Miracle Escape: 'ನಾನು ಹೇಗೆ ಬದುಕುಳಿದೆ..' ವಿಮಾನ ದುರಂತದಲ್ಲಿ ಪವಾಡಸದೃಶವಾಗಿ ಬದುಕುಳಿದ ವಿಶ್ವಾಸ್ ಹೇಳದ್ದೇನು?

Kannadaprabha News   | Kannada Prabha
Published : Jun 15, 2025, 12:24 AM IST
Gujarat plan crash

ಸಾರಾಂಶ

ಗುಜರಾತ್‌ನಲ್ಲಿ ನಡೆದ ವಿಮಾನ ದುರಂತದಲ್ಲಿ ಪವಾಡಸದೃಶವಾಗಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್ ಅವರು ತಮ್ಮ ಅನುಭವವನ್ನು ವಿವರಿಸಿದ್ದಾರೆ. 

ಗುಜರಾತ್ ವಿಮಾನ ದುರಂತದಲ್ಲಿ ಪವಾಡಸದೃಶವಾಗಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್ ಅಪಘಾತದಿಂದ ತಾವು ಪಾರಾದ ರೀತಿಯನ್ನು ವಿವರಿಸಿದ್ದಾರೆ.

‘ವಿಮಾನದ ಎಡಭಾಗದಲ್ಲಿರುವ ತುರ್ತು ಬಾಗಿಲಿನ ಪಕ್ಕದಲ್ಲಿದ್ದ 11ಎ ಸೀಟ್‌ನಲ್ಲಿ ನಾನು ಕುಳಿತಿದ್ದೆ. ವಿಮಾನ ಟೇಕ್ ಆಫ್ ಕೆಲ ಹೊತ್ತಿನಲ್ಲೇ ಅದರೊಳಗಿನ ನೀಲಿ ಮತ್ತು ಬಿಳಿಯ ಬಣ್ಣದ ಲೈಟ್‌ ಆನ್‌ ಆದವು. ವಿಮಾನವನ್ನು ಇನ್ನಷ್ಟು ಎತ್ತರಕ್ಕೆ ಏರಿಸಲು ಬೇಕಾದ ಶಕ್ತಿ ಪಡೆಯಲು ಪೈಲಟ್‌ಗಳು ಮುಂದಾಗಿದ್ದಾರೆ ಎಂದು ನಾನು ಭಾವಿಸಿದ್ದೆ. ಆದರೆ ಇದಾದ ಕೆಲ ಕ್ಷಣಗಳಲ್ಲೇ ವಿಮಾನ ಭಾರೀ ಸದ್ದಿನೊಂದಿಗೆ ಕಟ್ಟಡದ ಮೇಲೆ ಅಪ್ಪಳಿಸಿತು.

ಈ ವೇಳೆ ವಿಮಾನ ಎರಡು ಭಾಗಗಳಾಗಿ ತುಂಡಾಯಿತು. ನಾನು ಕುಳಿತಿದ್ದ ವಿಮಾನದ ಭಾಗ ತುಂಡಾಗಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನ ನೆಲಮಹಡಿಯ ಮೇಲೆ ಅಪ್ಪಳಿಸಿತು. ಒಂದು ಕ್ಷಣ ಏನಾಯಿತು ಎಂದೇ ನನಗೆ ಅರಿವಾಗಲಿಲ್ಲ. ಕಣ್ಣಬಿಡುವಷ್ಟರಲ್ಲಿ ನಾನು ವಿಮಾನದ ಅವಶೇಷಗಳೊಂದಿಗೆ ಕೆಳಗೆ ಬಿದ್ದಿದ್ದೆ. ಅತ್ತಿತ್ತ ಕಣ್ಣು ಹಾಯಿಸಿದಾಗ ವಿಮಾನದ ಬಾಗಿಲು ಮುರಿದಿದ್ದು ಕಂಡುಬಂತು. ಈ ವೇಳೆ ಅಲ್ಲಿಂದ ತೂರಿ ನಾನು ಪಾರಾಗಬಹುದು ಎಂದು ನನಗೆ ನಾನೇ ಹೇಳಿಕೊಂಡು ಹೊರಗೆ ಬಂದೆ.

ವಿಮಾನದ ಇನ್ನೊಂದು ಭಾಗದಲ್ಲಿ ಹಾಸ್ಟೆಲ್‌ ಗೋಡೆ ಇದ್ದ ಕಾರಣ ಬಹುಷಃ ಆ ಕಡೆ ಕುಳಿತವರು ಹೊರಬರಲಾಗಲಿಲ್ಲ. ಇದಾದ ಕೆಲವೇ ಕ್ಷಣಗಳಲ್ಲಿ ಬೆಂಕಿ ಉಂಡೆ ಕಾಣಿಸಿಕೊಂಡಿತು. ನನ್ನ ಕಣ್ಣೆದುರೇ ಇಬ್ಬರು ಗಗನಸಖಿಯರು ಸೇರಿದಂತೆ ಅನೇಕರು ಸಾವನ್ನಪ್ಪುವುದನ್ನು ನಾನು ಕಂಡೆ. ಇಷ್ಟೆಲ್ಲಾ ಭೀಕರ ಘಟನೆಯ ಹೊರತಾಗಿಯೂ ನಾನು ಬದುಕಿ ಬಂದೆ ಎಂಬುದನ್ನು ನನಗೆ ನಾನೇ ನಂಬಲಾಗುತ್ತಿಲ್ಲ’ ವಿಶ್ವಾಸ್‌ ಹೇಳಿದ್ದಾರೆ.

ವಿಶ್ವಾಸ್ ಕುಮಾರ್ ರಮೇಶ್ ವಿಮಾನದ ಎಕಾನಮಿ ಕ್ಲಾಸ್ ಸೀಟ್‌ಗಳಲ್ಲಿ ಒಂದಾದ ‘11ಎ’ನಲ್ಲಿ ಕುಳಿತಿದ್ದರು. ಇದು ತುರ್ತು ನಿರ್ಗಮನ ದ್ವಾರದ ಪಕ್ಕದಲ್ಲಿತ್ತು.ಏರ್ ಇಂಡಿಯಾದ ಬಿ787-8 ವಿಮಾನಗಳ ಎಕಾನಮಿ ಕ್ಲಾಸ್‌ನ ಮೊದಲ ಸಾಲಿನಲ್ಲಿರುವ 6 ಸೀಟ್‌ಗಳಲ್ಲಿ 11ಎ ಕೂಡ ಒಂದು. ಕಿಟಕಿ ಪಕ್ಕದಲ್ಲಿದ್ದ ಈ ಸೀಟ್ ವಿಮಾನದ ತುರ್ತು ಬಾಗಿಲಿನ ಸಮೀಪದಲ್ಲಿತ್ತು. ಆಹಾರ ಪದಾರ್ಥ ಮತ್ತು ಪಾನೀಯಗಳನ್ನು ಶೇಖರಿಸಿಡುವ ‘ಗ್ಯಾಲಿ’ ಪ್ರದೇಶವೂ ಇದರ ಬಳಿಯೇ ಇತ್ತು. ತುರ್ತು ನಿರ್ಗಮನ ದ್ವಾರದ ಬಳಿಯೇ ಕುಳಿತಿದ್ದರಿಂದ ವಿಶ್ವಾಸ್ ಪವಾಡಸದೃಶವಾಗಿ ಪಾರಾಗಲು ಸಾಧ್ಯವಾಯಿತು ಎನ್ನಲಾಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ
ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?