ಮದ್ಯ ಮಾರಾಟ ಬೇಡವೇ ಬೇಡ ಅಂತ ಕೂತಿದ್ರು ಅಮಿತ್ ಶಾ..!

By Kannadaprabha News  |  First Published May 8, 2020, 10:34 AM IST

ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅನುಮತಿ ಕೊಡಲು ಗೃಹ ಸಚಿವ ಅಮಿತ್‌ ಶಾ ಅವರಿಗೆ ಮನಸ್ಸಿರಲಿಲ್ಲ. ಪ್ರಧಾನಿ ಮತ್ತು ಅಧಿ​ಕಾರಿಗಳ ಜೊತೆಗಿನ ಸಭೆಗಳಲ್ಲೂ ಅಮಿತ್‌ ಶಾ ಖಂಡತುಂಡವಾಗಿ ಮದ್ಯ ಮಾರಾಟ ಬೇಡ ಎಂದು ವಾದಿಸಿದ್ದರಂತೆ. 


ಮಾರ್ಚ್ ಮೂರನೇ ವಾರದಲ್ಲಿ ಆರೋಗ್ಯವೋ, ಆರ್ಥಿಕತೆಯೋ ಎಂಬ ದ್ವಂದ್ವ ಎದುರಾದಾಗ ಮೊದಲ ಪ್ರಾತಿನಿಧ್ಯ ಆರೋಗ್ಯಕ್ಕೆ, ಬದುಕಿ ಉಳಿದರೆ ಹಣ ಗಳಿಸಬಹುದು ಎಂದು ಮೋದಿ ಹೇಳಿದ್ದರು. ಆಗ ದಿನವೊಂದಕ್ಕೆ ದೇಶದಲ್ಲಿ 20 ರಿಂದ 30 ಜನರಿಗೆ ಸೋಂಕು ಬರುತ್ತಿತ್ತು. ಆದರೆ ಮೇ ಒಂದನೇ ವಾರಕ್ಕೆ ಬರುತ್ತಿದ್ದಂತೆಯೇ ಮೋದಿ ಅವರಂಥ ಕಠಿಣ ಆಡಳಿತಗಾರ ಕೂಡ ವೈರಸ್‌ನಿಂದ ಪ್ರಾಣ ಉಳಿಯುತ್ತೋ, ಬಿಡುತ್ತೋ ಹಸಿವೆಯಿಂದ ಸಾಯುವುದು ಬೇಡ ಎಂದು ಮುಚ್ಚಿದ ಬಾಗಿಲನ್ನು ಒಂದೊಂದಾಗಿ ತಾವೇ ತೆಗೆಸುತ್ತಿದ್ದಾರೆ.

ವೈರಸ್‌ನಿಂದ ಕಾಪಾಡಲು ಲಾಕ್‌ಡೌನ್‌ ಮಾಡಿಸಿ ಒಳ್ಳೆಯ ಕೆಲಸ ಮಾಡಿದರು ಎಂದು ಜನಪ್ರಿಯತೆ ಏರಿಸಿಕೊಂಡಿದ್ದ ಮೋದಿ, ಈಗ ಆರ್ಥಿಕತೆಯ ಬಾಗಿಲು ತೆರೆಯುವ ನಿರ್ಣಯ ಪೂರ್ತಿ ತಮ್ಮದೇ ಎಂದು ಘಂಟಾಘೋಷವಾಗಿ ಹೊರಗೆ ಬಂದು ಹೇಳುತ್ತಿಲ್ಲ. ಏಕೆಂದರೆ ಮುಚ್ಚಿದ್ದಾಗ 550 ಇದ್ದ ಸೋಂಕಿತರು, ಈಗ 52 ಸಾವಿರ ಇದ್ದಾರೆ. ಏನು ಮಾಡಿದರೆ ಒಳ್ಳೆಯದು, ಏನು ಮಾಡಿದರೆ ಕೆಟ್ಟದ್ದು ಎಂಬ ದ್ವಂದ್ವ ಭಾರತ ಸರ್ಕಾರದಿಂದ ಹಿಡಿದು ಅಮೆರಿಕ ಸರ್ಕಾರದವರೆಗೆ ಎಲ್ಲರಿಗೂ ಕಾಡುತ್ತಿದೆ.

Tap to resize

Latest Videos

ಕೊರೋನಾಗೆ ಫೈಲು ಕಾರಣವಂತೆ; ಮಂತ್ರಿಗಳ ಪರದಾಟ!

ಲಾಕ್‌ಡೌನ್‌ನಿಂದ ಬದುಕು ಉಧ್ವಸ್ತ ಆಗಿರುವಾಗ ಆರ್ಥಿಕತೆ, ಉದ್ಯೋಗ, ಆಸ್ಪತ್ರೆ ತಯಾರಿ, ಕೋವಿಡ್‌ ಪರೀಕ್ಷೆ, ಹಸಿವು, ಬಡತನದ ಪ್ರಶ್ನೆಗಳು ನೇರವಾಗಿ ತಮಗೇ ಎದುರಾಗುತ್ತವೆ, ತಮ್ಮ ಜನಪ್ರಿಯತೆಯ ಮೇಲೂ ಪರಿಣಾಮ ಬೀರುತ್ತವೆ ಎಂದು ಗ್ರಹಿಸಿಯೇ ಮೋದಿ ಸಾಹೇಬರು ಸ್ವಲ್ಪ ಮಟ್ಟಿಗಿನ ರಿಸ್ಕ್‌ ಅನ್ನು ರಾಜ್ಯಗಳ ಮುಖ್ಯಮಂತ್ರಿಗಳು ತೆಗೆದುಕೊಳ್ಳಲಿ ಎಂದು ಮೂರನೇ ಲಾಕ್‌ಡೌನನ್ನು ರಾಜ್ಯಗಳ ಅವಗಾಹನೆಗೆ ಬಿಟ್ಟಿದ್ದಾರೆ. ಏನು ಮಾಡಬೇಕು ಎಂಬ ದ್ವಂದ್ವ ಇರುವುದರಿಂದಲೇ ಕೇಂದ್ರದ ಅ​ಧಿಕಾರಿಗಳು ಇಲ್ಲಿಯವರೆಗೆ 4,130 ಹೊಸ ನೋಟಿಫಿಕೇಶನ್‌ಗಳನ್ನು ಹೊರಡಿಸಿದ್ದಾರೆ.

ಮೋದಿ ಅವರಿಂದ ಹಿಡಿದು ಯಡಿಯೂರಪ್ಪನವರ ವರೆಗೆ ಕೊರೋನಾ ಕಾಲದಲ್ಲಿ ಎಲ್ಲ ಆಳುವವರೂ ‘ಲಾಕ್‌ಡೌನ್‌’ ಎಂಬ ಹುಲಿ ಸವಾರಿ ಮಾಡುತ್ತಿದ್ದಾರೆ. ಒಬ್ಬ ಜಾಣ ರಾಜಕಾರಣಿಗೆ ಹುಲಿ ಮೇಲಿಂದ ಯಾವಾಗ ಕೆಳಗಿಳಿಯಬೇಕು ಮತ್ತು ವೇದಿಕೆ ಮೇಲೆ ಭಾಷಣ ಯಾವಾಗ ನಿಲ್ಲಿಸಬೇಕು ಎಂದು ಚೆನ್ನಾಗಿ ಗೊತ್ತಿರಬೇಕು. 24*7 ರಾಜಕಾರಣಿ ಮೋದಿ ಅವರಿಗೆ ಇದನ್ನು ಯಾರಾದರೂ ಹೇಳಿಕೊಡಬೇಕೆ?

ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅನುಮತಿ ಕೊಡಲು ಗೃಹ ಸಚಿವ ಅಮಿತ್‌ ಶಾ ಅವರಿಗೆ ಮನಸ್ಸಿರಲಿಲ್ಲ. ಪ್ರಧಾನಿ ಮತ್ತು ಅಧಿ​ಕಾರಿಗಳ ಜೊತೆಗಿನ ಸಭೆಗಳಲ್ಲೂ ಅಮಿತ್‌ ಶಾ ಖಂಡತುಂಡವಾಗಿ ಮದ್ಯ ಮಾರಾಟ ಬೇಡ ಎಂದು ವಾದಿಸಿದ್ದರಂತೆ.

ಕೊರೋನಾ ಸಂಕಷ್ಟಮುಗಿದ ನಂತರ ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷ?

‘ಮದ್ಯ ಮಾರಾಟಕ್ಕೆ ಅನುಮತಿ ನೀಡಿದರೆ ಲಾಕ್‌ಡೌನ್‌ಗೆ ಯಾರೂ ಮರ್ಯಾದೆ ಕೊಡುವುದಿಲ್ಲ. ಸಾರಾಯಿ ಅಂಗಡಿಗಳೇ ತೆರೆದಿರುವಾಗ ನಾವು ಮನೆಯಲ್ಲೇಕೆ ಕೂರಬೇಕು ಎಂದು ಉಳಿದವರು ಹೊರಗೆ ಬರುತ್ತಾರೆ. ಬೇಡವೇ ಬೇಡ’ ಎಂದು ಹೇಳಿದ್ದರಂತೆ. ಆದರೆ ಅಮರಿಂದರ್‌ ಸಿಂಗ್‌, ಪಳನಿ ಸ್ವಾಮಿ ಮತ್ತು ಇತರ ಮುಖ್ಯಮಂತ್ರಿಗಳ ಒತ್ತಡದಿಂದಾಗಿ ಪ್ರಧಾನಿ ಒಪ್ಪಿಗೆ ಕೊಡಬೇಕಾಗಿ ಬಂತಂತೆ. ಖಜಾನೆ ಪೂರ್ತಿ ಖಾಲಿ ಆಗಿರುವುದರಿಂದ ರಾಜ್ಯ ಸರ್ಕಾರಗಳಿಗೆ ಮದ್ಯ ಮಾರಾಟ ಮಾಡದೆ ಬೇರೆ ವಿಧಿ​ಯಿಲ್ಲ. ಮತ್ತು ಈಗ ರಾಜ್ಯದ ಖಜಾನೆಗೆ ಹಣ ಕೊಡುವಷ್ಟುಶಕ್ತಿ ಕೇಂದ್ರಕ್ಕೂ ಇಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

click me!