ಶಾ ಮಾತು ಉಳಿಸಿಕೊಂಡಿದ್ದರೆ ಅಘಾಡಿ ಹುಟ್ಟುತ್ತಿರಲಿಲ್ಲ: ಉದ್ಧವ್ ಠಾಕ್ರೆ

By Suvarna NewsFirst Published Jul 2, 2022, 7:42 AM IST
Highlights

* ಶಿವಸೇನೆ ಬಂಡುಕೋರ ನಾಯಕ ಏಕನಾಥ ಶಿಂಧೆಗೆ ಮುಖ್ಯಮಂತ್ರಿ ಪಟ್ಟ

* ಶಾ ಮಾತು ಉಳಿಸಿಕೊಂಡಿದ್ದರೆ ಅಘಾಡಿ ಹುಟ್ಟುತ್ತಿರಲಿಲ್ಲ: ಠಾಕ್ರೆ

* ಶಿಂಧೆಗೆ ಸೀಟುಬಿಟ್ಟು ಕೊಟ್ಟಉದ್ದೇಶದ ಬಗ್ಗೆ ಬಿಜೆಪಿಗೆ ಉದ್ಧವ್‌ ಪ್ರಶ್ನೆ

ಮುಂಬೈ(ಜು.02): ಶಿವಸೇನೆ ಬಂಡುಕೋರ ನಾಯಕ ಏಕನಾಥ ಶಿಂಧೆಗೆ ಮುಖ್ಯಮಂತ್ರಿ ಪಟ್ಟನೀಡಿ, ಬಿಜೆಪಿಯ ದೇವೇಂದ್ರ ಫಡ್ನವೀಸ್‌ಗೆ ಉಪಮುಖ್ಯಮಂತ್ರಿ ಪಟ್ಟನೀಡಿದ್ದನ್ನು ಖಾರವಾಗಿ ಪ್ರಶ್ನಿಸಿರುವ ಶಿವಸೇನಾ ಮುಖ್ಯಸ್ಥ ಉದ್ಧವ ಠಾಕ್ರೆ, ‘ಇದೇ ನಡೆಯನ್ನು 2019ರಲ್ಲೇ ಕೈಗೊಳ್ಳಬೇಕಿತ್ತಲ್ಲವೇ? ಆಗೇಕೆ ಶಿವಸೇನೆಗೆ ಮುಖ್ಯಮಂತ್ರಿ ಪಟ್ಟನೀಡಲಿಲ್ಲ?’ ಎಂದು ಕೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2019ರಲ್ಲಿ ಶಿವಸೇನೆ ಹಾಗೂ ಬಿಜೆಪಿಗೆ ತಲಾ 2.5 ವರ್ಷ ಮುಖ್ಯಮಂತ್ರಿ ಹುದ್ದೆ ಸಿಗಬೇಕು ಎಂದು ನನ್ನ ಹಾಗೂ ಬಿಜೆಪಿ ಮುಖಂಡ ಅಮಿತ್‌ ಶಾ ನಡುವೆ ಒಪ್ಪಂದ ಆಗಿತ್ತು. ಆದರೆ ಆಗ ಬಿಜೆಪಿ ಈ ಮಾತು ಉಳಿಸಿಕೊಳ್ಳಲಿಲ್ಲ. ಉಳಿಸಿಕೊಂಡಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ ಹಾಗೂ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರ ಬರುತ್ತಿರಲಿಲ್ಲ. ಎಲ್ಲ ಸುರಳೀತವಾಗಿ ನ ಡೆಯುತ್ತಿತ್ತು’ ಎಂದರು.

‘ಆದರೆ ಇಂದು ‘ಶಿವಸೈನಿಕ’ನನ್ನು ಮುಖ್ಯಮಂತ್ರಿ ಮಾಡಿದ್ದೇನೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದ್ದು ಗೊಂದಲ ಸೃಷ್ಟಿಸುತ್ತಿದೆ. ಹಾಗಿದ್ದರೆ ಆಗೇಕೆ (2019ರಲ್ಲಿ) ಮಾಡಲಿಲ್ಲ? ನಾನು ‘ತಥಾಕಥಿತ ಶಿವಸೈನಿಕ’ ಏಕನಾಥ ಶಿಂಧೆಯನ್ನು ‘ಶಿವಸೇನೆ ಮುಖ್ಯಮಂತ್ರಿ’ ಎಂದು ಒಪ್ಪಿಕೊಳ್ಳಲ್ಲ. ಶಿವಸೇನೆಯನ್ನು ಧಿಕ್ಕರಿಸಿ ಬಂದವರು ಸೇನಾ ಮುಖ್ಯಮಂತ್ರಿ ಆಗುವುದಿಲ್ಲ’ ಎಂದು ಕಿಡಿಕಾರಿದರು.

ಸಿಎಂ ಶಿಂಧೆ ಸೇರಿ 16 ಶಾಸಕರ ಸದಸ್ಯತ್ವ ಅಮಾನತಿಗೆ ಸುಪ್ರೀಂಗೆ ಮೊರೆ

ಶಾಸಕತ್ವ ಅನರ್ಹತೆ ಅರ್ಜಿ ವಿಚಾರಣೆ ಎದುರಿಸುತ್ತಿರುವ ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ 15 ಶಿವಸೇನೆ ಬಂಡಾಯ ಶಾಸಕರ, ವಿಧಾನಸಭಾ ಸದಸ್ಯತ್ವವನ್ನು ಅಮಾನತಿನಲ್ಲಿ ಇರಿಸಬೇಕು ಎಂದು ಸುಪ್ರೀಂ ಕೋರ್ಚ್‌ನಲ್ಲಿ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ಅರ್ಜಿ ಸಲ್ಲಿಸಿದೆ. ಇದನ್ನು ವಿಚಾರಣೆಗೆ ಕೋರ್ಚ್‌ ಅಂಗೀಕರಿಸಿದ್ದು, ಜುಲೈ 11ರಂದು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.

‘ಅಧಿವೇಶನದಲ್ಲಿ ಶಿಂಧೆ ಬಣವೂ ವಿಪ್‌ ಜಾರಿ ಮಾಡಲಿದೆ. ಉದ್ಧವ್‌ ಬಣವೂ ವಿಪ್‌ ಜಾರಿ ಮಾಡಲಿದೆ. ಹೀಗಾಗಿ ಯಾರ ವಿಪ್‌ಗೆ ಮಾನ್ಯತೆ ಇದೆ ಎಂಬ ಗೊಂದಲ ಸೃಷ್ಟಿಯಾಗಲಿದೆ. ಹೀಗಾಗಿ ಅನರ್ಹತೆ ನೋಟಿಸ್‌ ಪಡೆದಿರುವ 16 ಶಾಸಕರ ಸದಸ್ಯತ್ವ ಅಮಾನತಿನಲ್ಲಿರಿಸಬೇಕು’ ಎಂದು ಉದ್ಧವ್‌ ಪರ ವಕೀಲ ಕಪಿಲ್‌ ಸಿಬಲ್‌ ಮನವಿ ಮಾಡಿದರು.

‘16 ಶಾಸಕರು ತಮ್ಮ ವಿರುದ್ಧದ ಅನರ್ಹತೆ ಪ್ರಶ್ನಿಸಿ ಈಗಾಗಲೇ ಅರ್ಜಿ ಸಲ್ಲಿಸಿದ್ದು, ವಿಷಯದ ಬಗ್ಗೆ ನಮಗೆ ಅರಿವಿದೆ. ಜು.11ರಂದು ಆ ಅರ್ಜಿ ಜತೆಗೆ ನಿಮ್ಮ ಅರ್ಜಿಯನ್ನೂ ವಿಚಾರಣೆ ನಡೆಸುತ್ತೇವೆ’ ಎಂದು ನ್ಯಾ| ಸೂರ್ಯಕಾಂತ್‌ ಅವರ ಪೀಠ ಹೇಳಿತು.

click me!