
- ರಾಕೇಶ್ ಶೆಟ್ಟಿ, ಲೇಖಕರು
ಟಿಎಂಸಿ ಗೂಂಡಾಗಿರಿ ನಡುವೆ ಕೇಸರಿ ಉದಯ । ನನಸಾದ ಶ್ಯಾಮಪ್ರಸಾದ್ ಮುಖರ್ಜಿ ಕನಸು
‘ಬಂಗಾಳ ಇಂದು ಯೋಚಿಸುವುದನ್ನು ಭಾರತ ನಾಳೆ ಯೋಚಿಸುತ್ತದೆ’ ಎನ್ನುವ ಕಾಲವೊಂದಿತ್ತು. ಸ್ವಾತಂತ್ರ್ಯಪೂರ್ವದ ಬಂಗಾಳದ ಸಾಂಸ್ಕೃತಿಕ, ಬೌದ್ಧಿಕ ಸಾಮರ್ಥ್ಯದ ಕನ್ನಡಿಯಂತಿದೆ ಈ ಮಾತು. ಇರದೇ ಏನು ಹೇಳಿ? ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಮಹರ್ಷಿ ಅರಬಿಂದೋ, ರವೀಂದ್ರನಾಥ್ ಟ್ಯಾಗೋರ್, ಸುಭಾಷ್ ಚಂದ್ರ ಬೋಸ್, ರಾಸ್ ಬಿಹಾರಿ ಬೋಸ್, ಪರಮಹಂಸ ಯೋಗಾನಂದ, ಜಗದೀಶ್ ಚಂದ್ರ ಬೋಸ್, ಶ್ಯಾಮಪ್ರಸಾದ ಮುಖರ್ಜಿ.. ಹೀಗೆ ಖ್ಯಾತನಾಮ ಬಂಗಾಳಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಭಾರತದ ಸ್ವಾತಂತ್ರ್ಯ ಹೋರಾಟದ ಕೇಂದ್ರಸ್ಥಾನ ಬಂಗಾಳವೇ ಆಗಿತ್ತು. ಬ್ರಿಟಿಷರು ಭಾರತ ಬಿಟ್ಟು ಹೋಗುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದವರು ಬಂಗಾಳದ ಮಣ್ಣಿನಿಂದ ಬಂದ ಸುಭಾಷ್ ಚಂದ್ರ ಬೋಸ್. ಅಂತಹ ಬಂಗಾಳದ ಭಾಗ್ಯ ಸ್ವಾತಂತ್ರ್ಯಾನಂತರ ಹಿಮ್ಮುಖವಾಗಿ ಚಲಿಸಲಾರಂಭಿಸಿತು. ‘ಭಾರತ ಇಂದು ಸಾಧಿಸುವುದನ್ನು ಬಂಗಾಳ ನಾಳೆ-ನಾಡಿದ್ದಾದರೂ ಸಾಧಿಸಬಲ್ಲದೇ?’ ಎಂದು ಕೇಳಿಕೊಳ್ಳುವಂತಹ ಸ್ಥಿತಿಗೆ ರಾಜಕೀಯ ಪಕ್ಷಗಳು ತಂದು ನಿಲ್ಲಿಸಿದವು.
ಬಂಗಾಳಿಗಳ ಬಗ್ಗೆ ಯೋಚಿಸುವಾಗ ಕನಿಕರವಾಗುತ್ತದೆ. ಸ್ವಾತಂತ್ರ್ಯಾನಂತರದ ಬರೋಬ್ಬರಿ 30 ವರ್ಷವನ್ನು ಕಾಂಗ್ರೆಸ್ (ಐಎನ್‌ಸಿ ಮತ್ತು ಬಂಗಾಳಿ ಕಾಂಗ್ರೆಸ್) ಕೈಗೆ ಕೊಟ್ಟು ಪೆಟ್ಟು ತಿಂದು, ನಂತರ 34 ವರ್ಷಗಳಷ್ಟು ಕಾಲ ಕಮ್ಯುನಿಸ್ಟರ ಕಪಿಮುಷ್ಟಿಯಲ್ಲಿ ಸಿಲುಕಿ ಹೈರಾಣಾಗಿ, ಕಡೆಗೆ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷದ ಕೈಗೆ ರಾಜ್ಯದ ಚುಕ್ಕಾಣಿಯನ್ನು ಕೊಟ್ಟು ಬೆಂಕಿಯಿಂದ ಬಾಣಲೆಗೆ ಬಿದ್ದ ದುಃಸ್ಥಿತಿ ಬಂಗಾಳಿಗಳದ್ದು. ಕಮ್ಯುನಿಸ್ಟರ ಹಿಂಸಾಚಾರ, ಓಲೈಕೆಯ ರಾಜಕಾರಣವನ್ನು ವಿರೋಧಿಸುತ್ತಲೇ 2011ರಲ್ಲಿ ಅಧಿಕಾರಕ್ಕೇರಿದ ಮಮತಾ ನಂತರ ಅಳವಡಿಸಿಕೊಂಡಿದ್ದು ಮಾತ್ರ ಕಮ್ಯುನಿಸ್ಟರ ಹಿಂಸಾಚಾರ, ಓಲೈಕೆಯ ರಾಜಕಾರಣವನ್ನೇ.
ಭಾರತದ ಉಳಿದ ರಾಜ್ಯಗಳ ಚುನಾವಣೆಗಳು ಆಡಳಿತ ವಿರೋಧಿ ಅಲೆ, ಪ್ರಣಾಳಿಕೆ, ಅಭಿವೃದ್ಧಿ ಕಾರ್ಯ ಇತ್ಯಾದಿಗಳ ಮೇಲೆ ನಡೆದರೆ ಬಂಗಾಳದಲ್ಲಿ ಹಾಗೆ ನಡೆಯುವ ಪರಿಸ್ಥಿತಿಯಿಲ್ಲ. ಟಿಎಂಸಿ ಪಕ್ಷದವರು ತಮಗೆ ಮತ ಹಾಕಿ ಎಂದು ಮತದಾರರಲ್ಲಿ ಬೇಡುವುದಿಲ್ಲ. ತಮಗೆ ಮತ ಹಾಕದಿದ್ದರೆ ನಿಮ್ಮನ್ನು ಉಳಿಸುವುದಿಲ್ಲ ಎನ್ನುತ್ತಾರೆ. ಕಮ್ಯುನಿಸ್ಟರ ಆಡಳಿತವಿದ್ದ ಕೇರಳ, ತ್ರಿಪುರಾದಲ್ಲೂ ಇದೇ ಪರಿಸ್ಥಿತಿಯಿತ್ತು. ತ್ರಿಪುರಾದಲ್ಲಿ ಬಿಜೆಪಿ ಆಡಳಿತ ಬಂದ ನಂತರ ಅಲ್ಲಿ ಪರಿಸ್ಥಿತಿ ಬದಲಾಯಿತು. ಕೇರಳದಲ್ಲಿ ಇದು ನಿಂತಿದ್ದು 2017ರಲ್ಲಿ ಬಿಜೆಪಿ ನಡೆಸಿದ ಜನಸುರಕ್ಷಾ ಯಾತ್ರೆಯ ನಂತರ. ಸೋಷಿಯಲ್ ಮೀಡಿಯಾ ಕಾಲದಲ್ಲಿ ಹಿಂಸಾಚಾರ ನಡೆಸಿ ಮುಚ್ಟಿಡುವುದು ಸುಲಭವಲ್ಲ ಎಂಬ ಕನಿಷ್ಠ ನಾಚಿಕೆ ಕೇರಳದ ಕಮ್ಯುನಿಸ್ಟರಿಗೆ ಬಂದಿತು. ಆದರೆ ಮಮತಾ ಬ್ಯಾನರ್ಜಿಯವರಿಗೆ ಯಾವುದೂ ಲೆಕ್ಕಕ್ಕಿರಲಿಲ್ಲ. ಇಂತಹ ರಾಜ್ಯದಲ್ಲಿ ಬದಲಾವಣೆ ಸುಲಭವಿರಲಿಲ್ಲ. ಆದರೆ ಕಾಲ ಎಲ್ಲದಕ್ಕೂ ದಾರಿ ಮಾಡಿಕೊಡುತ್ತದೆ.
34 ವರ್ಷಗಳ ಕಮ್ಯುನಿಸ್ಟರ ದುರಾಡಳಿತ ಕೊನೆಯಾಗಿಸಿದ್ದು ನಂದಿಗ್ರಾಮದಲ್ಲಿ ಮಮತಾ ನಡೆಸಿದ ಹೋರಾಟ. ಆಗ ಅವರ ಬೆಂಬಲಕ್ಕೆ ನಿಂತಿದ್ದು ಬಿಜೆಪಿ. ಎನ್‌ಡಿಎ ಜೊತೆಗಿನ ಸಂಬಂಧ ಕಮ್ಯುನಿಸ್ಟರ ವಿರುದ್ಧ ಹೋರಾಟದ ಇಂಧನವಾಗಿತ್ತು. ಆದರೆ ಅಧಿಕಾರಕ್ಕೇರಿದ ನಂತರ ಅದೇ ಬಿಜೆಪಿಯನ್ನು ಮಮತಾ ಉಳಿಯಲು ಬಿಡಲಿಲ್ಲ. ಬಿಜೆಪಿ ಕಾರ್ಯಕರ್ತರ ಹತ್ಯೆ, ಮನೆಯ ಹೆಣ್ಣುಮಕ್ಕಳ ಅತ್ಯಾ*ಚಾರ ಮುಂದುವರಿಯಿತು. 2014ರ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಮೋದಿ ಅಲೆಯಿದ್ದರೂ, ಬಂಗಾಳದಲ್ಲಿ ಗೆದ್ದಿದ್ದು 2 ಸೀಟು. ಆದರೆ 2019ರ ವೇಳೆಗೆ ಬಂಗಾಳದ ದೊಡ್ಡ ಬೌದ್ಧಿಕ ವರ್ಗ ಬಿಜೆಪಿಯೆಡೆಗೆ ಬಂದಿತು. ಪರಿಣಾಮವಾಗಿ 18 ಸೀಟುಗಳನ್ನು ಪಡೆಯಿತು. 2021ರ ಚುನಾವಣೆ ವೇಳೆಗೆ ಒಂದು ಕಾಲದ ಮಮತಾ ಬಲಗೈಯಾಗಿದ್ದ ಸುವೇಂದು ಅಧಿಕಾರಿ ಬಿಜೆಪಿಗೆ ಬಂದರು. ಆಗ ಅಖಾಡ ರಂಗೇರಿತು. ಟಿಎಂಸಿ ಗೂಂಡಾಗಳ ವ್ಯಾಪಕ ಹಿಂಸಾಚಾರದ ನಡುವೆಯೂ ಬಿಜೆಪಿ 77 ಸೀಟು ಗೆದ್ದಿತು.
ಬಿಜೆಪಿಯ ಪೈಪೋಟಿಯಿಂದ ಬುಸುಗುಡುತ್ತಿದ್ದ ಮಮತಾ ಚುನಾವಣೆಯ ಬಹಿರಂಗ ಪ್ರಚಾರದಲ್ಲಿ, ‘ಕೇಂದ್ರದ ಭದ್ರತಾ ಪಡೆಗಳಿವೆ ಎಂದು ತುಂಬಾ ಮೆರೆಯಬೇಡಿ. ಅವರು ಹೋದ ನಂತರ ಖೇಲಾ ಹೋಬೆ’ ಎಂದಿದ್ದರು. ಫಲಿತಾಂಶದ ನಂತರ ಆಕೆಯ ಮಾತನ್ನು ಟಿಎಂಸಿ ಗೂಂಡಾಗಳು ಅಕ್ಷರಶಃ ಮಾಡಿ ತೋರಿಸಿದರು. ಬಿಜೆಪಿ ಕಾರ್ಯಕರ್ತರ ರಕ್ತ ಹರಿಯಿತು. 300ಕ್ಕೂ ಹೆಚ್ಚು ಜೀವಗಳು ಹೋದವು. ಹೆಣ್ಣುಮಕ್ಕಳ ಅತ್ಯಾ*ಚಾರ, ಮನೆಗಳು ಸುಟ್ಟು ಕರಕಲಾದವು. 2024ರ ಲೋಕಸಭಾ ಚುನಾವಣೆಯಲ್ಲಿ ಬೂತ್ ಏಜೆಂಟರೂ ಸಿಗದ ಪರಿಸ್ಥಿತಿಯಿತ್ತು, ಪರಿಣಾಮ ಬಿಜೆಪಿ 6 ಸೀಟು ಕಳೆದುಕೊಂಡು 12ಕ್ಕೆ ಇಳಿಯಿತು.
2024ರಲ್ಲಿ ಕೋಲ್ಕತಾದ ಆರ್‌ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ಹೆಣ್ಣುಮಗಳ ಮೇಲೆ ಅತ್ಯಾ*ಚಾರ, ಕೊಲೆ ನಡೆಯಿತು. ಪ್ರಾಂಶುಪಾಲ ಹಾಗೂ ಸ್ಥಳೀಯ ಪೋಲಿಸರು ಆತ್ಮಹ*ತ್ಯೆಯ ಕತೆ ಕಟ್ಟಿದರು. ಇದರ ವಿರುದ್ಧ ಸುಮಾರು 42 ದಿನಗಳ ಕಾಲ ವೈದ್ಯರು ಬೃಹತ್ ಹೋರಾಟ ನಡೆಸಿದರು. ಈ ಘಟನೆ ಬಂಗಾಳದ ಅಂತಃಸತ್ವವನ್ನು ಬಡಿದೆಬ್ಬಿಸಿತು. ಮಮತಾ ದುರಾಡಳಿತದ ಅಂತ್ಯ ಆರಂಭವಾಗಿದ್ದೇ ಇಲ್ಲಿಂದ. ಈ ಹೆಣ್ಣುಮಗಳ ತಾಯಿ ರತ್ನಾ ದೇಬನಾಥ್ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿತ್ತು. ಆಕೆ ಮತ ಬೇಡಲು ಹೋದಾಗ ಹೆಣ್ಣುಮಕ್ಕಳೆಲ್ಲ ಆ ತಾಯಿಯನ್ನು ತಬ್ಬಿ ಅಳುತ್ತಾ ನಿಮ್ಮ ಜೊತೆ ನಾವಿದ್ದೇವೆ ಎನ್ನುತ್ತಿದ್ದರು. ಈಗ ರತ್ನಾ ಗೆದ್ದು ಶಾಸಕಿಯಾಗಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಇನ್ನೊಂದು ಭಯಾನಕ ಕೇಸ್ ಸಂದೇಶಖಾಲಿಯದ್ದು. ಪಡಿತರ ಹಗರಣದ ಆರೋಪದ ಮೇಲೆ ಟಿಎಂಸಿಯ ಶೇಖ್ ಷಹಜಹಾನ್‌ನ ಕಚೇರಿಯ ಮೇಲಿ ಇ.ಡಿ ದಾಳಿ ಮಾಡಿದಾಗ ಟಿಎಂಸಿ ಗೂಂಡಾಗಳು ಅಧಿಕಾರಿಗಳ ಮೇಲೆ ಮಾರಣಾಂತಿಕ ದಾಳಿ ಮಾಡಿದರು. ಇದೇ ಷಹಜಹಾನ್ ಮತ್ತವನ ತಂಡ ಆ ಊರಿನ ಹೆಣ್ಣುಮಕ್ಕಳನ್ನು ಪಕ್ಷದ ಕಚೇರಿಗೆ ಕರೆದು ಅತ್ಯಾ*ಚಾರ ಮಾಡುತ್ತಿತ್ತು. ಆ ಊರಿನ ರೈತರ ಜಮೀನಿಗೆ ಉಪ್ಪು ನೀರು ಸುರಿದು ಬರಡು ಮಾಡಿ ಜಮೀನು ಕಬ್ಜಾ ಮಾಡಲಾಗುತ್ತಿತ್ತು. ಜನರ ತಾಳ್ಮೆಯ ಕಟ್ಟೆಯೊಡೆದಾಗ ಅದರ ನೇತೃತ್ವ ವಹಿಸಿದ ದಿಟ್ಟ ಹೆಣ್ಣು ರೇಖಾ ಪಾತ್ರ. ಅವರು ಕೂಡ ಈಗ ಶಾಸಕಿಯಾಗಿದ್ದಾರೆ. ಷಹಜಹಾನ್ ಜೈಲಿನಲ್ಲಿದ್ದಾನೆ.
ಈ 2 ಘಟನೆಗಳ ಜೊತೆಗೆ ನೆರೆಯ ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಹತ್ಯೆ, ವಲಸೆಯೂ ಬಂಗಾಳಿಗಳನ್ನು ಬಡಿದೆಬ್ಬಿಸಿತು. ಏನೇ ಧೈರ್ಯ ಮಾಡಿ ನಿಂತರೂ ಟಿಎಂಸಿಯ ಗೂಂಡಾಗಳ ವಿರುದ್ಧ ಬಡಿದಾಡಲು ಒಂದು ಹೆಗಲು ಬೇಕಲ್ಲ, ಬಿಜೆಪಿ ಆ ಹೆಗಲಾಯಿತು. ನಾನಾ ಕೇಸುಗಳಲ್ಲಿ ಒಳಗೆ ಹೋಗಿದ್ದ ಕಾರ್ಯಕರ್ತರನ್ನು ಬಿಡಿಸಿ ಹೊರತಂದು ನಿಮ್ಮ ಕುಟುಂಬದ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಲಾಯಿತು. ಕೇಂದ್ರದ ಭದ್ರತಾ ಪಡೆಗಳು ಟಿಎಂಸಿಯ ಆರ್ಭಟಕ್ಕೆ ಬ್ರೇಕ್ ಹಾಕಿ, ನಿರ್ಭಯವಾಗಿ ಬಂದು ಮತ ಚಲಾಯಿಸುವ ವಾತಾವರಣ ನಿರ್ಮಿಸಿದವು.
ಗೆಲುವಿನ ಹಿಂದೆ ಕನ್ನಡಿಗನ ಶ್ರಮ
ಈಗ ಬಿಜೆಪಿ ಗೆದ್ದಿದೆ. ಶ್ಯಾಮಪ್ರಸಾದ್ ಮುಖರ್ಜಿಯವರ ಕನಸೂ ನನಸಾಗಿದೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು, ‘ಬಂಗಾಳ ನಮಗೆ ರಾಜಕೀಯ ಯುದ್ಧವಲ್ಲ, ನಾಗರಿಕತೆಯ ಯುದ್ಧ. ಬಂಗಾಳದ ಗೆಲುವಿನಲ್ಲಿ ಭಾರತದ ಗೆಲುವಿದೆ’ ಎಂದಿದ್ದರು. ಈ ನಾಗರಿಕತೆಯ ಯುದ್ಧವನ್ನು ಬಿಜೆಪಿ ಗೆದ್ದಿದೆ. ಖುಷಿಯ ವಿಷಯವೇನೆಂದರೆ, ನಾಗರಿಕತೆ ರಕ್ಷಣೆಯ ಈ ಹೋರಾಟದಲ್ಲಿ ನಮ್ಮ ಕರ್ನಾಟಕದ ಮೂಡಿಗೆರೆಯ ಯುವಕ ಅರುಣ್ ಬಿನ್ನಡಿ ಪ್ರಮುಖ ಪಾತ್ರ ವಹಿಸಿದ್ದರು. ನಾರ್ತ್ ಜೋನ್ ಸಿಲಿಗುರಿ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಹೋಗಿದ್ದ ಅರುಣ್ 28 ಕ್ಷೇತ್ರಗಳಲ್ಲಿ 26ನ್ನು ಗೆಲ್ಲಿಸಿದ್ದಾರೆ. ಇದೇನು ಸುಲಭದ ಕಾರ್ಯವಾಗಿರಲಿಲ್ಲ ಎನ್ನುವುದು ಅವರ ಜೊತೆ ಮಾತನಾಡಿದಾಗ ಅರ್ಥವಾಗುತ್ತದೆ. ಬೂತ್ ಮಟ್ಟದ ಸಭೆಗಳನ್ನು ನಡೆಸಲು ಸಹ ಟಿಎಂಸಿ ಗೂಂಡಾಗಳು ಬಿಡುತ್ತಿರಲಿಲ್ಲ. ಅಂತಹ ಕಡೆ ಅವರೆದುರು ತೊಡೆ ತಟ್ಟಿ ನಿಂತು ತಂದಿರುವ ಗೆಲುವಿದು. ಇಂಥ ಪರಿಶ್ರಮದ ಫಲವಾಗಿ ದೊರೆತಿರುವ ಬಿಜೆಪಿಯ ಗೆಲುವು ಸುವರ್ಣ ಬಾಂಗ್ಲಾ ಉದಯಕ್ಕೆ ನಾಂದಿಯಾಗಲಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ