* ಹೊಳಲ್ಕೆರೆಯ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ.
* ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯಿಂದ ದಾಳಿ.
* ಪ್ರಜ್ವಲ್ ಲಾಡ್ಜ್ ನ ಟಾಯ್ಲೆಟ್ ರೂಮ್‌ನಲ್ಲಿ ಅಡಗುತಾಣ ಮಾಡಿಕೊಂಡು ದಂಧೆ.
* ಗ್ರಾಮೀಣ ಭಾಗದ ರೈತರ ಟಾರ್ಗೆಟ್ ಮಾಡಿ ವೇಶ್ಯಾವಾಟಿಕೆ ದಂಧೆ ಆರೋಪ
ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ(ಮೇ.07) ಹೊರ ರಾಜ್ಯದ ಯುವತಿಯರನ್ನು ಬಳಸಿಕೊಂಡು ಹೈಟೆಕ್ ವೆಶ್ಯಾವಾಟಿಕೆ ನಡೆಸುತ್ತಿದ್ದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಹಿಂಭಾಗದ ಲಾಡ್ಜ್ ಮೇಲೆ ಮೈಸೂರು ಒಡನಾಡಿ ಸೇವಾ ಸಂಸ್ಥೆ ಪೊಲೀಸರ ಸಹಕಾರದೊಂದಿಗೆ ದಾಳಿ ನಡಿಸಿ ಮೂವರು ಪುರುಷರು, ಓರ್ವ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ.
ಮೈಸೂರು ಒಡನಾಡಿ ಸಂಸ್ಥೆ ಖಚಿತ ಮಾಹಿತಿ ಪಡೆದು ಚಿತ್ರದುರ್ಗ ಡಿಸಿಐಬಿ ಇನ್ಸ್ಪೆಕ್ಟರ್ ಕಿರಣ್ ಕುಮಾರ್ ನೇತೃತ್ವದಲ್ಲಿ ಮಧ್ಯಾಹ್ನ ಪ್ರಜ್ವಲ್ ಲಾಡ್ಜ್ ಮೇಲೆ ದಾಳಿ ನಡೆಸಿದೆ. ಈ ವೇಳೆ ಲಾಡ್ಜ್ ಮ್ಯಾನೇಜರ್ ಹಗ್ಗದ ಸಹಾಯದಿಂದ ಜಿಗಿದು ಓಡಿ ಹೋಗಲು ಯತ್ನಿಸಿದಾಗ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಲಾಡ್ಜ್ ಒಳಗೆ ಹೋಗಿ ಪರಿಶೀಲನೆ ನಡೆಸಿದಾಗ ಲಾಡ್ಜ್ನ ಟಾಯ್ಲೆಟ್ ರೂಮಿನಲ್ಲಿ ಹೊರ ನೋಟಕ್ಕೆ ಗೋಡೆಯಂತೆ ಕಾಣಿಸುವ, ಗೋಡೆಯ ಒಳಗೆ ಅಡಗುತಾಣ ನಿರ್ಮಿಸಿಕೊಂಡು ಈ ದಂಧೆ ನಡೆಸುತ್ತಿರುವುದು ಗೊತ್ತಾಗಿದೆ.
ಯೋಜಿತ ರೀತಿಯಲ್ಲಿ ಈ ದಂಧೆ ನಡೆಯುತ್ತಿದ್ದು, ಲಾಡ್ಜ್ ಹೊರಗಡೆ ಒಬ್ಬ ಹಾಗೂ ಮೊದಲ ಮಹಡಿಯ ರಿಸಪ್ಷನಿಸ್ಟ್ ಜಾಗದಲ್ಲಿ ಮೂವರನ್ನು ಕಣ್ಗಾವಲಿಗೆ ಇಟ್ಟುಕೊಳ್ಳಲಾಗಿತ್ತು. ಪೊಲೀಸರು ಬರುವುದು ಗೊತ್ತಾದ ಕೂಡಲೇ ರಿಸಪ್ಷನಿಸ್ಟ್ ಕಾಲ ಕೆಳಗೆ ಇದ್ದ ಸ್ವಿಚ್ ಒತ್ತಿದ ತಕ್ಷಣ ಅದು ಮೂರನೇ ಮಹಡಿಯಲ್ಲಿ ದೇವರ ನಾಮದೊಂದಿಗೆ ರಿಂಗ್ ಆಗುತ್ತೆ. ಕೂಡಲೇ ಯುವತಿಯರು ಟಾಯ್ಲೆಟ್ ರೂಮ್ ಒಳಗೆ ಹೋಗಿ ಟೈಲ್ಸ್ ಮೂಲಕ ಮಾಡಲ್ಪಟ್ಟ ಬಾಗಿಲನ್ನು ತೆಗೆದು ಅವಿತುಕೊಳ್ಳುತ್ತಿದ್ದದ್ದು ಗೊತ್ತಾಗಿದೆ. ಎಲ್ಲ ಪರಿಶೀಲನೆ ನಡೆಸಿದ ಬಳಿಕ ನಾಲ್ವರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಕಾರ್ಯಾಚರಣೆಯಲ್ಲಿ ಮೈಸೂರು ಒಡನಾಡಿ ಸೇವಾ ಸಂಸ್ಥೆಯ ರಕ್ಷಣಾ ತಂಡದಲ್ಲಿ ಪ್ರದೀಪ್, ಸುಜನ, ಶಶಾಂಕ್, ಸುಮಾ ಹಾಗೂ ಮಹಾಲಕ್ಷ್ಮಿ ಇದ್ದರು.
ಗ್ರಾಮೀಣ ಭಾಗದಲ್ಲಿ ವೇಶ್ಯವಾಟಿಕೆ ನಡೆಸೋದಕ್ಕೆ ಕಾರಣ ರೈತರೇ ಇವರ ಟಾರ್ಗೆಟ್
ಉಸಿರಾಡುವುದಕ್ಕೂ ಅವಕಾಶವಿಲ್ಲದ ಅಡಗುದಾಣ ನಿರ್ಮಿಸಿಕೊಂಡು ವೆಶ್ಯಾವಾಟಿಕೆ ಮಾಡಲಾಗುತ್ತಿದೆ. ಇಂತಹ ಕೃತ್ಯಗಳನ್ನು ನಗರ ಪ್ರದೇಶಗಳ ಕೆಲವು ಲಾಡ್ಜ್ಗಳಲ್ಲಿ ಕಂಡುಬAದಿವೆ. ಆದರೆ ಇದು ಗ್ರಾಮಾಂತರ ಪ್ರದೇಶಕ್ಕೂ ವ್ಯಾಪಿಸಿರುವುದು ನಿಜಕ್ಕೂ ಆತಂಕಕಾರಿ. ಇಲ್ಲಿಯ ರೈತರನ್ನೇ ಟಾರ್ಗೆಟ್ ಮಾಡಿಕೊಂಡು ಈ ದಂಧೆ ನಡೆಸುತ್ತಿರುವುದು ಗೊತ್ತಾಗಿದೆ. ಇದರಿಂದ ಸಮಾಜ ಆರ್ಥಿಕ, ಸಾಂಸ್ಕೃತಿ ಹಾಗೂ ಸಾಮಾಜಿಕವಾಗಿ ದುಸ್ಥಿತಿ ತಲುಪಲಿದೆ. ಇದನ್ನು ಸಾಧ್ಯವಾದಷ್ಟು ತಡೆ ಹಿಡಿಯಬೇಕು ಎಂಬ ಉದ್ದೇಶದಿಂದ ಖಚಿತ ಮಾಹಿತಿ ಪಡೆದು, ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಸಿದ್ದೇವೆ. ಲಾಡ್ಜ್ಗಳಲ್ಲಿ ಅಡಗು ತಾಣಗಳನ್ನು ನಿರ್ಮಿಸುವುದಕ್ಕೆ ಅವಕಾಶವಿಲ್ಲ. ಅಂತಹ ಲಾಡ್ಜ್ಗಳನ್ನು ಗುರುತಿಸಿ ಶಾಶ್ವತವಾಗಿ ಮುಚ್ಚಬೇಕು ಎಂದು ಮಾನವ ಹಕ್ಕುಗಳ ಆಯೋಗ ಆದೇಶ ಮಾಡಿದೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಅಂತಹ ಲಾಡ್ಜ್ ಮಗಳನ್ನು ಗುರುತಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಒಡನಾಡಿ ಸಂಸ್ಥೆ ನಿರ್ದೇಶಕರಾದ ಸ್ಟಾನ್ಲಿ ಒತ್ತಾಯಿಸಿದರು........,