ಹೈದರಾಬಾದ್‌ನ ಬಂಜಾರ ಹಿಲ್ಸ್ ಪ್ರದೇಶದಲ್ಲಿ ಶುಕ್ರವಾರ ಪೊಲೀಸರು ತಪಾಸಣೆ ವೇಳೆ 3.5 ಕೋಟಿ ರೂ. ಗಳನ್ನು ಶುಕ್ರವಾರ ವಶಪಡಿಸಿಕೊಂಡಿದ್ದರು. ಈ ಹಣವನ್ನು ಆದಾಯ ತೆರಿಗೆ ಇಲಾಖೆಯ ವಶಕ್ಕೆ ನೀಡಲಾಗಿತ್ತು.
ಹೈದರಾಬಾದ್ (ಅಕ್ಟೋಬರ್ 22, 2023): ತೆಲಂಗಾಣ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಕರ್ನಾಟಕದಿಂದ ಹೈದರಾಬಾದ್‌ಗೆ ಸಾಗಿಸಿದ್ದು ಎನ್ನಲಾದ ಸುಮಾರು 3.5 ಕೋಟಿ ರೂ. ಗಳನ್ನು ಪೊಲೀಸರು ಬಂಜಾರಾ ಹಿಲ್ಸ್‌ನಲ್ಲಿ ಶುಕ್ರವಾರ ಜಪ್ತಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಈ ಹಣಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ಎಎಂಆರ್ ಗ್ರೂಪ್ ಆಫ್ ಕಂಪನೀಸ್‌ನ ಮುಖ್ಯಸ್ಥರೂ ಆದ ಮಹೇಶ್ ರೆಡ್ಡಿ ಹಾಗೂ ಕಂಪನಿ ನಿರ್ದೇಶಕರ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಹೈದರಾಬಾದ್‌ನ ಬಂಜಾರ ಹಿಲ್ಸ್ ಪ್ರದೇಶದಲ್ಲಿ ಶುಕ್ರವಾರ ಪೊಲೀಸರು ತಪಾಸಣೆ ವೇಳೆ 3.5 ಕೋಟಿ ರೂ. ಗಳನ್ನು ಶುಕ್ರವಾರ ವಶಪಡಿಸಿಕೊಂಡಿದ್ದರು. ಈ ಹಣವನ್ನು ಆದಾಯ ತೆರಿಗೆ ಇಲಾಖೆಯ ವಶಕ್ಕೆ ನೀಡಲಾಗಿತ್ತು. ಬಳಿಕ ಕಾರ್ಯಾಚರಣೆ ಆರಂಭಿಸಿದ ಐಟಿ ಅಧಿಕಾರಿಗಳು ಮಹೇಶ್ ರೆಡ್ಡಿ ಅವರ ಮನೆ ಮೇಲೆ ದಾಳಿ ನಡೆಸಿ, ವಿಚಾರಣೆ ನಡೆಸಿದ್ದಾರೆ. ಮಹೇಶ್ ರೆಡ್ಡಿಗೆ ಸೇರಿದ ಸುಮಾರು 10ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ.
ಇದನ್ನು ಓದಿ: ಡಿ.ಕೆ. ಶಿವಕುಮಾರ್ ಆಪ್ತನ ತೆಲಂಗಾಣ ಮನೆ ಮೇಲೆ ಐಟಿ ದಾಳಿ: ಕರ್ನಾಟಕ ಮಾತ್ರವಲ್ಲ, ಹೊರ ರಾಜ್ಯದಿಂದಲೂ ಶಾಕ್
ಈ ಹಣವನ್ನು ಚುನಾವಣೆಯಲ್ಲಿ ನಿರ್ದಿಷ್ಟ ಪಕ್ಷಕ್ಕೋಸ್ಕರ ಖರ್ಚು ಮಾಡುವುದಕ್ಕಾಗಿ ಕರ್ನಾಟಕದಿಂದ ತರಲಾಗಿತ್ತು. ಇದರಲ್ಲಿ ಮಹೇಶ್ ರೆಡ್ಡಿ ಅವರ ಕೈವಾಡವಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಧಾನಸಭೆ ಚುನಾವಣೆ ನಡೆಯುತ್ತಿರುವ ತೆಲಂಗಾಣದಲ್ಲಿ ಯಥೇಚ್ಛವಾಗಿ ಮತದಾರರಿಗೆ ಹಣ ಹಂಚಿಕೆ ಯತ್ನಗಳು ನಡೆಯುತ್ತಿದ್ದು, ಇದರ ನಡುವೆ 750 ಕೋಟಿ ರೂ. ನಗದು ತುಂಬಿದ್ದ ಟ್ರಕ್ ಒಂದು ಪತ್ತೆಯಾಗಿ ಸಂಚಲನ ಮೂಡಿಸಿದ ಘಟನೆ ಗುರುವಾರ ನಡೆದಿತ್ತು. ಆದರೆ ಸಾಕಷ್ಟು ಪರಿಶೀಲನೆ ನಂತರ ಇದು ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಹಣವಲ್ಲ. ಕೇಂದ್ರ ಸರ್ಕಾರದ ಅಧೀನದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಹಣ ಎಂದು ಗೊತ್ತಾಗಿ ಸಂದೇಹಗಳಿಗೆ ತೆರೆ ಬಿದ್ದಿದೆ.
ಇದನ್ನೂ ಓದಿ: ಚುನಾವಣೆ ಹೊತ್ತಲ್ಲೇ ತೆಲಂಗಾಣದಲ್ಲಿ 750 ಕೋಟಿ ರು. ತುಂಬಿದ್ದ ಟ್ರಕ್ ಪತ್ತೆ
ತೆಲಂಗಾಣದ ಗದ್ವಾಲ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ಕನ್ನು ಚುನಾವಣಾ ಸಿಬ್ಬಂದಿ ತಡೆದಿದ್ದರು. ಆಗ ಅದರಲ್ಲಿ 750 ಕೋಟಿ ರೂ. ಪತ್ತೆಯಾಯಿತು. ಕೂಡಲೇ ಚುನಾವಣಾ ಸಿಬ್ಬಂದಿಯು ಪೊಲೀಸರು, ಬ್ಯಾಂಕ್ ಸಿಬ್ಬಂದಿ ಹಾಗೂ ಇತರ ಸಂಬಂಧಿಸಿದ ಸಿಬ್ಬಂದಿಯನ್ನು ಕರೆದರು. ಈ ವಿಷಯ ರಾಜ್ಯಾದ್ಯಂತ ಸಂಚಲನ ಮೂಡಿಸಿ ನಾನಾ ಊಹಾಪೋಹಕ್ಕೆ ನಾಂದಿ ಹಾಡಿತು.
ಬಳಿಕ ವಿಚಾರಣೆ ನಡೆಸಿದಾಗ, ಇದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಹಣ. ಕೇರಳದಿಂದ ಹೈದರಾಬಾದ್‌ಗೆ ಸಾಗಿಸಲಾಗುತ್ತಿತ್ತು ಎಂದು ಎಂದು ದೃಢಪಟ್ಟಿತು. ನಂತರ ಪೊಲೀಸರು ಟ್ರಕ್‌ಗೆ ಪ್ರಯಾಣವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟರು.