ಕೋವ್ಯಾಕ್ಸಿನ್‌ ಪರೀಕ್ಷೆಗೆ ಕೋತಿ ಹುಡುಕಿದ್ದು ಹೇಗೆ? ಕುತೂಹಲದ ಅಂಶ ಬಯಲು!

By Suvarna News  |  First Published Nov 15, 2021, 8:48 AM IST

* 20 ಎಳೆಯ ಮಂಗ ಹುಡುಕಿ ಪ್ರಯೋಗ: ಯಶಸ್ಸಲ್ಲಿ ಕೋತಿ ಪಾಲೂ ಇದೆ

* ಕೋವ್ಯಾಕ್ಸಿನ್‌ ಪರೀಕ್ಷೆಗೆ ಕೋತಿ ಹುಡುಕಿದ್ದು ಹೇಗೆ?

* ಐಸಿಎಂಆರ್‌ ನಿರ್ದೇಶಕ ಬಲರಾಂ ಪುಸ್ತಕದಲ್ಲಿ ಕುತೂಹಲಕರ ಮಾಹಿತಿ


ನವದೆಹಲಿ(ನ.15): ಭಾರತದ ಅಪ್ಪಟ ಸ್ವದೇಶಿ ಕೋವಿಡ್‌ ಲಸಿಕೆಯಾದ ಕೋವಾಕ್ಸಿನ್‌ನ (Covid 19 Vaccine Covaxin) ಪರೀಕ್ಷೆಗೆ ಲಾಕ್‌ಡೌನ್‌ ಸಮಯದಲ್ಲಿ 20 ಮಂಗಗಳನ್ನು ಹಿಡಿದು ತಂದಿದ್ದು ಹೇಗೆಂಬ ಕುತೂಹಲಕರ ಸಂಗತಿ ಈಗ ಬೆಳಕಿಗೆ ಬಂದಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR)ಯ ನಿರ್ದೇಶಕ ಡಾ| ಬಲರಾಂ ಭಾರ್ಗವ ಕೋವ್ಯಾಕ್ಸಿನ್‌ ಲಸಿಕೆಯ (Covaxin Vaccine) ಹಿಂದಿನ ಪರಿಶ್ರಮದ ಬಗ್ಗೆ ‘ಗೋಯಿಂಗ್‌ ವೈರಲ್‌: ಮೇಕಿಂಗ್‌ ಆಫ್‌ ಕೋವ್ಯಾಕ್ಸಿನ್‌ - ದಿ ಇನ್‌ಸೈಡ್‌ ಸ್ಟೋರಿ’ ಎಂಬ ಪುಸ್ತಕ ಬರೆದಿದ್ದು, ಅದರಲ್ಲಿ ಈ ಮಾಹಿತಿಯಿದೆ.

ಲಸಿಕೆ ಅಥವಾ ಔಷಧಿಗಳನ್ನು ಮನುಷ್ಯರಿಗೆ ನೀಡುವುದಕ್ಕಿಂತ ಮುಂಚೆ ಮಂಗಗಳ ಮೇಲೆ ಪ್ರಯೋಗಿಸಲಾಗುತ್ತದೆ. ಮಂಗಗಳ ಮೇಲೆ ಪ್ರಯೋಗ ನಡೆಸುವ ದೇಶದ ಏಕೈಕ ಪ್ರಯೋಗಾಲಯ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್‌ಐವಿ)ಯಾಗಿದೆ. ಇದು ಐಸಿಎಂಆರ್‌ನ (ICMR) ಅಧೀನದಲ್ಲಿದೆ. ಹೈದರಾಬಾದ್‌ನ ಭಾರತ್‌ ಬಯೋಟೆಕ್‌ (Bharat biotech, Hyderabad)ಜೊತೆ ಸೇರಿ ಎನ್‌ಐವಿ ಹಾಗೂ ಐಸಿಎಂಆರ್‌ ವಿಜ್ಞಾನಿಗಳು ಕೋವ್ಯಾಕ್ಸಿನ್‌ ಲಸಿಕೆ ಅಭಿವೃದ್ಧಿಪಡಿಸಿದ ಮೇಲೆ ಅದನ್ನು ರೀಸಸ್‌ ಮಕಾಕ್‌ ಜಾತಿಯ ಮಂಗಗಳ (Monkies) ಮೇಲೆ ಪ್ರಯೋಗಿಸಬೇಕಿತ್ತು. ಆದರೆ, ಆಗ ಎನ್‌ಐವಿಯಲ್ಲಿ (NIV) ಮಂಗಗಳಿರಲಿಲ್ಲ. ಇದ್ದ ಕೆಲವೇ ಮಂಗಗಳಿಗೆ ತುಂಬಾ ವಯಸ್ಸಾಗಿತ್ತು.

Tap to resize

Latest Videos

ಮಹಾರಾಷ್ಟ್ರದ ನಾಗ್ಪುರದಲ್ಲಿ ಸಿಕ್ಕವು:

ಆರಂಭದಲ್ಲಿ ವಿಜ್ಞಾನಿಗಳು ದೇಶದ ಅನೇಕ ಪ್ರಾಣಿ ಸಂಗ್ರಹಾಲಯ ಹಾಗೂ ಆ ಮಾದರಿಯ ಕೇಂದ್ರಗಳನ್ನು ಸಂಪರ್ಕಿಸಿದರು. ಎಲ್ಲೂ ಈ ಮಂಗಗಳು ಇರಲಿಲ್ಲ. ನಂತರ ಮಹಾರಾಷ್ಟ್ರದ (Maharashtra) ಅರಣ್ಯ ಇಲಾಖೆ ಬಳಿ ಕೇಳಿದರು. ಅರಣ್ಯ ಇಲಾಖೆ ಸಿಬ್ಬಂದಿ ಇಡೀ ಮಹಾರಾಷ್ಟ್ರದಲ್ಲಿ ಮಂಗಗಳ ಹುಡುಕಾಟ ಆರಂಭಿಸಿತು. ಲಾಕ್‌ಡೌನ್‌ನಿಂದಾಗಿ (Lockdown) ನಗರಗಳಲ್ಲಿ ಆಹಾರ ಸಿಗದಂತಾಗಿ ಈ ಮಂಗಗಳು ಕಾಡಿನ ಮೂಲೆಗಳಿಗೆ ಹೋಗಿಬಿಟ್ಟಿದ್ದವು. ಹಲವು ದಿನಗಳ ಹುಡುಕಾಟದ ನಂತರ ನಾಗ್ಪುರದ (nagpur)ಬಳಿ 20 ಮಂಗಗಳನ್ನು ಹಿಡಿಯಲಾಯಿತು.

ಎಳೆಯ ಮಂಗಗಳೇ ಬೇಕಿದ್ದವು:

ಲಸಿಕೆಯಿಂದ ರೋಗನಿರೋಧಕ ಶಕ್ತಿ ಸರಿಯಾಗಿ ಅಭಿವೃದ್ಧಿಯಾಗಿದೆಯೇ ಎಂದು ಪರಿಶೀಲಿಸಲು ಎಳೆಯ ಮಂಗಗಳೇ ಬೇಕಾಗುತ್ತವೆ. ಅವುಗಳನ್ನು ಆರಿಸಿ ಹಿಡಿದು ತರುವುದು ಮತ್ತೊಂದು ಕಷ್ಟವಾಗಿತ್ತು. ಜೊತೆಗೆ, ಮಂಗಗಳನ್ನು ಹಿಡಿದು ತಂದ ಮೇಲೆ ಅವುಗಳಿಗೆ ಪ್ರಯೋಗಾಲಯದ ಜನರಿಂದ ಕೋವಿಡ್‌ ಸೋಂಕು ತಗಲದಂತೆ ಬೇರೆ ಬೇರೆ ಹಂತಗಳಲ್ಲಿ ಸುರಕ್ಷತೆಯ ವ್ಯವಸ್ಥೆ ಮಾಡಬೇಕಿತ್ತು. ಅದನ್ನೆಲ್ಲ ಮಾಡಿ, ಕೋವ್ಯಾಕ್ಸಿನ್‌ ಲಸಿಕೆ ಪ್ರಯೋಗಿಸಿ, ಕೊನೆಗೆ ಅದು ಯಶಸ್ವಿಯಾಯಿತು. ಹೀಗಾಗಿ ಕೋವಿಡ್‌ ಲಸಿಕೆಯ ಶ್ರೇಯಸ್ಸು ಕೇವಲ ವಿಜ್ಞಾನಿಗಳಿಗಷ್ಟೇ ಅಲ್ಲ, ಈ ಮಂಗಗಳಿಗೂ ಲಭಿಸಬೇಕು ಎಂದು ಡಾ| ಬಲರಾಂ ಭಾರ್ಗವ ಬರೆದಿದ್ದಾರೆ.

click me!