ಹಿಮಾಚಲ ಪ್ರದೇಶ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ. ಇದೀಗ ಕಾಂಗ್ರೆಸ್ ಸಚಿವ, ಮಾಜಿ ಮುಖ್ಯಮಂತ್ರಿ ಪುತ್ರ ವಿಕ್ರಮಾದಿತ್ಯ ಸಿಂಗ್ ರಾಜೀನಾಮೆ ನೀಡಿದ್ದಾರೆ. ರಾಜ್ಯಸಭಾ ಚುನಾವಣೆ ಫಲಿತಾಂಶದ ಮರುದಿನವೇ ಈ ಬೆಳವಣಿಗೆಯಾಗಿದ್ದು, ಸಿಎಂ ಸುಖ್ವಿಂದರ್ ಕುರ್ಚಿ ಅಲುಗಾಡುತ್ತಿದೆ.
ಶಿಮ್ಲಾ(ಫೆ.28) ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರ ಅಲುಗಾಡುತ್ತಿದೆ. ತಮ್ಮ ರಾಜೀನಾಮೆ ವರದಿಯನ್ನು ಸ್ವತಃ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ತಳ್ಳಿ ಹಾಕಿದ್ದಾರೆ. ಪರಿಸ್ಥಿತಿ ತಿಳಿಗೊಳ್ಳುತ್ತಿದೆ ಅನ್ನುವಷ್ಟರಲ್ಲೇ ಇದೀಗ ಮತ್ತೊಂದು ತಲೆನೋವು ಎದುರಾಗಿದೆ. ಸುಖ್ವಿಂದರ್ ಸಂಪುಟದಲ್ಲಿ PWD ಸಚಿವರಾಗಿರುವ ವಿಕ್ರಮಾದಿತ್ಯ ಸಿಂಗ್ ರಾಜೀನಾಮೆ ನೀಡಿದ್ದಾರೆ. ವಿಕ್ರಮಾದಿತ್ಯ ಸಿಂಗ್ ರಾಜೀನಾಮೆಯಿಂದ ಹಿಮಾಚಲ ಪ್ರದೇಶ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಮಾಜಿ ಮುಖ್ಯಮಂತ್ರಿ, ದಿವಗಂತ ವಿದರ್ಭ ಸಿಂಗ್ ಪುತ್ರ ವಿಕ್ರಮಾದಿತ್ಯ ಸಿಂಗ್ ಹಿಮಾಚಲ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಸುಖ್ವಿಂದರ್ ಸಿಂಗ್ ಸಂಪುಟದಿಂದ ಹೊರಬದಿರುವ ವಿಕ್ರಮಾದಿತ್ಯ ಸಿಂಗ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪಕ್ಷದೊಳಗಿನ ಬಣರಾಜಕೀಯ, ಸಚಿವರಾಗಿ ಕೆಲಸ ಮಾಡಲು ಸಂಪುಟ ಸಹದ್ಯೋಗಿಗಳಿಂದ ಅಡ್ಡಿ, ನನ್ನನ್ನು ಅವಮಾನಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ ಇದರಿಂದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯುತ್ತಿದ್ದೇನೆ. ನನ್ನ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಸಲ್ಲಿಸುತ್ತಿದ್ದೇನೆ ಎಂದು ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ.
ಹಿಮಾಚಲ ಬಿರುಗಾಳಿ ನಡುವೆ ಅಸ್ಸಾಂನಲ್ಲಿ ಕಾಂಗ್ರೆಸ್‌ಗೆ ಶಾಕ್, ಪಕ್ಷ ತೊರೆದ ರಾಜ್ಯಾಧ್ಯಕ್ಷ!
ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಈ ಸರ್ಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಕೌನ್ಸಿಲ್ ಆಪ್ ಮಿನಿಸ್ಟರ್ಸ್ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ರಾಜ್ಯಸಭಾ ಚುನಾವಣಾ ಫಲಿತಾಂಶ ನೋವಾಗಿದೆ. ಕಳೆದೆರಡು ದಿನಗಳಿಂದ ಕಾಂಗ್ರೆಸ್ ಒಳಗೆ ನಡೆಯುತ್ತಿರುವ ಬೆಳವಣಿಗೆಯಿಂದ ತೀವ್ರ ಬೇಸರಗೊಂಡಿದ್ದೇನೆ. ಕಾಂಗ್ರೆಸ್ ಎಲ್ಲಿ ತಪ್ಪು ಮಾಡಿದೆ ಅನ್ನೋದು ಆಲೋಚಿಸಬೇಕಿದೆ ಎಂದು ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ.
ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರನ್ನು ಗೌರವಿಸುತ್ತೇನೆ. ಸರ್ಕಾರ ನಡೆಸಲು ಬೆಂಬಲ ನೀಡಿದ್ದೇನೆ. ಸಚಿವನಾಗಿ ಶೇಕಡಾ 100 ರಷ್ಟು ಶ್ರಮವಹಿಸಿ ಕೆಲಸ ಮಾಡಿದ್ದೇನೆ. ಆದರೆ ಕ್ಯಾಬಿನೆಟ್ ಸಚಿವರು, ಕಾಂಗ್ರೆಸ್ ನಾಯಕರು ನನ್ನ ಪ್ರಯತ್ನಕ್ಕೆ ಅಡ್ಡಗಾಲು ಹಾಕಲು ಯತ್ನಿಸಿದ್ದಾರೆ. ನನ್ನನ್ನು ಅವಮಾನಿಸುವ ಪ್ರಯತ್ನ ಮಾಡಿದ್ದಾರೆ. ಮಂತ್ರಿಮಂಡಲದ ನಡುವೆ ಸಮನ್ವಯತೆ ಇರಬೇಕು. ಆದರೆ ಗುಂಪಗಾರಿಗೆ, ಬಂಡಾಯದಿಂದ ನನ್ನ ನಂಬಿಕೆಗೆ ಚ್ಯುತಿ ಬಂದಿದೆ ಎಂಗು ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ.
ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು ರಾಜೀನಾಮೆ?
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿದ ಸಂಪೂರ್ಣ ಶ್ರೇಯಸ್ ನನ್ನ ತಂದೆ ಮಾಜಿ ಮುಖ್ಯಮಂತ್ರಿ ವಿದರ್ಭ ಸಿಂಗ್‌ಗೆ ಸಲ್ಲಲಿದೆ. ಈ ಮಾತನ್ನು ಯಾರೂ ಅಲ್ಲಗೆಳೆಯುವುದಿಲ್ಲ. 6 ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬರೋಬ್ಬರಿ 21 ವರ್ಷಗಳ ಕಾಲ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ತಂದೆಯನ್ನು ಅವಮಾನಿಸುವ ಕೆಲಸ ಮಾಡುತ್ತಿದೆ ಎಂದು ವಿಕ್ರಮಾದಿತ್ಯ ಸಿಂಗ್ ಆರೋಪಿಸಿದ್ದಾರೆ.