ಹಾಥ್ರಸ್ ಕಾಲ್ತುಳಿತ ದುರಂತ: ಹಸುಗೂಸಿನ ಮೃತದೇಹ ಕಂಡು ಶವಾಗಾರ ಸಿಬ್ಬಂದಿಯೇ ಕಣ್ಣೀರು

By Kannadaprabha News  |  First Published Jul 4, 2024, 9:48 AM IST

ಹಾಥ್ರಸ್ ಕಾಲ್ತುಳಿತ ದುರಂತದಲ್ಲಿ ಕೊನೆಯುಸಿರೆಳೆದ ಹಸುಗೂಸಿಗೆ ಉತ್ತರ ಪ್ರದೇಶದ ಹಾಥ್ರಸ್‌ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಪೋಸ್ಟ್ ಮಾರ್ಟಂ ನಡೆಸುವಾಗ ಶವಾಗಾರದ ಸಿಬ್ಬಂದಿಯೇ ಕಣ್ಣೀರಿಟ್ಟ ಘಟನೆ ನಡೆಯಿತು.


ಹಾಥ್ರಸ್‌ (ಉ.ಪ್ರ.) :  ಬಿಳಿಬಟ್ಟೆಯೊಂದರಲ್ಲಿ ಸುತ್ತಿಟ್ಟ ಎಂಟು ತಿಂಗಳ ಹಸುಗೂಸು. ದೇವರ ಅನುಗ್ರಹದೊಂದಿಗೆ ಎಂಟು ತಿಂಗಳ ಹಿಂದಷ್ಟೇ ಪೋಷಕರ ಮಡಿಲು ಸೇರಿದ್ದ ಮಗು ಅದು. ಅಮ್ಮನ ಒತ್ತಾಸೆಯೋ ಅಥವಾ ಅಪ್ಪನ ಅಭಿಲಾಷೆಯೋ ಗೊತ್ತಿಲ್ಲ, ಮೌಢ್ಯದ ಯಜಮಾನ ಬೋಲೆ ಬಾಬಾ ಕರೆದರು ಎಂಬ ಕಾರಣಕ್ಕೆ ಪೋಷಕರ ಜೊತೆ ಬಂದಿತ್ತು. ಚರಣಧೂಳಿನ ಆಸೆಗೆ ಬಿದ್ದ ಅಂಧ ಶ್ರದ್ಧಾಳುಗಳಿಂದಾಗಿ ಕಾಲ್ತುಳಿತಕ್ಕೆ ಸಿಕ್ಕಿ ಎಂಟೇ ತಿಂಗಳ ಅವಧಿಯಲ್ಲಿ ಮತ್ತೆ ಆ ಮಗು ದೇವರಪಾದ ಸೇರಿದೆ!

ಮಂಗಳವಾರ ಸಂಭವಿಸಿದ ಹಾಥ್ರಸ್ ಕಾಲ್ತುಳಿತ ದುರಂತದಲ್ಲಿ ಕೊನೆಯುಸಿರೆಳೆದ ಹಸುಗೂಸಿಗೆ ಉತ್ತರ ಪ್ರದೇಶದ ಹಾಥ್ರಸ್‌ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಪೋಸ್ಟ್ ಮಾರ್ಟಂ ನಡೆಸಿ, ಪೋಷಕರಿಗೆ ಒಪ್ಪಿಸಲಾಯಿತು. ಹೆಚ್ಚು ಕಡಿಮೆ 36 ಮೃತದೇಹಗಳ ಪೋಸ್ಟ್ ಮಾರ್ಟಂ ನಡೆದರೂ ಶವಾಗಾರ ಜಗ್ಗಿರಲಿಲ್ಲ. ಆದರೆ ಹಸುಗೂಸಿನ ದೇಹಕ್ಕೆ ಪೋಸ್ಟ್ ಮಾರ್ಟಂ ಸಲಕರಣೆಗಳು ಇಟ್ಟಾಗ ಒಮ್ಮೆ ಕಣ್ಣೀರು ಬಿದ್ದಂತಾಯಿತು. ಶವಾಗಾರಕ್ಕೆ ಮೃತದೇಹಗಳೆಲ್ಲ ವಿಶೇಷವಲ್ಲ. ಆದರೆ ಮೌಢ್ಯ ಬಿತ್ತುವ ಒಬ್ಬ ಬಾಬಾನ ಕರೆಗೆ ಓಗೊಟ್ಟು ತನ್ನದಲ್ಲದ ತಪ್ಪಿಗೆ ಉಸಿರು ಚೆಲ್ಲಿದ ಮಗುವನ್ನು ಕಂಡು ಇಡೀ ಶವಾಗಾರ ಮಾತ್ರ ಮಮ್ಮಲ ಮರುಗಿದಂತಿತ್ತು.

Latest Videos

undefined

121 ಜನರ ಬಲಿ ಪಡೆದ ಹತ್ರಾಸ್ ಸತ್ಸಂಗದ ಹಿಂದಿರುವ ಗುರು ಬೋಲೇಬಾಬಾ ಯಾರು?

ಹಾಥ್ರಸ್‌ ಕಾಲ್ತುಳಿತದ ನ್ಯಾಯಾಂಗ ತನಿಖೆ: ಯೋಗಿ ಘೋಷಣೆ

121 ಜನರ ಸಾವಿಗೆ ಕಾರಣವಾದ ಹಾಥ್ರಸ್‌ ಧಾರ್ಮಿಕ ಸಭೆ ಕಾಲ್ತುಳಿತ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಘೋಷಿಸಿದ್ದಾರೆ.

ಬುಧವಾರ ಹಾಥ್ರಸ್‌ಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಈಗಾಗಲೇ ನಾವು ಆಗ್ರಾ ಎಡಿಜಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದ್ದೇವೆ. ಇದು ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ಈ ಬಗ್ಗೆ ಆಳವಾದ ತನಿಖೆ ನಡೆಸುವಂತೆ ಎಸ್‌ಐಟಿಗೆ ಸೂಚಿಸಲಾಗಿದೆ. ಇದಕ್ಕೆ ಸಮಾನಾಂತರವಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲೂ ರಾಜ್ಯ ಸರ್ಕಾರ ನಿರ್ಧರಿಸಿದೆ. ನಿವೃತ್ತ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸಹ ನ್ಯಾಯಾಂಗ ತನಿಖೆಯ ಭಾಗವಾಗಲಿದ್ದಾರೆ ಎಂದು ಹೇಳಿದರು.

ದುರಂತಕ್ಕೆ ಯಾರು ಹೊಣೆ? ಇದು ಆಕಸ್ಮಿಕ ಘಟನೆಯೇ ಅಥವಾ ಇದು ಪಿತೂರಿಯೇ ಎಂದು ಸಮಿತಿಯು ಪತ್ತೆ ಮಾಡುತ್ತದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ. ಇದಕ್ಕಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅನ್ನು ಸರ್ಕಾರವು ಜಾರಿಗೆ ತರಬಹುದು ಎಂದರು.

ಹಾಥ್ರಸ್ ಕಾಲ್ತುಳಿತ: ಎಲ್ಲೆಂದರಲ್ಲಿ ಹೆಣಗಳು.. ಆಸ್ಪತ್ರೆಯಲ್ಲಿ ಮನಕಲಕುವ ದೃಶ್ಯ

click me!