ಕೋವಿನ್‌ಗೆ ವೈದ್ಯರ ಹೆಸರು ಸೇರಿಸಲು ಇಂದೇ ಕಡೆ ದಿನ!

By Suvarna NewsFirst Published Jan 12, 2021, 8:02 AM IST
Highlights

ಕೋವಿನ್‌ಗೆ ಆರೋಗ್ಯ ಕಾರ್ಯಕರ್ತರ ಹೆಸರು ಸೇರಿಸಲು ಇಂದೇ ಕಡೆ ದಿನ| ಮುಂಚೂಣಿ ಸಿಬ್ಬಂದಿ ಹೆಸರು ಸೇರಿಸಲು ಜ.25 ಕಡೆಯ ದಿನ| ಕೋವಿನ್‌ ಆ್ಯಪ್‌ನಲ್ಲಿ ಹೆಸರು ಸೇರ್ಪಡೆ ಗಡುವು

ಪುಣೆ(ಜ.12): ಮೊದಲ ಹಂತದಲ್ಲಿ ಉಚಿತವಾಗಿ ಕೋವಿಡ್‌ ಲಸಿಕೆ ಪಡೆಯುವ ಅರ್ಹತೆ ಪಡೆದುಕೊಂಡಿರುವ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಸಿಬ್ಬಂದಿ ಕೋ​-ವಿನ್‌ ಆ್ಯಪ್‌ನಲ್ಲಿ ಹೆಸರು ಸೇರ್ಪಡೆ ಮಾಡಲು ಕೇಂದ್ರ ಸರ್ಕಾರ ಅಂತಿಮ ದಿನದ ಗಡುವು ನಿಗದಿ ಮಾಡಿದೆ.

ಅದರನ್ವಯ ಆರೋಗ್ಯ ಕಾರ್ಯಕರ್ತರ ಹೆಸರು ಸೇರ್ಪಡೆ ಜ.12ಕ್ಕೆ ಮತ್ತು ಮುಂಚೂಣಿ ಸಿಬ್ಬಂದಿ ಹೆಸರು ಸೇರ್ಪಡೆಗೆ ಜ.25 ಕಡೆಯ ದಿನವೆಂದು ನಿಗದಿ ಪಡಿಸಲಾಗಿದೆ. ಈ ಗಡುವಿನೊಳಗೆ ಹೆಸರು ಸೇರ್ಪಡೆ ಮಾಡಲಾಗದವರು ಮೊದಲ ಹಂತದಲ್ಲಿ ಲಸಿಕೆ ಪಡೆಯುವುದರಿಂದ ವಂಚಿತರಾಗಲಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಲಸಿಕೆ ಆಂದೋಲನದ ಹೆಚ್ಚುವರಿ ಕಾರ್ಯದರ್ಶಿ ಡಾ. ಮಹೇಶ್‌ ಕುಮಾರ್‌, ಹೆಸರು ಸೇರ್ಪಡೆ ಸಂಬಂಧ ನಾವು ಈಗಾಗಲೇ ಹಲವು ಬಾರಿ ರಾಜ್ಯಗಳಿಗೆ ಮಾಹಿತಿ ನೀಡಿದ್ದೇವೆ. ಹೆಸರನ್ನು ಪೂರ್ವ ನೋಂದಣಿ ಮಾಡಿಕೊಂಡವರಿಗೆ ಮಾತ್ರವೇ ಮೊದಲ ಹಂತದಲ್ಲಿ ಲಸಿಕೆ ವಿತರಿಸಲಾಗುವುದು. ನಿಗದಿತ ಗಡುವಿನ ಬಳಿಕ ಯಾವುದೇ ಹೊಸ ಹೆಸರು ಸೇರ್ಪಡೆಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ 3 ಕೋಟಿ ಆರೋಗ್ಯ ಸಿಬ್ಬಂದಿ ಮತ್ತು ಮುಂಚೂಣಿ ಸಿಬ್ಬಂದಿಗೆ ಉಚಿತವಾಗಿ ಲಸಿಕೆ ವಿತರಿಸಲು ನಿರ್ಧರಿಸಿದೆ. ನಂತರದಲ್ಲಿ 60 ವರ್ಷ ಮೇಲ್ಪಟ್ಟಆರೋಗ್ಯವಂತರು ಮತ್ತು ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 50 ವರ್ಷದೊಳಗಿನವರಿಗೆ ಲಸಿಕೆ ವಿತರಿಸಲು ನಿರ್ಧರಿಸಿದೆ. ಆದರೆ ಇವರಿಗೆ ಲಸಿಕೆ ಉಚಿತವೋ ಅಥವಾ ನಿಗದಿತ ಶುಲ್ಕ ಭರಿಸಬೇಕೋ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿಲ್ಲ.

click me!