅವುಗಳ ಪರಿಣಾಮ ಕೇವಲ ಜಪಾನಿಗೆ ಮಾತ್ರವೇ ಸೀಮಿತವಾಗಿತ್ತು. ಆದರೆ, ಆಧುನಿಕ ಪರಮಾಣು ಯುದ್ಧಗಳಿಗೆ ಯಾವುದೇ ಮಿತಿ ಇಲ್ಲದೆ, ಇಂದಿನ ಪರಸ್ಪರ ಸಂಪರ್ಕಿತ ಜಗತ್ತಿನಲ್ಲಿ ಸಂಪೂರ್ಣ ಭೂಮಿಯ ಮೇಲೇ ಪರಿಣಾಮ ಬೀರಬಲ್ಲದು.
ಯುದ್ಧದ ಅಪಾಯ ತೋರಿದ ಹಿಂದಿನ ಬೆಳವಣಿಗೆಗಳು
ಇತಿಹಾಸವೂ ಹಿಂದಿನ ಅಪಾಯಗಳನ್ನು ನೆನಪಿಸುತ್ತಾ, ಎಚ್ಚರಿಸುತ್ತಾ ಬಂದಿದೆ. 1986-87ರಲ್ಲಿ, ಭಾರತದ ಆಪರೇಶನ್ ಬ್ರಾಸ್‌ಸ್ಟ್ಯಾಕ್ಸ್ ಗಡಿಯಾದ್ಯಂತ ಸೇನಾ ನಿಯೋಜನೆ ನಡೆಸಿತ್ತು. ಇದು ಬಹುತೇಕ ಯುದ್ಧಕ್ಕೆ ಹಾದಿ ಮಾಡಿ, ಪಾಕಿಸ್ತಾನ ತನ್ನ ಪರಮಾಣು ಸಾಮರ್ಥ್ಯದ ಕುರಿತು ಸುಳಿವು ನೀಡಿತ್ತು. 2019ರ ಪುಲ್ವಾಮಾ ದಾಳಿಯ ಬಳಿಕ ಅಮೆರಿಕಾದ ಮಧ್ಯ ಪ್ರವೇಶದ ಕಾರಣದಿಂದ ಒಂದು ಸಂಭಾವ್ಯ ಪರಮಾಣು ಸಮರ ತಡೆಯಲ್ಪಟ್ಟಿತು ಎಂದು ಅಮೆರಿಕಾದ ಮಾಜಿ ಸೆಕ್ರೆಟರಿ ಆಫ್ ಸ್ಟೇಟ್ ಮೈಕ್ ಪಾಂಪೆಯೊ ಹೇಳಿದ್ದಾರೆ. ಇಂದೂ ಅಮೆರಿಕಾ ಮತ್ತು ಗಲ್ಫ್ ರಾಷ್ಟ್ರಗಳು ಶಾಂತಿಗಾಗಿ ಕರೆ ನೀಡುತ್ತಿದ್ದು, ಅವುಗಳ ಪ್ರಭಾವ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಭಾರತ ತಾನೇ ಮೊದಲಾಗಿ ಅಣ್ವಸ್ತ್ರ ಪ್ರಯೋಗಿಸುವುದಿಲ್ಲ ಎಂಬ ನೀತಿಯನ್ನು ಅನುಸರಿಸುತ್ತಿದ್ದು, ಒಂದು ವೇಳೆ ತನ್ನ ಮೇಲೆ ದಾಳಿಯಾದರೆ, ಅತ್ಯಂತ ಗಂಭೀರ ಪ್ರತಿದಾಳಿ ನಡೆಸಲಿದೆ. ಆದರೆ ಪಾಕಿಸ್ತಾನದ ಪರಮಾಣು ನೀತಿ ಅಸ್ಪಷ್ಟವಾಗಿದ್ದು, ತನಗೆ ತೊಂದರೆಯಾಗುವ ಅಪಾಯ ಎದುರಾದರೆ ಅದೇ ಮೊದಲಾಗಿ ಅಣ್ವಸ್ತ್ರ ಪ್ರಯೋಗಿಸುವ ಸಾಧ್ಯತೆಗಳಿವೆ. ಇತ್ತೀಚೆಗೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ನೀಡಿರುವ ಅಣ್ವಸ್ತ್ರ ಎಚ್ಚರಿಕೆಯೂ ಸಹ ತಪ್ಪು ಲೆಕ್ಕಾಚಾರದ ಅಪಾಯಗಳಿಗೆ ಸಾಕ್ಷಿಯಾಗಿದೆ.
ಶಾಂತಿಯ ಹಾದಿ: ವಿಧ್ವಂಸದ ಬದಲು ರಾಜತಾಂತ್ರಿಕತೆ
ವಿಧ್ವಂಸದ ಸಾಧ್ಯತೆಗಳನ್ನು ತಡೆಯಬೇಕಾದರೆ ತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. 1999ರ ಲಾಹೋರ್ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿದ್ದು, ಅದು ಶಾಂತಿ ಮಾತುಕತೆ ಮತ್ತು ಆಯುಧ ನಿಯಂತ್ರಣವನ್ನು ಪ್ರತಿಪಾದಿಸುತ್ತದೆ. ಆದರೆ ಲಾಹೋರ್ ಒಪ್ಪಂದವನ್ನು ಮೂಲೆಗುಂಪು ಮಾಡಲಾಗಿದೆ. 2017ರಲ್ಲಿ ಅಣ್ವಸ್ತ್ರಗಳನ್ನು ನಿಷೇಧಿಸುವ ವಿಶ್ವಸಂಸ್ಥೆಯ ಒಪ್ಪಂದಕ್ಕೂ ಭಾರತ - ಪಾಕಿಸ್ತಾನ ಸಹಿ ಹಾಕದಿರುವುದು ಜಾಗತಿಕ ಆತಂಕವನ್ನು ಹೆಚ್ಚಿಸಿದೆ. ಇಂತಹ ಸಂದರ್ಭದಲ್ಲಿ, ಅಮೆರಿಕಾ ಅಥವಾ ವಿಶ್ವಸಂಸ್ಥೆಯ ಮೂಲಕ ಅಂತಾರಾಷ್ಟ್ರೀಯ ಶಾಂತಿ ಮಧ್ಯಸ್ಥಿಕೆ ಮುಖ್ಯವಾಗಲಿದೆ. ಭಾರತ ಮತ್ತು ಪಾಕಿಸ್ತಾನಗಳು ಮಾತುಕತೆಗಳನ್ನು ಪುನರಾರಂಭಿಸಿ, ಜಾಗತಿಕ ಬೆಂಬಲದೊಡನೆ ಕಾಶ್ಮೀರ ವಿವಾದವನ್ನು ಪರಿಹರಿಸುವತ್ತ ಗಮನ ಹರಿಸಬೇಕು. 1989ರಲ್ಲಿ ನಡೆಸಿದ ಪರಸ್ಪರ ಪರಮಾಣು ಘಟಕಗಳತ್ತ ದಾಳಿ ನಡೆಸುವುದಿಲ್ಲ ಎಂಬಂತಹ ವಿಶ್ವಾಸಪೂರ್ವಕ ಒಪ್ಪಂದಗಳಂತಹ ನಂಬಿಕಾರ್ಹ ಕ್ರಮಗಳನ್ನು ಇಂದು ಬಲಪಡಿಸುವ ಅಗತ್ಯವಿದೆ. ಎರಡೂ ದೇಶಗಳು ತಮ್ಮ ಹೆಮ್ಮೆಗಿಂತಲೂ ಶಾಂತಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.
ಪಹಲ್ಗಾಮ್ ದಾಳಿ ಮುಂದಿನ ಅಪಾಯಗಳ ಕುರಿತ ಎಚ್ಚರಿಕೆಯ ಗಂಟೆಯಾಗಿದೆ. ಅಪಾಯಕಾರಿ ಆಯುಧಗಳನ್ನು ಹೊಂದಿರುವ ಭಾರತ ಮತ್ತು ಪಾಕಿಸ್ತಾನಗಳು ಮತ್ತೊಮ್ಮೆ ಎದುರುಬದುರಾಗಿವೆ. ಪರಮಾಣು ಯುದ್ಧ ನಡೆದರೆ ಅದರಲ್ಲಿ ಯಾರೂ ಗೆಲುವು ಸಾಧಿಸಲು ಸಾಧ್ಯವಿಲ್ಲ. ಹಿರೋಷಿಮಾ ಮತ್ತು ನಾಗಸಾಕಿ ಘಟನೆಯ ಆತಂಕಕಾರಿ ನೆನಪಿನಂತೆ ಇದೂ ಒಂದು ಭೀತಿಯ ಭೂತವಾಗಿ ಮಾನವ ಕುಲವನ್ನು ಕಾಡಲಿದೆ. ಪರಮಾಣು ಯುದ್ಧವಾದರೆ, ಲಕ್ಷಾಂತರ ಜನರು ಸಾಯುವ, ನರಳುವ, ಅಥವಾ ವಿಷಪ್ರಾಶನ ಅನುಭವಿಸುವ, ಕೋಟ್ಯಂತರ ಜನರು ಉಪವಾಸ ನರಳುವ, ಮತ್ತು ಭೂಮಿಯೇ ಕೋಲಾಹಲಕ್ಕೆ ತುತ್ತಾಗುವ ದಿನ ಬರಲಿದೆ. ಪರಮಾಣು ಯುದ್ಧದ ಪರಿಣಾಮಗಳ ಊಹೆಯೇ ಭಯಾನಕವಾಗಿದೆ. ಇದು ಮಾತುಕತೆಯ ಸಮಯವೇ ಹೊರತು ವಿಧ್ವಂಸದ ಸಮಯವಲ್ಲ. ಆ ಮೂಲಕ ಭವಿಷ್ಯದಲ್ಲಿ ಇಂತಹ ದುಸ್ವಪ್ನಗಳು ಕಾಡದಂತೆ ಮಾಡಬೇಕಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ