
ಗುಜರಾತ್(ಜೂ.16): ಬಿಪೊರ್‌ಜಾಯ್ ಚಂಡಮಾರುತ ಅಬ್ಬರಕ್ಕೆ ಗುಜರಾತ್ ತತ್ತರಿಸಿದೆ. ಚಂಡಮಾರುದ ಅಬ್ಬರ ರಾಜಸ್ಥಾನ, ದೆಹಲಿ ಸೇರಿದಂತೆ ದಕ್ಷಿಣ ಭಾರತದ ಮೇಲೂ ಪರಿಣಾಮ ಬೀರಿದೆ. ಗುಜರಾತ್‌ನ 100ಕ್ಕೂ ಹೆಚ್ಚು ಗ್ರಾಮಗಳು ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲಾ ಸಂಪರ್ಕ ಕಡಿದುಕೊಂಡಿದೆ. ದ್ವಾರಕ ಜಿಲ್ಲೆಯ ಭನವಾಡ ಗ್ರಾಮದ ಜನರು ಚಂಡಮಾರುತಕ್ಕೆ ತತ್ತರಿಸಿದ್ದಾರೆ. ಭಾರಿ ಮಳೆ, ತೀವ್ರ ಗಾಳಿಯಿಂದ ಇಡೀ ಗ್ರಾಮವೇ ಅಪಾಯಕ್ಕೆ ಸಿಲುಕಿದೆ. ಇಡೀ ಗ್ರಾಮದ ಜನರನ್ನು ರಕ್ಷಣಾ ತಂಡ ಹಾಗೂ ಪೊಲೀಸರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಈ ವೇಳೆ 4 ದಿನದ ಕಂದನನ್ನು ಪೊಲೀಸರು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ
ಭನವಾಡ ಗ್ರಾಮಕ್ಕೆ ಧಾವಿಸಿದ ರಕ್ಷಣಾ ತಂಡ ಹಾಗೂ ಗುಜರಾತ್ ಪೊಲೀಸ್, ಗ್ರಾಮದ ಜನರನ್ನು ಸುರಕ್ಷಿತ ಸ್ಥಳಾಂತರ ಮಾಡಿದ್ದಾರೆ. ನಾಲ್ಕು ದಿನದ ಹಿಂದೆ ಮಗುವಿಗೆ ಜನ್ಮ ನೀಡಿದ್ದ ತಾಯಿ ಹಾಗೂ ಮಗುವನ್ನು ಇದೇ ವೇಳೆ ಸ್ಥಳಾಂತರ ಮಾಡಲಾಗಿದೆ. ಈ ಕುರಿತ ವಿಡಿಯೋವನ್ನು ಗುಜಾರತ್ ಪೊಲೀಸರು ಹಂಚಿಕೊಂಡಿದ್ದಾರೆ. ಮಗುವಿನ ಆರೈಕೆಗೂ ವ್ಯವಸ್ಥೆ ಮಾಡಲಾಗಿದೆ. ಸ್ಥಳಾಂತರ ಮಾಡಿರುವ ಜನರಿಗೆ ವಸತಿ, ಊಟ, ನೀರು ಸೇರಿದಂತೆ ಇತರ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ಕರಾವಳಿ: ಚಂಡಮಾರುತ ಪ್ರಭಾವದ ಮಳೆ, ಒಂದೇ ದಿನದಲ್ಲಿ ಮುಂಗಾರು ಪ್ರವೇಶ ನಿರೀಕ್ಷೆ!
ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಬಿಪೊರ್‌ಜೊಯ್ ಚಂಡಮಾರುತ ಗುರುವಾರ(ಜೂ.15) ಸಾಯಂಕಾಲ 6.30ರ ಸುಮಾರಿಗೆ ಗುಜರಾತ್‌ನ ಕಛ್ ಬಳಿ ಇರುವ ಜಕಾವು ಬಂದರಿಗೆ ಅಪ್ಪಳಿಸಿತ್ತು. ಸುಮಾರು 10 ದಿನಗಳ ಕಾಲ ಅರಬ್ಬೀ ಸಮುದ್ರದಲ್ಲಿ ಸಂಚರಿಸಿದ್ದ ಚಂಡಮಾರುತ ಇದೇ ಮೊದಲ ಬಾರಿಗೆ ಭೂಭಾಗಕ್ಕೆ ಅಪ್ಪಳಿಸಿದೆ. ಚಂಡಮಾರುತದಿಂದ ಉಂಟಾಗಿರುವ ಗಾಳಿ ಗಂಟೆಗೆ ಸುಮಾರು 140 ಕಿ.ಮೀ. ವೇಗದಲ್ಲಿ ಸಾಗುತ್ತಿರುವ ಚಂಡಮಾರುತದಿಂದಾಗಿ ಕಛ್ ಮತ್ತು ಸೌರಾಷ್ಟ್ರ ಕಡಲತೀರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಹೈ ಅಲರ್ಚ್ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಗುಜರಾತ್ ಕರಾವಳಿಯ ಅನೇಕ ಭಾಗಗಳಲ್ಲಿ ವಿದ್ಯುತ್ ಏರುಪೇರಾಗಿದ್ದು, ಗುರುವಾರ ರಾತ್ರಿ ಕಾರ್ಗತ್ತಲು ಆವರಿಸಿದೆ.ಹಲವು ಭಾಗಗಳಲ್ಲಿ ಹೋರ್ಡಿಂಗ್ಗಳು, ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.
ಚಂಡಮಾರುತ ಗುರುವಾರ ಮಧ್ಯರಾತ್ರಿ ತನ್ನ ಅಪ್ಪಳಿಸುವಿಕೆ ಪೂರ್ಣಗೊಳಿಸಿದೆ. ಶುಕ್ರವಾರ ಇದು ತೀವ್ರ ಸ್ವರೂಪದ ಚಂಡಮಾರುತದಿಂದ ಮಾಮೂಲಿ ಚಂಡಮಾರುತವಾಗಿ ಬಲ ಕಳೆದುಕೊಂಡು ಕ್ರಮೇಣ ದುರ್ಬಲವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದಾಗ್ಯೂ ಕಛ್‌ನಲ್ಲಿ 20.5 ಸೆಂ.ಮೀ., ದ್ವಾರಕಾ, ಜಾಮ್‌ನಗರ, ಪೋರಬಂದರ್, ರಾಜ್‌ಕೋಟ್, ಮೋರ್ಬಿ ಮತ್ತು ಜುನಾಗಢ ಜಿಲ್ಲೆಗಳಲ್ಲಿ 11.5ರಿಂದ 20.4 ಸೆಂ.ಮೀ. ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ತೀವ್ರಗೊಂಡಿದ್ದ ಚಂಡಮಾರುತ ಗುಜರಾತ್ ತೀರಕ್ಕೆ ಅಪ್ಪಳಿಸಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆಯ ಬೆನ್ನಲ್ಲೇ ಅಗತ್ಯ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿತ್ತು. ಕರಾವಳಿಯ ಲ್ಲಿರುವ 8 ಜಿಲ್ಲೆಗಳಿಂದ 1.5 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿತ್ತು. ಹೀಗಾಗಿ ಹೆಚ್ಚಿನ ಜೀವಹಾನಿ ತಪ್ಪಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ