* ಹಿಂದಿ ಮೂಲಕ ಮನುವಾದ ಹೇರಿಕೆ ಯತ್ನ
* ಹಿಂದಿ ಬಡ ರಾಜ್ಯಗಳ ರಾಜ್ಯಗಳ ಭಾಷೆಯಷ್ಟೇ
* ಹಿಂದಿ ತಮಿಳರನ್ನು ಶೂದ್ರರನ್ನಾಗಿ ಮಾಡುತ್ತೆ: ಡಿಎಂಕೆ ನಾಯಕ ವಿವಾದ-
ಚೆನ್ನೈ(ಜೂ.07): ಹಿಂದಿ ಹೇರಿಕೆ ಬಗ್ಗೆ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕ, ರಾಜ್ಯಸಭಾ ಸಂಸದ ಟಿ.ಕೆ.ಎಸ್.ಇಳಂಗೋವನ್, ‘ಹಿಂದಿ ಭಾಷೆ ನಮ್ಮನ್ನು ಗುಲಾಮರನ್ನಾಗಿ ಮತ್ತು ಶೂದ್ರರನ್ನಾಗಿ ಮಾಡುತ್ತದೆ’ ಎಂದಿದ್ದಾರೆ. ಜೊತೆಗೆ, ‘ಹಿಂದಿ ಮೂಲಕ ನಮ್ಮ ಮೇಲೆ ಮನುಧರ್ಮ ಹೇರಿಕೆ ಯತ್ನ ನಡೆಯುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಹಿಂದಿ ಹೇರಿಕೆ’ ವಿವಾದದ ಬಗ್ಗೆ ಮೌನ ಮುರಿದ ಪಿಎಂ ಮೋದಿ, ಆರೋಪ ಮಾಡುವವರಿಗೆ ತಿರುಗೇಟು!
ಹಿಂದಿ ಹೇರಿಕೆ ವಿರುದ್ಧ ಆಯೋಜಿತ ಕಾರ್ಯಕ್ರಮದಲ್ಲಿ ಮಾತನಾಡಿದ ಇಳಂಗೋವನ್ ‘ಕೇಂದ್ರ ಸರ್ಕಾರ ಹಿಂದಿಯ ಮೂಲಕ ನಮ್ಮ ಮೇಲೆ ಮನು ಧರ್ಮ ಹೇರಿಕೆ ಯತ್ನ ಮಾಡುತ್ತಿದೆ. ಇದಕ್ಕೆ ನಾವು ಅವಕಾಶ ನೀಡಬಾರದು. ಬಿಟ್ಟರೆ ನಾವು ಗುಲಾಮರು ಮತ್ತು ಶೂದ್ರರಾಗುತ್ತೇವೆ. ಹಿಂದಿಯಿಂದ ನಮಗೆ ಏನೂ ಲಾಭವಿಲ್ಲ. ವೈವಿಧ್ಯತೆಯಲ್ಲಿ ಏಕತೆ ನಮ್ಮ ದೇಶದ ಹೆಗ್ಗುರುತು. ಎಲ್ಲಾ ಭಾಷೆಗಳ ಅಭಿವೃದ್ಧಿಗಾಗಿ ಅವುಗಳನ್ನು ಪ್ರೋತ್ರಾಹಿಸಬೇಕು. ತಮಿಳಿಗೆ 2000 ವರ್ಷಗಳ ಇತಿಹಾಸವಿದೆ. ಅಂದಿನಿಂದಲೂ ತಮಿಳು ಸಂಸ್ಕೃತಿಯನ್ನು ಸಮಾನತೆಯೊಂದಿಗೆ ಆಚರಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.
ಅಲ್ಲದೆ, ಹಿಂದಿಯೇತರ ಭಾಷಿಕ ರಾಜ್ಯಗಳಾದ ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಿಗೆ ಹೋಲಿಸಿದರೆ ಹಿಂದಿ ಭಾಷಿಕ ರಾಜ್ಯಗಳಾದ ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಉತ್ತರಾಖಂಡಗಳು ಬಡರಾಜ್ಯಗಳು’ ಎಂದು ಟೀಕಿಸಿದರು.
'ಹಿಂದಿ ನಮ್ಮ ರಾಷ್ಟ್ರ ಭಾಷೆ, ನಾವು ಗೌರವ ಕೊಡಬೇಕು': ನಟ ಅರ್ಜುನ್ ರಾಮ್‌ಪಾಲ್
ಇತ್ತೀಚೆಗಷ್ಟೇ ತಮಿಳುನಾಡಿನ ಸಚಿವ ಕೆ.ಪೊನ್‌ಮುಡಿ ಕೂಡಾ, ಹಿಂದಿ ಭಾಷೆ ಮಾತನಾಡುವವರು ರಾಜ್ಯದಲ್ಲಿ ಪಾನಿಪುರಿ ಮಾರುತ್ತಾರೆ ಎಂದು ವ್ಯಂಗ್ಯವಾಡಿದ್ದರು. ಈ ಮೂಲಕ ಹಿಂದಿ ಭಾಷೆ ಕಲಿಯುವುದು ಉತ್ತಮ ಉದ್ಯೋಗಕ್ಕೆ ದಾರಿ ಎಂಬ ವಾದಕ್ಕೆ ತಿರುಗೇಟು ನೀಡಿದ್ದರು.