ಹಫ್ತಾ ಗೇಟ್ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ; ಅನಿಲ್ ದೇಶ್‌ಮುಖ್ ಅರ್ಜಿ ವಜಾ!

By Suvarna NewsFirst Published Apr 8, 2021, 7:56 PM IST
Highlights

ಹಫ್ತಾ ವಸೂಲಿ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ. ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಮೇಲೆ ಸಿಬಿಐ ತನಿಖೆ ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿ ತಿರಸ್ಕೃತಗೊಂಡಿದೆ. 

ನವದೆಹಲಿ(ಏ.08):  ಬರೋಬ್ಬರಿ 100 ಕೋಟಿ ರೂಪಾಯಿ ಹಫ್ತಾ ವಸೂಲಿ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಮಹಾರಾಷ್ಟ್ರ ಮಾಜಿ ಗೃಹ ಅನಿಲ್ ದೇಶ್‌ಮುಖ್ ವಿರುದ್ಧ,  ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಂ ಬೀರ್ ಸಿಂಗ್ ಮಾಡಿದ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಬಾಂಬೆ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಹಾಗೂ ಅನಿಲ್ ದೇಶ್‌ಮುಖ್‌ಗೆ ಮುಖಭಂಗವಾಗಿದೆ.

ಹಫ್ತಾ ವಸೂಲಿ ಪ್ರಕರಣದಲ್ಲಿ ಮೊದಲ ವಿಕೆಟ್ ಪತನ: ಮಹಾರಾಷ್ಟ್ರ ಗೃಹ ಸಚಿವ ರಾಜೀನಾಮೆ!.

ಅನಿಲ್ ದೇಶ್‌ಮುಖ್ ಮೇಲಿನ 100 ಕೋಟಿ ರೂಪಾಯಿ ಹಫ್ತಾ ವಸೂಲಿ ಆರೋಪ ಗಂಭೀರವಾಗಿದ್ದು, ಪ್ರಾಥಮಿಕ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು. ಇದರ ಬೆನ್ನಲ್ಲೇ ಅನಿಲ್ ದೇಶ್‌ಮುಖ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ  ಈ ನಿರ್ಧಾರವನ್ನು ಪ್ರಶ್ನಿಸಿ, ಮಹಾರಾಷ್ಟ್ರ ಸರ್ಕಾರ ಹಾಗೂ ಅನಿಲ್ ದೇಶ್‌ಮುಖ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಸಿಬಿಐ ತನಿಖೆ ರದ್ದುಗೊಳಿಸಲು ನಿರಾಕರಿಸಿದೆ.

ಬಹು ಗಂಭೀರ ಆರೋಪವನ್ನು ಸ್ವತಂತ್ರ ಸಂಸ್ಥೆಯೊಂದು ತನಿಖೆ ಮಾಡುತ್ತಿದೆ. ಆರೋಪದ ಸತ್ಯಾಂಶ ಹೊರಬರಲಿ. ಹೀಗಾಗಿ ಈ ತನಿಖೆಯನ್ನು ತಡೆಯಲು ಸಾಧ್ಯವಿಲ್ಲ ಎಂದು  ಸುಪ್ರೀಂಕೋಟ್೯ ಹೇಳಿದೆ. ಸುಪ್ರೀಂ ಕೋರ್ಟ್ ಆದೇಶ ಇದೀಗ ಅನಿಲ್ ದೇಶ್‌ಮುಖ್ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಉದ್ಯಮಿ ಮುಖೇಶ್ ಅಂಬಾನಿ ಮನೆ ಸಮೀಪದಲ್ಲಿ ಸ್ಫೋಟಕ ಪ್ರಕರಣವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಮುಂಬೈ ಪೊಲೀಸ್ ಆಯುಕ್ತ ಪರಂ ಬೀರ್ ಸಿಂಗ್ ಅವರನ್ನು ಆಯುಕ್ತ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಬಳಿಕ ಅನಿಲ್ ದೇಶ್‌ಮುಖ್ 100 ಕೋಟಿ ರೂಪಾಯಿ ಹಫ್ತಾ ವಸೂಲಿ ಪ್ರತಿ ತಿಂಗಳು ಸಂಗ್ರಹಿಸುವಂತೆ ಟಾರ್ಗೆಟ್ ಮಾಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು.

click me!