ಕಾಂಗ್ರೆಸ್ ಗೆದ್ದರೆ ಕೃಷಿ ಕಾಯ್ದೆ ರದ್ದು| ಕಸದ ಬುಟ್ಟಿಗೆ ಎಸೆಯುವೆ: ರಾಹುಲ್| ಸರಿ ಇದ್ದರೆ ರೈತರೇಕೆ ಪ್ರತಿಭಟಿಸುತ್ತಿದ್ದರು?
ಮೋಗಾ(ಅ.05): ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇತ್ತೀಚೆಗೆ ಸಂಸತ್ತಿನ ಅನುಮೋದನೆ ಪಡೆದಿರುವ ಮೂರೂ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಘೋಷಿಸಿದ್ದಾರೆ.
ಭಾನುವಾರ ಅವರು ಇಲ್ಲಿ ನಡೆದ ‘ಖೇತಿ ಬಚಾವೋ ಯಾತ್ರಾ’ ವೇಳೆ ಟ್ರ್ಯಾಕ್ಟರ್ ರಾರಯಲಿ ನಡೆಸಿ ಬಳಿಕ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಒಂದು ಮಾತನ್ನು ನಿಮಗೆ ಖಚಿತವಾಗಿ ಹೇಳುತ್ತೇನೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಈ ಮೂರೂ ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುತ್ತೇವೆ ಹಾಗೂ ಅವನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ’ ಎಂದು ಗುಡುಗಿದರು.
undefined
‘ಒಂದು ವೇಳೆ ರೈತರು ಈ ಕಾಯ್ದೆಗಳಿಂದ ಖುಷಿಯಾಗಿದ್ದರೆ, ಅವರೇಕೆ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದರು? ಪ್ರಧಾನಿಯವರು ಇವು ರೈತಪರ ಕಾಯ್ದೆಗಳು ಎನ್ನುತ್ತಾರೆ. ಹಾಗಿದ್ದರೆ ಸಂಸತ್ತಿನಲ್ಲಿ ಏಕೆ ಮುಕ್ತವಾಗಿ ಅವರು ಚರ್ಚಿಸಲಿಲ್ಲ? ಕೊರೋನಾ ತಾಂಡವ ಆಡುತ್ತಿರುವ ಈ ಸಂದರ್ಭದಲ್ಲಿ ಅಷ್ಟೊಂದು ಗಡಿಬಿಡಿಯಿಂದ ಏಕೆ ಇವುಗಳನ್ನು ಜಾರಿ ಮಾಡಿದರು?’ ಎಂದು ರಾಹುಲ್ ಪ್ರಶ್ನಿಸಿದರು.
ಮಸೂದೆ ವಿರೋಧಿಗಳು ದಲ್ಲಾಳಿಗಳ ದಲ್ಲಾಳಿಗಳು
'ಕೃಷಿ ಕಾಯ್ದೆಗಳ ವಿರುದ್ಧ ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತಿವೆ’ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ತಿರುಗೇಟು ನೀಡಿದ್ದಾರೆ. ‘ಪ್ರತಿಭಟನೆಗಳು ಪಂಜಾಬ್ನಲ್ಲಿ ಮಾತ್ರ ನಡೆಯುತ್ತಿವೆ. ಏಕೆಂದರೆ ಅಲ್ಲಿ ಕಾಂಗ್ರೆಸ್ ಸರ್ಕಾರವಿದೆ’ ಎಂದಿದ್ದಾರೆ. ‘ರೈತ ಸಮುದಾಯ ಅಸಂತುಷ್ಟವಾಗಿದ್ದರೆ ಇಡೀ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದವು. ಇಡೀ ದೇಶದ ರೈತರು ಕೃಷಿ ಕಾಯ್ದೆ ಸ್ವಾಗತಿಸಿದ್ದಾರೆ ಎಂಬುದು ಇದರರ್ಥ’ ಎಂದು ಚಾಟಿ ಬೀಸಿದ್ದಾರೆ.
ಕೃಷಿ ಮಸೂದೆಯನ್ನು ವಿರೋಧಿಸುತ್ತಿರುವ ಪ್ರತಿಪಕ್ಷಗಳು ದಲ್ಲಾಳಿಗಳ ದಲ್ಲಾಳಿಗಳು. ಸದ್ಯ ಕೃಷಿಕರಿಗೆ ತಾವು ಬೆಳೆದ ಬೆಳೆಗೆ ಕಡಿಮೆ ಬೆಲೆ ದೊರಕುತ್ತಿದೆ ಮತ್ತು ಗ್ರಾಹಕರು ಹೆಚ್ಚಿನ ಬೆಲೆಗೆ ಕೊಂಡುಕೊಳ್ಳುತ್ತಿದ್ದಾರೆ. ದಲ್ಲಾಳಿಗಳು ಇಲ್ಲಿ ಬೆಲೆ ಏರಿಸುತ್ತಿದ್ದಾರೆ. ಆದರೆ ನೂತನ ಕೃಷಿ ಮಸೂದೆ ಈ ಸಮಸ್ಯೆ ಪರಿಹಾರ ಸೂಚಿಸುತ್ತದೆ. ಆದರೆ ಇದಕ್ಕೆ ವಿರೋಧಿಸುವ ಮೂಲಕ ವಿರೋಧ ಪಕ್ಷಗಳು ದಲ್ಲಾಳಿಗಳ ದಲ್ಲಾಳಿಗಳಾಗಿ ವರ್ತಿಸುತ್ತಿವೆ. ಆದರೆ ಸುಳ್ಳಿಗೆ ಹೆಚ್ಚು ಕಾಲವಿಲ್ಲ, ಸತ್ಯಕ್ಕೆ ಎಂದೂ ಸಾವಿಲ್ಲ ಎಂದು ತೀವ್ರವಾಗಿ ಕಿಡಿಕಾರಿದ್ದಾರೆ.