* ಹಿಂದುತ್ವದ ಬಗ್ಗೆ ಮೋಹನ್ ಭಾಗವತ್ ಹೊಸ ಹೇಳಿಕೆ
* ವೈರಲ್ ಆಯ್ತು ಆರ್‌ಎಸ್‌ಎಸ್ ಮುಖ್ಯಸ್ಥನ ಹೇಳಿಕೆ
* ಹಿಂದೂಗಳು, ಹಿಂದೂವಾಗಿ ಉಳಿಯಬೇಕಾದರೆ ಹೀಗಾಗಬೇಕು ಎಂದ ಭಾಗವತ್
ಗ್ವಾಲಿಯರ್(ನ.27): ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (RSS Chief Mohan Bhagwat) ಶನಿವಾರ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಈ ಕಾರ್ಯಕ್ರಮದಲ್ಲಿ ಹಿಂದೂಗಳು ಒಗ್ಗಟ್ಟಾಗಿ ಉಳಿಯುವ ಮತ್ತು ಹಿಂದುತ್ವದ (Hindutva) ಬಗ್ಗೆ ಹಲವು ವಿಷಯಗಳನ್ನು ತಿಳಿಸಿದರು. ಅಲಲ್ದೇ ಹಿಂದೂಗಳ ಸಂಖ್ಯೆ ಕಡಿಮೆಯಾಗಿದೆ ಎಂದು ನೀವು ನೋಡುತ್ತಿದ್ದೀರಿ, ಹಿಂದೂಗಳ ಶಕ್ತಿ ಕಡಿಮೆಯಾಗಿದೆ. ಹಿಂದುತ್ವ ಕಡಿಮೆಯಾಗಿದೆ. ಒಬ್ಬ ಹಿಂದೂ ಹಿಂದುವಾಗಿಯೇ ಉಳಿಯಬೇಕಾದರೆ ಭಾರತವು (India) ಒಗ್ಗಟ್ಟಾಗಿ ಉಳಿಯಬೇಕು ಎಂದು ಮೋಹನ್ ಭಾಗವತ್ ತಿಳಿಸಿದ್ದಾರೆ.
ಮೋಹನ್ ಭಾಗವತ್ ಹೇಳಿಕೆಯ ಈ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅವರು, "ಹಿಂದೂಗಳ ಸಂಖ್ಯೆ ಕಡಿಮೆಯಾಗಿದೆ, ಹಿಂದೂಗಳ ಶಕ್ತಿ ಕಡಿಮೆಯಾಗಿದೆ ಅಥವಾ ಹಿಂದುತ್ವದ ಮನೋಭಾವ ಕಡಿಮೆಯಾಗಿದೆ. ಭಾರತವು ಹಿಂದೂಸ್ತಾನ್ (Hindustan), ಭಾರತ ಹಾಗೂ ಹಿಂದೂ ಬೇರ್ಪಡಲು ಸಾಧ್ಯವಿಲ್ಲ ಎಂಬುವುದು ಇತಿಹಾಸ, ತಾರ್ಕಿಕ ಮತ್ತು ಪ್ರಾಯೋಗಿಕವಾಗಿ ಸಾಬೀತಾಗಿದೆ. ಭಾರತ ಭಾರತವಾಗೇ ಉಳಿಯಬೇಕಾದರೆ ಭಾರತ ತನ್ನನ್ನು ತಾನು ಬೆಂಬಲಿಸಬೇಕು, ಹಿಂದೂವಾಗಿ ಉಳಿಯಲೇಬೇಕು. ಹಿಂದೂ ಹಿಂದುಗಳಾಗಿಯೇ ಉಳಿಯಬೇಕು ಎಂದರೆ ಭಾರತ ಒಗ್ಗಟ್ಟಾಗಿರಬೇಕು ಮತ್ತು ಒಗ್ಗೂಡಬೇಕು ಎಂದಿದ್ದಾರೆ.
| "You will see that the number & strength of Hindus have decreased...or the emotion of Hindutva has decreased....If Hindus want to stay as Hindu then Bharat needs to become 'Akand'," says RSS chief Mohan Bhagwat while addressing an event in Gwalior, MP pic.twitter.com/hkjkB5xMz1
— ANI (@ANI)ಭಾಗವತ್ ಈ ಹೇಳಿಕೆಗೆ ಚಪ್ಪಾಳೆಯ ಸುರಿಮಳೆ ಕೇಳಿ ಬಂದಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ್ಸಂಘಚಾಲಕ್ ಮೋಹನ್ ಭಾಗವತ್ ಅವರು ಶುಕ್ರವಾರ ಮಧ್ಯಪ್ರದೇಶದ ಗ್ವಾಲಿಯರ್ ನಗರಕ್ಕೆ ಆಗಮಿಸಿದ್ದರು ಎಂಬುದು ಉಲ್ಲೇಖನೀಯ. ಭಾಗವತ್ ಅವರು ಇಲ್ಲಿ ನಾಲ್ಕು ದಿನಗಳ 'ಘೋಷ ಶಿಬಿರ'ದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಗ್ವಾಲಿಯರ್‌ನ ಸರಸ್ವತಿ ಶಿಶು ಮಂದಿರ ಕೇದಾರಧಾಮ್ ಕಾಂಪ್ಲೆಕ್ಸ್‌ನಲ್ಲಿ ಈ ನಾಲ್ಕು ದಿನಗಳ ಪ್ರಾಂತೀಯ ಸ್ವರ ಸಾಧಕ ಸಂಗಮ (ಘೋಷ್ ಶಿವರ್) ನವೆಂಬರ್ 25 ರಂದು ಪ್ರಾರಂಭವಾಗಿದೆ ಎಂದು ಸಂಘದ ಮಧ್ಯ ಭಾರತ ಪ್ರಾಂತ್ಯದ ಸಂಘಚಾಲಕ್ ಅಶೋಕ್ ಪಾಂಡೆ ಹೇಳಿದರು.
ಮೋಹನ್ ಭಾಗವತ್ ಅವರು ಈ ಹಿಂದೆ ಭಾರತ, ಹಿಂದುತ್ವ ಮತ್ತು ಹಿಂದೂ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ವಿರೋಧ ಪಕ್ಷಗಳು ಮತ್ತು ಬುದ್ಧಿಜೀವಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರು ಹಿಂದುತ್ವದ ಹೇಳಿಕೆಗಳನ್ನು ಕಟುವಾಗಿ ಟೀಕಿಸುತ್ತಿದ್ದಾರೆ.
'ವಿಭಜನೆಯಿಂದ ಯಾರೂ ಖುಷಿಯಾಗಿಲ್ಲ, ರದ್ದಾದರಷ್ಟೇ ನೋವು ಕಡಿಮೆಯಾಗುತ್ತೆ'
1947ರಲ್ಲಿ ನಡೆದ ದೇಶ ವಿಭಜನೆಯಿಂದ (Partition) ಯಾರೂ ಸಂತುಷ್ಟರಾಗಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ (RSS Chief Mohan Bhagwat) ಹೇಳಿದ್ದಾರೆ. ವಿಭಜನೆಯು ಎಂದಿಗೂ ಕೊನೆಯಿಲ್ಲದ ನೋವನ್ನು ನೀಡಿದೆ, ಹೀಗಾಗಿ ಈ ವಿಭಜನೆಯನ್ನು ರದ್ದುಗೊಳಿಸಿದರೆ ಮಾತ್ರ ಈ ನೋವು ಕೊನೆಗೊಳ್ಳುತ್ತದೆ ಎಂದಿದ್ದಾರೆ. ನೋಯ್ಡಾದಲ್ಲಿ (Noida) ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಭಾಗವತ್ ಈ ವಿಭಜನೆಯಿಂದ ಯಾರಿಗಾದರೂ ಹೆಚ್ಚು ನಷ್ಟವಾಗಿದ್ದರೆ ಅದು ಮಾನವೀಯತೆ ಎಂದು ಹೇಳಿದ್ದಾರೆ.
ಭಾರತದ ವಿಭಜನೆಯು (Partition Of India) ರಾಜಕೀಯ ಪ್ರಶ್ನೆಯಲ್ಲ, ಆದರೆ ಅಸ್ತಿತ್ವದ ಪ್ರಶ್ನೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್ ಹೇಳಿದರು. ಆ ಸಮಯದಲ್ಲಿ ದೇಶದಲ್ಲಿ ಯಾರೂ ರಕ್ತ ಹರಿಸದಂತೆ ಈ ವಿಭಜನೆಯನ್ನು ಒಪ್ಪಿಕೊಳ್ಳಬೇಕಾಗಿತ್ತು, ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಡೆದಿರುವುದು ದುರದೃಷ್ಟಕರ ಮತ್ತು ಅಂದಿನಿಂದ ಇಂದಿನವರೆಗೆ ಎಷ್ಟೋ ರಕ್ತ ಹರಿದಿದೆ ಎಂದು ಹೇಳಿದ್ದಾರೆ. ಅಲ್ಲದೇ ತಾನು ವಿಭಜನೆಯ ನಂತರ ಜನಿಸಿದೆ ಮತ್ತು ವಿಭಜನೆಯ 10 ವರ್ಷಗಳ ಬಳಿಕ ಈ ಬಗ್ಗೆ ಅರ್ಥಮಾಡಿಕೊಂಡೆ ಮತ್ತು ಅರ್ಥಮಾಡಿಕೊಂಡ ದಿನದಿಂದ ತಾನು ನಿದ್ರೆ ಮಾಡಲಿಲ್ಲ ಎಂದು ಹೇಳಿದರು.