ಜ್ಞಾನವಾಪಿಯಲ್ಲಿ ಪೂಜೆ ಖಂಡಿಸಿ ಮುಸ್ಲಿಮರಿಂದ ವಾರಾಣಸಿ ಬಂದ್‌

By Kannadaprabha NewsFirst Published Feb 3, 2024, 8:56 AM IST
Highlights

ಕಾಶಿ ವಿಶ್ವನಾಥ ಮಂದಿರದ ಜ್ಞಾನವಾಪಿ ಮಸೀದಿಯಲ್ಲಿನ ತಳಮಹಡಿಯಲ್ಲಿನ ಹಿಂದೂ ದೇವರ ಪೂಜೆಗೆ ಕೋರ್ಟ್‌ ಅನುಮತಿ ನೀಡಿದ್ದನ್ನು ಖಂಡಿಸಿ ಮುಸ್ಲಿಮರು ಶುಕ್ರವಾರ ವಾರಾಣಸಿ ಬಂದ್‌ ನಡೆಸಿದರು.

ವಾರಾಣಸಿ (ಫೆ.3): ಕಾಶಿ ವಿಶ್ವನಾಥ ಮಂದಿರದ ಜ್ಞಾನವಾಪಿ ಮಸೀದಿಯಲ್ಲಿನ ತಳಮಹಡಿಯಲ್ಲಿನ ಹಿಂದೂ ದೇವರ ಪೂಜೆಗೆ ಕೋರ್ಟ್‌ ಅನುಮತಿ ನೀಡಿದ್ದನ್ನು ಖಂಡಿಸಿ ಮುಸ್ಲಿಮರು ಶುಕ್ರವಾರ ವಾರಾಣಸಿ ಬಂದ್‌ ನಡೆಸಿದರು.

ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳು ಶುಕ್ರವಾರ ಮುಚ್ಚಿದ್ದವು. ಅಲ್ಲದೆ, ಭಾರಿ ಸಂಖ್ಯೆಯ ಮುಸ್ಲಿಮರು ಶುಕ್ರವಾರದ ನಮಾಜ್‌ಗೆ ಜ್ಞಾನವಾಪಿ ಮಸೀದಿಗೆ ಬಂದಿದ್ದರಿಂದ ಉದ್ವಿಗ್ನ ಸ್ಥಿತಿ ನೆಲೆಸಿತ್ತು. ಈ ಹಿನ್ನೆಲೆಯಲ್ಲಿ ವಾರಾಣಸಿಯಾದ್ಯಂತ ಭಾರಿ ಬಿಗಿ ಬಂದೋಬಸ್ತ್‌ ಹಮ್ಮಿಕೊಳ್ಳಲಾಗಿದೆ.

ಮಸೀದಿ ಸಮಿತಿ ಅರ್ಜಿ ವಿಚಾರಣೆ ಫೆ.6ಕ್ಕೆ ಮುಂದೂಡಿಕೆ
ಪ್ರಯಾಗ್‌ರಾಜ್‌: ಜ್ಞಾನವಾಪಿ ಮಸೀದಿಯ ತಳಮಹಡಿಯಲ್ಲಿರುವ ಶೃಂಗಾರ ಗೌರಿ ದೇಗುಲದಲ್ಲಿ ಪೂಜೆ ಮಾಡುವ ಪ್ರಕ್ರಿಯೆಗೆ ತಡೆ ನೀಡಲು ಅಲಹಾಬಾದ್‌ ಹೈಕೋರ್ಟ್‌ ನಿರಾಕರಿಸಿದೆ ಹಾಗೂ ಪ್ರಕರಣದ ವಿಚಾರಣೆಯನ್ನು ಫೆ.6ಕ್ಕೆ ಮುಂದೂಡಿದೆ. ಇದರಿಂದಾಗಿ ಫೆ.6ರವರೆಗೆ ಜ್ಞಾನವಾಪಿ ಮಸೀದಿಯಲ್ಲಿನ ಹಿಂದೂ ದೇವರ ಪೂಜೆ ಅಬಾಧಿತವಾಗಿ ಮುಂದುವರಿಯಲಿದೆ.

ಈ ನಡುವೆ, ಪೂಜೆಗೆ ಇತ್ತೀಚಗೆ ಅನುಮತಿಸಿದ್ದ ವಾರಾಣಸಿ ಜಿಲ್ಲಾ ಕೋರ್ಟ್‌ ಆದೇಶ ಪ್ರಶ್ನಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗುವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಶುಕ್ರವಾರ ಘೋಷಿಸಿದೆ.

ಹೈಕೋರ್ಟಲ್ಲಿ ವಾದ-ಪ್ರತಿವಾದ:
ಹೈಕೋರ್ಟಲ್ಲಿ, ಪೂಜೆ ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ರೋಹಿತ್‌ ರಂಜನ್‌ ಅಗರ್‌ವಾಲ್‌ ಅವರ ಮುಂದೆ ವಾದ ಮಂಡಿಸಿದ ಮಸೀದಿ ಪರ ವಕೀಲ ನಖ್ವಿ ಅವರು ‘ಜ್ಞಾನವಾಪಿ ಮಸೀದಿಯ ಕುರಿತು ವಾರಾಣಸಿ ಜಿಲ್ಲಾ ನ್ಯಾಯಾಧೀಶರುನಿವೃತ್ತಿಯಾಗುವ ದಿನವೇ ತೀರ್ಪು ಪ್ರಕಟಿಸಿದ್ದಾರೆ. ಆದ್ದರಿಂದ ಆ ತೀರ್ಪನ್ನು ಅಸಿಂಧುಗೊಳಿಸಬೇಕು’ ಎಂದರು.

ಇದನ್ನು ವಿರೋಧಿಸಿದ ಹಿಂದೂ ಪರ ವಕೀಲ ವಿಷ್ಣು ಶಂಕರ್‌ ಜೈನ್‌ ಅವರು, ‘ಜ.17ರಂದು ಜ್ಞಾನವಾಪಿಯಲ್ಲಿ ಹಿಂದೂ ದೇವರಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿಗಳನ್ನು ಉಸ್ತುವಾರಿಯನ್ನಾಗಿ ಕೋರ್ಟ್‌ ನೇಮಿಸಿತ್ತು. ಆ ಆದೇಶದ ಅನುಸಾರ ಈಗ ಪೂಜೆಗೆ ಕೋರ್ಟ್‌ ಆದೇಶಿಸಿದೆ. ಜ.17ರ ಆದೇಶವನ್ನು ಮಸೀದಿ ಸಮಿತಿ ಪ್ರಶ್ನಿಸಿರಲಿಲ್ಲ. ಹೀಗಾಗಿ ಮಸೀದಿ ಸಮಿತಿಯ ಈಗಿನ ವಾದದಲ್ಲಿ ಹುರುಳಿಲ್ಲ’ ಎಂದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ತ್ವರಿತವಾಗಿ ಆದೇಶ ನೀಡಲು ನಿರಾಕರಿಸಿ ಮುಂದಿನ ವಿಚಾರಣೆಯನ್ನು ಫೆ.6ಕ್ಕೆ ಮುಂದೂಡಿದರು.

click me!