ಕಾಶಿ ವಿಶ್ವನಾಥ ದೇವಸ್ಥಾನ - ಜ್ಞಾನವಾಪಿ ಮಸೀದಿ ವಿವಾದದ ಮೇಲೆ ಪರಿಣಾಮ ಬೀರುವ ಮಹತ್ವದ ಬೆಳವಣಿಗೆಯಲ್ಲಿ ಸೋಮವಾರ ಬೆಳಗ್ಗೆ ಉತ್ತರ ಪ್ರದೇಶದ ವಾರಣಾಸಿಯ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಿಗೆ ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆಯ ವರದಿ ಸಲ್ಲಿಸಿದೆ.
ವಾರಾಣಸಿ ( ಡಿಸೆಂಬರ್ 18, 2023): ಜ್ಞಾನವಾಪಿ ಮಸೀದಿ ವಿವಾದ ಮತ್ತೆ ಇಂದು ಮುನ್ನೆಲೆಗೆ ಬಂದು ನಿಂತಿದೆ. ಇದಕ್ಕೆ ಕಾರಣ ಭಾರತೀಯ ಪುರಾತತ್ವ ಇಲಾಖೆ (ASI) ಇಂದು ವಾರಾಣಸಿ ನ್ಯಾಯಾಲಯದಲ್ಲಿ ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಸಲ್ಲಿಸಿದೆ.
ಹೌದು, ಕಾಶಿ ವಿಶ್ವನಾಥ ದೇವಸ್ಥಾನ - ಜ್ಞಾನವಾಪಿ ಮಸೀದಿ ವಿವಾದದ ಮೇಲೆ ಪರಿಣಾಮ ಬೀರುವ ಮಹತ್ವದ ಬೆಳವಣಿಗೆಯಲ್ಲಿ ಸೋಮವಾರ ಬೆಳಗ್ಗೆ ಉತ್ತರ ಪ್ರದೇಶದ ವಾರಣಾಸಿಯ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಿಗೆ ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆಯ ವರದಿಯನ್ನು ಸಲ್ಲಿಸಲಾಯಿತು. ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವಕೀಲ ಅಮಿತ್ ಶ್ರೀವಾಸ್ತವ ಸೀಲ್ ಮಾಡಿದ ವರದಿಯನ್ನು ನ್ಯಾಯಾಧೀಶರ ಮೇಜಿನ ಮೇಲೆ ಇರಿಸಿದರು.
ಇದನ್ನು ಓದಿ: 32 ವರ್ಷದಿಂದ ಜ್ಞಾನವ್ಯಾಪಿ ಕಾನೂನು ಹೋರಾಟ ನಡೆಸಿದ ಅರ್ಜಿದಾರ ನಿಧನ, ವರದಿ ಸಲ್ಲಿಕೆ ವಿಳಂಬ!
ವಾರಣಾಸಿ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ ಅವರ ಮುಂದೆ ಎಎಸ್‌ಐ ವರದಿ ಸಲ್ಲಿಸಿದೆ. ಮತ್ತೊಂದೆಡೆ, ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಸಮಿತಿ (ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುತ್ತದೆ) ಸಮೀಕ್ಷೆಯ ವರದಿಯ ಬಗ್ಗೆ ಮಾಹಿತಿ ಕೋರಿ ಮನವಿ ಸಲ್ಲಿಸಿದೆ.
ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿಯನ್ನು ASI ಬಿಳಿ ಬಟ್ಟೆಯಲ್ಲಿ ಸಲ್ಲಿಸಲಾಗಿದ್ದು, ಸೀಲ್ ಮಾಡಿದ ದಾಖಲೆಯನ್ನು ಸಾರ್ವಜನಿಕಗೊಳಿಸಲಾಗುತ್ತದೆಯೇ ಅಥವಾ ಹಿಂದೂ ಅಥವಾ ಮುಸ್ಲಿಂ ಅರ್ಜಿದಾರರೊಂದಿಗೆ ಹಂಚಿಕೊಳ್ಳಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಸದ್ಯ ವಾರಾಣಸಿ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ನಿಗದಿಪಡಿಸಲಾಗಿದೆ.
ಜ್ಞಾನವಾಪಿ ಸರ್ವೇ ಮುಕ್ತಾಯ, ಕೋರ್ಟ್‌ಗೆ ವರದಿ ಸಲ್ಲಿಸಲಿರುವ ಎಎಸ್‌ಐ!
ಈ ಮಧ್ಯೆ, ಕೋರ್ಟ್‌ಗೆ ವರದಿ ಸಲ್ಲಿಸಿದ ಬಳಿಕ, ಹಿಂದೂಗಳು ವರದಿಯನ್ನು ಸಾರ್ವಜನಿಕಗೊಳಿಸಲು ನ್ಯಾಯಾಲಯದ ಮುಂದೆ ಮನವಿ ಮಾಡಿದರು ಮತ್ತು ವರದಿಯ ಪ್ರತಿಗಳನ್ನು ಒಳಗೊಂಡಿರುವ ಎಲ್ಲಾ ಪಕ್ಷಗಳಿಗೆ ನೀಡುವಂತೆಯೂ ಕೇಳಿಕೊಂಡರು. ವಾರಾಣಸಿ ಜಿಲ್ಲಾ ನ್ಯಾಯಾಧೀಶರ ಜುಲೈ 21 ರ ಆದೇಶದಂತೆ ASI ವಾರಣಾಸಿಯ ಜ್ಞಾನವಾಪಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ನಡೆಸಿದ್ದು, ಮಸೀದಿಯನ್ನು ಹಿಂದೂ ದೇವಾಲಯದ ಪೂರ್ವ ಅಸ್ತಿತ್ವದಲ್ಲಿರುವ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಈ ಕ್ರಮ ಕೈಗೊಂಡಿತ್ತು.
ASI ತನ್ನ ಸಂಶೋಧನೆಗಳನ್ನು ಸಲ್ಲಿಸಲು ಕೋರ್ಟ್ ನೀಡಿದ್ದ ಸಮಯಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದೆ. ಅಧ್ಯಯನ ಮತ್ತು ವಿಶ್ಲೇಷಣೆ ಮಾಡಬೇಕಾದ ಅಪಾರ ಪ್ರಮಾಣದ ಡೇಟಾ ಇದೆ ಎಂದೂ ಹೇಳಿತ್ತು. ಅಲ್ಲದೆ, ನವೆಂಬರ್ 2 ರಂದು, ತಾನು ಸಮೀಕ್ಷೆಯನ್ನು "ಮುಗಿಸಿದೆ" ಎಂದು ASI ಹೇಳಿದ್ದರೂ, ಸಮೀಕ್ಷೆಯ ಸಮಯದಲ್ಲಿ ಬಳಸಿದ ಉಪಕರಣಗಳ ವಿವರಗಳನ್ನು ಸಲ್ಲಿಸುವುದು ಸೇರಿದಂತೆ ವರದಿಯನ್ನು ಕಂಪೈಲ್ ಮಾಡಲು ಹೆಚ್ಚಿನ ಸಮಯವನ್ನು ಕೇಳಿಕೊಂಡಿತ್ತು.
ಕಳೆದ ವರ್ಷ 'ಶಿವಲಿಂಗ' ಕಂಡುಬಂದಿದೆ ಎಂದು ಹೇಳಲಾದ 'ವುಜುಖಾನಾ' ಪ್ರದೇಶವನ್ನು ಹೊರತುಪಡಿಸಿ, ವಾರಾಣಸಿಯ ಜ್ಞಾನವಾಪಿ ಮಸೀದಿಯ ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷೆಗೆ ತಡೆ ನೀಡಲು ಆಗಸ್ಟ್ 4 ರಂದು ಸುಪ್ರೀಂಕೋರ್ಟ್ ನಿರಾಕರಿಸಿತು. ಸ್ಥಳದಲ್ಲಿ ಯಾವುದೇ ಉತ್ಖನನ ನಡೆಸುವುದಿಲ್ಲ ಮತ್ತು ಕಟ್ಟಡಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಎಎಸ್‌ಐ ಮಾಡಿದ ವಾಗ್ದಾನವನ್ನು ದಾಖಲಿಸಿದ ನ್ಯಾಯಾಲಯವು ಸರ್ವೇ ನಡೆಸಲು ಅನುಮತಿ ನೀಡಿತು.