ಅಯೋಧ್ಯೆ ಮಸೀದಿಗೆ ಹಿಂದೂ ವ್ಯಕ್ತಿಯಿಂದ ಮೊದಲ ದೇಣಿಗೆ!

By Suvarna NewsFirst Published Oct 5, 2020, 8:02 AM IST
Highlights

ಅಯೋಧ್ಯೆ ಮಸೀದಿಗೆ ಮೊದಲ ದೇಣಿಗೆ ಹಿಂದೂ ವ್ಯಕ್ತಿಯಿಂದ!| 21 ಸಾವಿರ ನೀಡಿದ ಉಪನ್ಯಾಸಕ

ಅಯೋಧ್ಯೆ(ಅ.05): ಸುಪ್ರೀಂಕೋರ್ಟ್‌ ತೀರ್ಪಿನ ಅನುಸಾರವಾಗಿ ಅಯೋಧ್ಯೆಯಲ್ಲಿ 5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ನೂತನ ಮಸೀದಿಗೆ ಮೊದಲ ದೇಣಿಗೆ ಬಂದಿದ್ದು, ಅದನ್ನು ಹಿಂದು ಸಮುದಾಯದ ವ್ಯಕ್ತಿಯೊಬ್ಬರು ನೀಡಿದ್ದಾರೆ.

ಲಖನೌ ವಿಶ್ವವಿದ್ಯಾಲಯದಲ್ಲಿ ಕಾನೂನು ಉಪನ್ಯಾಸಕರಾಗಿರುವ ರೋಹಿತ್‌ ಶ್ರೀವಾಸ್ತವ ಎಂಬುವರು 21 ಸಾವಿರ ರು.ಗಳನ್ನು ಮಸೀದಿ ಟ್ರಸ್ಟ್‌ಗೆ ನೀಡಿದ್ದಾರೆ. ಹಿಂದು ಸೋದರನಿಂದ ಬಂದಿರುವ ಈ ದೇಣಿಗೆ ಭಾರತ- ಇಸ್ಲಾಮಿಕ್‌ ಸಂಸ್ಕೃತಿಗೆ ಉದಾಹರಣನೆಯಾಗಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಅಥರ್‌ ಹುಸೇನ್‌ ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿರುವ ರೋಹಿತ್‌, ಕೋಟ್ಯಂತರ ಭಾರತೀಯ ಹಿಂದುಗಳು ಹಾಗೂ ಮುಸಲ್ಮಾನರು ಒಟ್ಟಾಗಿ ಹಬ್ಬಗಳನ್ನು ಆಚರಿಸುತ್ತಾರೆ. ನನ್ನ ಮುಸ್ಲಿಂ ಸ್ನೇಹಿತರಿಲ್ಲದೆ ನಾನು ಹೋಳಿ ಅಥವಾ ದೀಪಾವಳಿಯನ್ನು ಆಚರಿಸುವುದಿಲ್ಲ. ಹಾಗೆಯೇ ನಾನಿಲ್ಲದೆ ಅವರು ಕೂಡ ಈದ್‌ ಆಚರಣೆ ಮಾಡುವುದಿಲ್ಲ. ಇದು ಕೋಟ್ಯಂತರ ಹಿಂದು ಹಾಗೂ ಮುಸ್ಲಿಮರ ಕತೆ. ಇತರೆ ಹಿಂದುಗಳು ಕೂಡ ಮಸೀದಿಗೆ ದೇಣಿಗೆ ನೀಡುವ ಮೂಲಕ ಮುಸ್ಲಿಂ ಸೋದರರಿಗೆ ಸಂದೇಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಅಯೋಧ್ಯೆಯ ಧನ್ನಿಪುರದಲ್ಲಿ ಮಸೀದಿ ನಿರ್ಮಾಣಕ್ಕೆ ಸುಪ್ರೀಂಕೋರ್ಟ್‌ 5 ಎಕರೆ ಮಂಜೂರು ಮಾಡಿದೆ. ಈ ಮಸೀದಿ ಮೆಕ್ಕಾದಲ್ಲಿನ ಕಾಬಾ ಶರೀಫ್‌ ರೀತಿ ಚೌಕಾಕಾರದಲ್ಲಿರಲಿದೆ.

click me!