ಮೀರತ್: ಪ್ರತಿನಿತ್ಯ 25 ಲೀಟರ್ ಹಾಲು, 15 ಕೆಜಿ ಹಣ್ಣು, 15 ಕೆಜಿ ಧಾನ್ಯಗಳು, 10 ಕೆಜಿ ಅವರೆಕಾಳು ಯಾವುದೋ ಮಠದ ಅನ್ನ ದಾಸೋಹಕ್ಕೆ ಬೇಕಾಗುವ ಆಹಾರ ಧಾನ್ಯಗಳ ಲಿಸ್ಟ್ ಅಲ್ಲ ಇದು. ಗೋಲು ಎಂಬ ಈ ಕೋಣನಿಗೆ ದಿನವೊಂದಕ್ಕೆ ನೀಡುವ ಆಹಾರವಿದು. ಹೌದು ಮೀರತ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ ಕಿಸಾನ್ ಮೇಳಕ್ಕೆ ರೈತರೊಬ್ಬರು ತಮ್ಮ ಹೆಮ್ಮೆಯ ಕೋಣ ಗೋಲುವನ್ನು ಕರೆದುಕೊಂಡು ಬಂದಿದ್ದರು. ಇದರ ಬೆಲೆ ಹಾಗೂ ಇದಕ್ಕೆ ಪ್ರತಿನಿತ್ಯ ತಗಲುವ ವೆಚ್ಚ ಕೇಳಿದರೆ ಒಂದು ಕ್ಷಣ ದಂಗಾಗುವುದು ಪಕ್ಕಾ. ಏಕೆಂದರೆ ಇದರ ಬೆಲೆ ಬರೋಬರಿ 10 ಕೋಟಿ ರೂಪಾಯಿಗಳು.
10 ಕೋಟಿ ಮೊತ್ತದ ಈ ಕೋಣ ಈಗ ಮೀರತ್‌ನ ಕಿಸಾನ್ ಮೇಳದ ಪ್ರಮುಖ ಆಕರ್ಷಣೆಯಾಗಿದೆ. ಇದರ ತೂಕ ಸುಮಾರು 1500 ಕೆಜಿಯಷ್ಟಿದ್ದು, ಹೆಸರು ಗೋಲು.ಹರ್ಯಾಣದ ಪಾಣಿಪತ್‌ನ ರೈತರೊಬ್ಬರು, ಮೀರತ್‌ನ (Meerut) ಸರ್ದಾರ್ ವಲ್ಲಭಭಾಯಿ ಪಟೇಲ್ ಕೃಷಿ ವಿಶ್ವವಿದ್ಯಾಲಯದಲ್ಲಿ (Sardar Vallabhbhai Patel Agricultural University) ನಡೆಯುತ್ತಿರುವ ಕಿಸಾನ್ ಮೇಳಕ್ಕೆ (Kisan Mela) ಈ ಅಜಾನುಬಾಹು ಗೋಲುವನ್ನು ಕರೆತಂದು ಕಿಸಾನ್ ಮೇಳದ ಮೇಲೆ ಜನರ ಆಕರ್ಷಣೆಯನ್ನು ಹೆಚ್ಚಿಸಿದ್ದಾರೆ. ಜನರು ಇದರ ಮುಂದೆ ಸೆಲ್ಫಿ ತೆಗೆಯಲು ಮುಗಿ ಬೀಳುತ್ತಿದ್ದಾರೆ.
ಕೈ ಬೀಸಿ ಕರೆಯುತ್ತಿದೆ ಧಾರವಾಡ ಕೃಷಿ ಮೇಳ: ಗಮನ ಸೆಳೆದ ಜಾನುವಾರು ಪ್ರದರ್ಶನ
ಈ ಹೆಮ್ಮೆಯ ಕೋಣದ ಮಾಲೀಕನ ಹೆಸರು ನರೇಂದ್ರ ಸಿಂಗ್,(Narendra Singh) ಇವರು ಈ ಗೋಲುವಿನ ಊಟೋಪಚಾರ ಆರೈಕೆಗಾಗಿಯೇ ತಿಂಗಳಿಗೆ ಲಕ್ಷಾಂತರ ರೂಪಾಯಿಯನ್ನು ವ್ಯಯ ಮಾಡುತ್ತಿದ್ದಾರಂತೆ. ದಿನವೊಂದಕ್ಕೆ 25 ಲೀಟರ್ ಹಾಲು ಕುಡಿಯುವ ಈ ಕೋಣಕ್ಕೆ ದಿನವೂ 15 ಕೆಜಿಯ ಹಣ್ಣುಗಳನ್ನು ನೀಡಬೇಕು. ಜೊತೆಗೆ 10 ಕೆಜಿ ಅವರೆ ಕಾಳುಗಳುಗಳನ್ನು ಇದು ತಿನ್ನುತ್ತದೆ. ಅಲ್ಲದೇ ಪ್ರತಿದಿನವೂ ಸಂಜೆ ಆರು ಕಿಲೋ ಮೀಟರ್ ವರೆಗೆ ಇದನ್ನು ಮಾಲೀಕರು ವಾಕ್ ಕರೆದೊಯ್ಯುತ್ತಾರೆ. ಇಷ್ಟೇ ಅಲ್ಲದೇ ಸಂಜೆ ಎಣ್ಣೆಯಿಂದ ಇದಕ್ಕೆ ಮಸಾಜ್ ಮಾಡಲಾಗುತ್ತದೆ . ಈ ಎಲ್ಲಾ ದಿನನಿತ್ಯದ ವೆಚ್ಚದಿಂದಾಗಿ ಇದರ ಬೆಲೆ ಈಗ ಹತ್ತು ಕೋಟಿಗೆ ಏರಿದೆ ಎನ್ನುತ್ತಾರೆ ಕೋಣದ ಮಾಲೀಕ ನರೇಂದ್ರ ಸಿಂಗ್,
ಹಾಗಂತ ಈ ಸಾಮಾನ್ಯ ಕೋಣನಿಗೇಕೆ ಇಷ್ಟೊಂದು ಖರ್ಚು ಮಾಡ್ತಿದ್ದಾರೆ ಇವ್ರು ಅಂತ ಯೋಚಿಸುತ್ತಿದ್ದೀರಾ. ಖರ್ಚು ಮಾಡಿದಷ್ಟೇ ಇದರಿಂದ ಲಾಭವನ್ನು ಗಳಿಸುತ್ತಿದ್ದಾರೆ ಮಾಲೀಕರು. ಈ ಕೋಣದ ವೀರ್ಯದ ಮಾರಾಟದಿಂದಲೇ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಾರೆ ಈ ರೈತ. ಹರಿಯಾಣವನ್ನು ಹೊರತುಪಡಿಸಿ, ಪಂಜಾಬ್(Punjab), ಉತ್ತರ ಪ್ರದೇಶ (Uttar Pradesh)ಮತ್ತು ರಾಜಸ್ಥಾನ (Rajasthan)ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಕೋಣದ ವೀರ್ಯಕ್ಕೆ ಭಾರಿ ಬೇಡಿಕೆ ಇದೆ ಅಂತೆ.
ಇನ್ನು ಈ ಕಿಸಾನ್ ಮೇಳದಲ್ಲಿ ಈ ಹತ್ತು ಕೋಟಿಯ ಮಾಲು ಗೋಲು ಜೊತೆ ಫೋಟೋ ತೆಗೆಸಿಕೊಳ್ಳಲು ಜನ ಮುಗಿ ಬೀಳುತ್ತಿದ್ದರು. ಇದೇ ಕೃಷಿ ಮೇಳದಲ್ಲಿ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಕರಮ್‌ವೀರ್ ಸಿಂಗ್ ಅವರ ಒಂಭತ್ತುವರೆ ಕೋಟಿ ಮೌಲ್ಯದ ಕೋಣ 'ಯುವರಾಜ್' ಕೂಡ ಪ್ರಮುಖ ಆಕರ್ಷಣೆಯಾಗಿತ್ತು. ಅಲ್ಲದೇ ಅಷ್ಟು ಮೊತ್ತದ ಹಣ ನೀಡಿ ಖರೀದಿಸುವ ಅಫರ್ ಕೂಡ ಇಲ್ಲಿ ಕೋಣಕ್ಕೆ ಬಂತು.
Krishimela2021| 1 ಕೋಟಿಯ ಹಳ್ಳಿಕಾರ್ ಹೋರಿ ನೋಡಿ ನಿಬ್ಬೆರಗಾದ ಜನ..!
ಮೀರತ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ 18 ರಂದು ಈ ಅಖಿಲ ಭಾರತ ಕಿಸಾನ್ ಮೇಳ ಮತ್ತು ಕೃಷಿ ಉದ್ಯಮ 'ಕೃಷಿ ಕುಂಭ 2022ಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಕೃಷಿ ವಿವಿ ಉಪಕುಲಪತಿ ಪ್ರೊ.ಕೆ.ಕೆ.ಸಿಂಗ್(K.K. Singh), ಪ್ರಸ್ತುತ ಕೃಷಿ ವೆಚ್ಚ ಹೆಚ್ಚುತ್ತಿದ್ದು ಅದಕ್ಕೆ ತಕ್ಕಂತೆ ಬೆಳೆಗಳಿಗೆ ಲಾಭದಾಯಕ ಬೆಲೆ ಸಿಗದಿರುವುದು ರೈತರ ಪ್ರಮುಖ ಸಮಸ್ಯೆಯಾಗಿದ್ದು, ಈ ಬಗ್ಗೆ ಆಳವಾದ ಚರ್ಚೆ ನಡೆಯಬೇಕಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ