
ನವದೆಹಲಿ(ಜ.12): ವಿಶ್ವದಲ್ಲೇ ತಲ್ಲಣ ಮೂಡಿಸಿರುವ ಕೊರೋನಾ ಸೋಂಕಿಗೆ ಕಡಿವಾಣ ಹಾಕಲು ಭಾರತ ಅನುಮೋದಿಸಿರುವ 2 ಲಸಿಕೆಗಳು ವಿಶ್ವದಲ್ಲೇ ಅಗ್ಗ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ‘ಮೊದಲ ಹಂತದಲ್ಲಿ ಲಸಿಕೆ ಪಡೆಯಲಿರುವ 3 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಸಿಬ್ಬಂದಿಯ ಸಂಪೂರ್ಣ ಲಸಿಕಾ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ’ ಎಂದು ಘೋಷಿಸಿದ್ದಾರೆ.
ಅಲ್ಲದೆ, ‘ಮೊದಲ ಹಂತದಲ್ಲಿ ಯಾವುದೇ ಜನಪ್ರತಿನಿಧಿಗಳು ಲಸಿಕೆ ಪಡೆಯುವುದಿಲ್ಲ’ ಎನ್ನುವ ಮೂಲಕ, ಸರ್ಕಾರದ ಮೊದಲ ಆದ್ಯತೆ ಕೊರೋನಾ ಯೋಧರು ಎಂದು ಸ್ಪಷ್ಟಪಡಿಸಿದ್ದಾರೆ.
ಜ.16ರಂದು ಲಸಿಕೆ ವಿತರಣೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸೋಮವಾರ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು, ‘ವಿಶ್ವದಲ್ಲೇ ಅತಿದೊಡ್ಡ ಲಸಿಕಾ ಅಭಿಯಾನ ಜ.16ಕ್ಕೆ ಆರಂಭವಾಗಲಿದ್ದು, ಮುಂದಿನ ಕೆಲ ತಿಂಗಳಲ್ಲಿ ಸುಮಾರು 30 ಕೋಟಿ ಜನರಿಗೆ ಕೊರೋನಾ ಲಸಿಕೆ ನೀಡಲಾಗುತ್ತದೆ. ಇದುವರೆಗೆ ವಿಶ್ವದ 50ಕ್ಕೂ ಹೆಚ್ಚು ದೇಶಗಳಲ್ಲಿ 2.5 ಕೋಟಿ ಜನರಿಗೆ ವಿತರಿಸಿರುವ ಕೊರೋನಾ ಲಸಿಕೆ ಪ್ರಮಾಣಕ್ಕೆ ಹೋಲಿಸಿದರೆ ಇದು ಅತ್ಯಂತ ಬೃಹತ್ ಪ್ರಮಾಣದ್ದು’ ಎಂದರು.
‘ಭಾರತ ಅನುಮೋದಿಸಿರುವ ಎರಡು ಲಸಿಕೆಗಳ ವೆಚ್ಚವು, ವಿಶ್ವದ ಯಾವುದೇ ಲಸಿಕೆಗಿಂತ ಅಗ್ಗ. ಈ ಎರಡೂ ಲಸಿಕೆಗಳ ಜೊತೆಗೆ ಇನ್ನೂ ನಾಲ್ಕು ಕಂಪನಿಗಳ ಲಸಿಕೆ ಅಭಿವೃದ್ಧಿಯ ವಿವಿಧ ಹಂತದಲ್ಲಿವೆ. ದೇಶದಲ್ಲಿ 2ನೇ ಹಂತದ ಲಸಿಕೆ ವಿತರಣೆ ಆರಂಭವಾಗುವ ಹೊತ್ತಿಗೆ ಅವು ಕೂಡಾ ಬಳಕೆಗೆ ಲಭ್ಯವಾಗುವ ವಿಶ್ವಾಸವಿದೆ. ಕೊರೋನಾ ವಿರುದ್ಧ ಹೋರಾಟದಲ್ಲಿ ಭಾರತ ನಿರ್ಣಾಯಕ ಹಂತ ತಲುಪಿದೆ’ ಎಂದು ಹೇಳಿದರು.
ಅನುಮಾನ ಬೇಡ:
ದೇಶಿ ಲಸಿಕೆ ಕೋವ್ಯಾಕ್ಸಿನ್‌ಗೆ ಅನುಮತಿ ನೀಡಿರುವ ಕುರಿತು ಎದ್ದಿರುವ ಅನುಮಾನಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ‘ದೇಶದ ನಾಗರಿಕರಿಗೆ ಗುಣಮಟ್ಟದ ಲಸಿಕೆ ನೀಡಲು ವಿಜ್ಞಾನಿಗಳು ಅಗತ್ಯವಾದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಲಸಿಕೆ ವಿಷಯದಲ್ಲಿ ವಿಜ್ಞಾನಿಗಳ ಮಾತೇ ಅಂತಿಮ ಎಂಬುದನ್ನು ನಾನು ಕೂಡಾ ಸ್ಪಷ್ಟಪಡಿಸಿಕೊಂಡೇ ಬಂದಿದ್ದೇನೆ. ಭಾರತದಲ್ಲಿ ಅನುಮೋದನೆ ಪಡೆಯಲ್ಪಟ್ಟಎರಡೂ ಲಸಿಕೆಗಳು ‘ಮೇಡ್ ಇನ್ ಇಂಡಿಯಾ’ ಎಂಬುದು ಹೆಮ್ಮೆಯ ವಿಷಯ. ಒಂದು ವೇಳೆ ಲಸಿಕೆಗಾಗಿ ನಾವು ವಿದೇಶಗಳನ್ನು ಅವಲಂಬಿಸಬೇಕಾಗಿ ಬಂದಿದ್ದರೆ ಭಾರತ ಎಷ್ಟುಕಷ್ಟಪಡಬೇಕಾಗಿ ಬರುತ್ತಿತ್ತು ಎಂಬುದನ್ನು ನಾವು ಯೋಚಿಸಬೇಕು’ ಎಂದರು.
ಇತಿಹಾಸದ ಪಾಠ:
ತಜ್ಞರು ಮತ್ತು ವೈಜ್ಞಾನಿಕ ಸಮುದಾಯದ ಸಲಹೆ ಅನ್ವಯ ಕೊರೋನಾ ಯೋಧರಿಗೆ ಮೊದಲ ಹಂತದಲ್ಲಿ ಲಸಿಕೆ ವಿತರಿಸಲಾಗುತ್ತಿದೆ. ಮುಂದಿನ ಹಂತದಲ್ಲಿ ಉಳಿದ ಅರ್ಹರಿಗೆ ಲಸಿಕೆ ವಿತರಣೆಯಾಗಲಿದೆ. ಇದಕ್ಕಾಗಿ ನಾವು ಕೋ ವಿನ್ ಆ್ಯಪ್ ಅಭಿವೃದ್ಧಿಪಡಿಸಿದ್ದೇವೆ. ಫಲಾನುಭವಿಗಳನ್ನು ಆಧಾರ್ ನೆರವಿನೊಂದಿಗೆ ಗುರುತಿಸಲಾಗುವುದು ಮತ್ತು ಅವರಿಗೆ 2ನೇ ಡೋಸ್ ನೀಡಿಕೆಯನ್ನು ಖಚಿತಪಡಿಸಿಕೊಳ್ಳಲಾಗುವುದು. ಮೊದಲ ಲಸಿಕೆ ಪಡೆಯುತ್ತಲೇ ಕೋ ವಿನ್‌ನಲ್ಲಿ ಡಿಜಿಟಲ್ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಸೃಷ್ಟಿಯಾಗುತ್ತದೆ. ಇದು ಎರಡನೇ ಲಸಿಕೆಗೆ ರಿಮೈಂಡರ್ ರೀತಿ ಕೂಡಾ ಬಳಕೆಯಾಗಲಿದೆ. ಬಳಿಕ ಎರಡನೇ ಸರ್ಟಿಫಿಕೆಟ್ ಕೂಡಾ ಸೃಷ್ಟಿಯಾಗುತ್ತದೆ ಎಂದು ಹೇಳಿದರು.
ಉತ್ತಮ ಸ್ಥಿತಿಯಲ್ಲಿ ಭಾರತ:
‘ಸೋಂಕು ಹರಡುವಿಕೆ ವಿಷಯದಲ್ಲಿ ಭಾರತ ವಿಶ್ವದ ಇತರೆ ದೇಶಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ. ಇದು ಸಂತಸದ ವಿಷಯ. ಆದರೆ ಇದು ನಿರ್ಲಕ್ಷ್ಯತನಕ್ಕೆ ಕಾರಣವಾಗಬಾರದು. ಸೋಂಕಿನ ಬಗ್ಗೆ 7-8 ತಿಂಗಳ ಹಿಂದೆ ಜನರಲ್ಲಿದ್ದ ಆತಂಕ ಈಗ ಕಾಣುತ್ತಿಲ್ಲ. ಈ ಆತ್ಮವಿಶ್ವಾಸವು, ಆರ್ಥಿಕ ಚಟುವಟಿಕೆಗಳ ಮೇಲೂ ಧನಾತ್ಮಕ ಪರಿಣಾಮಗಳನ್ನು ಬೀರಿದೆ’ ಎಂದರು.
ಕೊರೋನಾ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಗ್ಗೂಡಿ ಕೆಲಸ ಮಾಡಿವೆ. ಇದು ಒಕ್ಕೂಟ ವ್ಯವಸ್ಥೆಗೆ ಒಂದು ಅಪೂರ್ವ ಉದಾಹರಣೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ