
ನವದೆಹಲಿ (ಫೆ.3): ಅಕ್ಕಿ ಬೆಲೆ ಏರಿಕೆ ನಿಯಂತ್ರಣಕ್ಕೆ ಕೈಗೊಂಡ ಸಾಕಷ್ಟು ಕ್ರಮಗಳು ಪೂರ್ಣ ಪ್ರಮಾಣದಲ್ಲಿ ಫಲ ಕೊಡದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವೇ ನೇರವಾಗಿ ಜನಸಾಮಾನ್ಯರಿಗೆ ಪ್ರತಿ ಕೆ.ಜಿ.ಗೆ 29 ರು.ನಂತೆ ಅಕ್ಕಿ ಮಾರಾಟ ಮಾಡಲು ನಿರ್ಧರಿಸಿದೆ. ಅಲ್ಲದೆ ಸಗಟು ಖರೀದಿದಾರರು ತಮ್ಮ ಬಳಿ ಹೊಂದಿರುವ ಅಕ್ಕಿ ಸಂಗ್ರಹದ ಪ್ರಮಾಣವನ್ನೂ ಬಹಿರಂಗಪಡಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಶುಕ್ರವಾರ ಈ ಬಗ್ಗೆ ಹೇಳಿಕೆ ನೀಡುರುವ ಕೇಂದ್ರ ಆಹಾರ ಇಲಾಖೆಯ ಕಾರ್ಯದರ್ಶಿ ಸಂಜೀವ್ ಚೋಪ್ರಾ, ‘ಕಳೆದೊಂದು ವರ್ಷದಲ್ಲಿ ಚಿಲ್ಲರೆ ಮತ್ತು ಸಗಟು ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಶೇ.15ರಷ್ಟು ಹೆಚ್ಚಳವಾಗಿದೆ. ವಿವಿಧ ಮಾದರಿಯ ಅಕ್ಕಿ ರಫ್ತಿನ ಮೇಲೆ ನಿಯಂತ್ರಣ ಹೇರಿದ್ದರೂ ದರ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಮುಂದಿನ ವಾರದಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವೇ ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 29 ರು.ನಂತೆ ಅಕ್ಕಿ ಮಾರಾಟ ಮಾಡಲು ನಿರ್ಧರಿಸಿದೆ’ ಎಂದು ತಿಳಿಸಿದ್ದಾರೆ.
ಎಲ್ಲಿ ಮಾರಾಟ?:
ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಂಟಿಂಗ್ ಫೆಡರೇಷನ್ ಆಫ್ ಇಂಡಿಯಾ (ನಾಫೆಡ್), ನ್ಯಾಷನಲ್ ಕೋಅಪರೇಟಿವ್ ಕನ್‌ಸ್ಯೂಮರ್ಸ್ ಫೆಡರೇಷನ್ ಆಫ್ ಇಂಡಿಯಾ (ಎನ್‌ಸಿಸಿಫ್), ಕೇಂದ್ರೀಯ ಭಂಡಾರಗಳು ಮತ್ತು ಇ ಕಾಮರ್ಸ್‌ಗಳ ತಾಣಗಳ ಮೂಲಕ ಅಕ್ಕಿ ಮಾರಾಟ ಮಾಡಲಾಗುವುದು. ಅಕ್ಕಿ 5 ಮತ್ತು 10 ಕೆ.ಜಿ. ಬ್ಯಾಗ್‌ಗಳಲ್ಲಿ ಲಭ್ಯವಿರಲಿದೆ. ಮೊದಲ ಹಂತದಲ್ಲಿ ಈ ಯೋಜನೆಗಾಗಿ 5 ಲಕ್ಷ ಟನ್ ಅಕ್ಕಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕೇಂದ್ರ ಸರ್ಕಾರ ಈಗಾಗಲೇ ಭಾರತ್ ಆಟಾವನ್ನು ಪ್ರತಿ ಕೆ.ಜಿಗೆ 27.50 ರು.ನಂತೆ ಮತ್ತು ಭಾರತ್ ದಾಲ್ (ಕಡಲೆ)ಯನ್ನು ಕೆ.ಜಿಗೆ 60 ರು.ನಂತೆ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ