ಮಹಾಮಳೆಗೆ ತತ್ತರಿಸಿದ ಮುಂಬೈ ನಗರಿ: ನಾಲ್ವರು ಬಲಿ, ರೈಲು ವಿಮಾನ ಸೇವೆಯಲ್ಲಿ ವ್ಯತ್ಯಯ

By Kannadaprabha NewsFirst Published Jul 26, 2024, 12:32 PM IST
Highlights

ಮುಂಬೈ, ಪುಣೆ ಸೇರಿದಂತೆ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಭಾರೀ ಮಳೆ ಮುಂದುವರೆದಿದ್ದು ಸಾಮಾನ್ಯ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಪುಣೆಯಲ್ಲಿ ಮಹಾಮಳೆಗೆ 4 ಮಂದಿ ಸಾವನ್ನಪ್ಪಿದ್ದಾರೆ.

ಮುಂಬೈ/ಪುಣೆ: ಮುಂಬೈ, ಪುಣೆ ಸೇರಿದಂತೆ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಭಾರೀ ಮಳೆ ಮುಂದುವರೆದಿದ್ದು ಸಾಮಾನ್ಯ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಪುಣೆಯಲ್ಲಿ ಮಹಾಮಳೆಗೆ 4 ಮಂದಿ ಸಾವನ್ನಪ್ಪಿದ್ದಾರೆ. ಮುಂಬೈನ ಬಹುತೇಕ ಕಡೆ ರಸ್ತೆಗಳಲ್ಲಿ ನೀರು ತುಂಬಿಕೊಂಡ, ರಸ್ತೆಗಳಲ್ಲೇ ನೀರು ಹರಿಯುತ್ತಿರುವ ದೃಶ್ಯಕಂಡುಬಂದಿದೆ. ಮತ್ತೊಂದೆಡೆ ಸ್ಥಳೀಯ ರೈಲು ಸೇವೆಗಳಲ್ಲೂ ವ್ಯತ್ಯಯವಾದ ಕಾರಣ ಲಕ್ಷಾಂತರ ಜನರು ಸಮಸ್ಯೆ ಅನುಭವಿಸಿದರು.

 ಮತ್ತೊಂದೆಡೆ ಭಾರೀ ಮಳೆ ಹಿನ್ನೆಲೆಯಲ್ಲಿ ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮುಂಬೈ ಮತ್ತು ಉಪನಗರಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಪರಿಣಾಮ, ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ರಸ್ತೆಗಳು ಜಲಾವೃತವಾಗಿದೆ. ಸ್ಥಳೀಯ ರೈಲು ಸಂಚಾರ ಓಡಾಟದಲ್ಲಿ ವಿಳಂಬವಾಗಿದೆ. ಮತ್ತೊಂದೆಡೆ ವಿಮಾನ ಹಾರಾಟದಲ್ಲಿಯವೂ ವ್ಯತ್ಯಯವಾಗಿದೆ. ಇಲ್ಲಿನ ವಿಹಾರ್ ಮತ್ತು ಮೊದಕ್ ಸಾಗರ್ ಕೆರೆ ತುಂಬಿ ಹರಿಯುತ್ತಿದ್ದು, ಮಹಾನಗರಕ್ಕೆ ನೀರು ಹರಿಸುವ ಏಳು ಜಲಾಶಯಗಳ ಪೈಕಿ 4 ಜಲಾಶಯಗಳು ಈಗಾಗಲೇ ಭರ್ತಿಯಾಗಿವೆ. ಇದರ ಜೊತೆಗೆ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮುಂಬೈನಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

Latest Videos

ಅಟಲ್ ಸೇತು ಮೇಲೆ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ ಇಂಜಿನಿಯರ್: ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಪುಣೆಯಲ್ಲಿ ಮಳೆಗೆ ನಾಲ್ವರು ಬಲಿ:

ಮತ್ತೊಂದೆಡೆ ಪುಣೆಯಲ್ಲಿಯೂ ವ್ಯಾಪಕ ಮಳೆಯಾಗುತ್ತಿದ್ದು, ಮಳೆ ಸಂಬಂಧಿ ದುರ್ಘಟನೆಗಳಿಗೆ ನಾಲ್ವರು ಬಲಿಯಾಗಿದ್ದಾರೆ. ವಿವಿಧ ಪ್ರದೇಶಗಳಲ್ಲಿ ಪ್ರವಾಹದಲ್ಲಿ ಸಿಕ್ಕಿಬಿದ್ದಿದ್ದ 400 ಜನ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇಲ್ಲಿನ ಸಿನ್ಹಗಡ್‌ ಮತ್ತು ಇತರ ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗಿದ್ದು, ಈ ಭಾಗದಲ್ಲಿ ಎರಡು ಸೇನಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಪುಣೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್‌ ಘೋಷಿಸಿದ್ದು, ಮುಂದಿನ 48 ದಿನಗಳಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಿದೆ. ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸಾರ್ವಜನಿಕರಿಗೆ ಸೂಚಿಸಿದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್‌ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

ಕೋತಿ ಆಯ್ತು ನಾಯಿ ಆಯ್ತು ಈಗ ಕಾಗೆಗಳ ಬಸ್‌ ರೈಡ್ : ವೀಡಿಯೋ ಸಖತ್ ವೈರಲ್

ಥಾಣೆಯಲ್ಲಿ ನೆರೆಯಲ್ಲಿ ಸಿಲುಕಿದ್ದ ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಜಿಲ್ಲೆಯಲ್ಲಿ 5 ಗಂಟೆ ಅವಧಿಯಲ್ಲಿ 138 ಮೀಮೀ ಗೂ ಅಧಿಕ ಮಳೆಯಾಗಿದೆ. ಮಹೇರ್‌ನಲ್ಲಿ 30 ಅನಾಥಶ್ರಮದಲ್ಲಿದ್ದ 30 ಮಕ್ಕಳನ್ನು ಕೂಡಾ ರಕ್ಷಣಾ ಸಿಬ್ಬಂದಿ ಸುರಕ್ಷಿತ ಪ್ರದೇಶಕ್ಕೆ ವರ್ಗಾಯಿಸಿದ್ದಾರೆ. ಅಂಬೇರ್‌ನಾಥ್‌ನಲ್ಲಿ ಪ್ರವಾಹದಲ್ಲಿ ಸಿಕ್ಕಿದ್ದ ವೃದ್ಧಾಶ್ರಮದ 18 ಹಿರಿಯರನ್ನು ರಕ್ಷಿಸಲಾಗಿದೆ. ಇನ್ನು ಭಾರೀ ಮಳೆಗೆ ಕೊಲ್ಲಾಪುರ ಕೂಡ ಜಲಾವೃತವಾಗಿದ್ದು, ಜನ ಜೀವನದ ಮೇಲೆ ಪರಿಣಾಮ ಬೀರಿದೆ.

click me!