ಕರಾವಳಿ: ಚಂಡಮಾರುತ ಪ್ರಭಾವದ ಮಳೆ, ಒಂದೇ ದಿನದಲ್ಲಿ ಮುಂಗಾರು ಪ್ರವೇಶ ನಿರೀಕ್ಷೆ!
ಬಿಪೋರ್‌ಜೊಯ್ ಚಂಡಮಾರುತ ಪ್ರಭಾವದಿಂದ ಕರಾವಳಿಯಲ್ಲಿ ಶುಕ್ರವಾರವೂ ಮಳೆ ಕಾಣಿಸಿದೆ. ಕೇರಳಕ್ಕೆ ಗುರುವಾರ ಮುಂಗಾರು ಆಗಮಿಸಿದ್ದು, ಇನ್ನು ಎರಡು ದಿನಗಳಲ್ಲಿ ಕರಾವಳಿಗೆ ಕಾಲಿಡಲಿದೆ. ಅದಕ್ಕೂ ಮೊದಲೇ ದ.ಕ.ಜಿಲ್ಲೆಯಲ್ಲಿ ಮಳೆ ಬಂದಿದೆ.
ಮಂಗಳೂರು (ಜೂ.10) ಬಿಪೋರ್‌ಜೊಯ್ ಚಂಡಮಾರುತ ಪ್ರಭಾವದಿಂದ ಕರಾವಳಿಯಲ್ಲಿ ಶುಕ್ರವಾರವೂ ಮಳೆ ಕಾಣಿಸಿದೆ. ಕೇರಳಕ್ಕೆ ಗುರುವಾರ ಮುಂಗಾರು ಆಗಮಿಸಿದ್ದು, ಇನ್ನು ಎರಡು ದಿನಗಳಲ್ಲಿ ಕರಾವಳಿಗೆ ಕಾಲಿಡಲಿದೆ. ಅದಕ್ಕೂ ಮೊದಲೇ ದ.ಕ.ಜಿಲ್ಲೆಯಲ್ಲಿ ಮಳೆ ಬಂದಿದೆ.
ಬೆಳಗ್ಗೆ ಬಿಸಿಲಿನ ಝಳ ಆರಂಭವಾಗುವ ಹೊತ್ತಿಗೆ ಹಠಾತ್ತನೆ ಮೋಡ ಕವಿದು ಮಂಗಳೂರಿನಲ್ಲಿ ಮಳೆ ಸುರಿದಿದೆ. ಸುಮಾರು 15 ನಿಮಿಷಗಳ ಕಾಲ ಹಗುರ ಮಳೆಯಾಗಿದೆ. ಇದೇ ವೇಳೆಗೆ ಗ್ರಾಮೀಣ ಪ್ರದೇಶಗಳಲ್ಲೂ ಸಾಮಾನ್ಯ ಮಳೆ ಸುರಿದಿದೆ. ಸುಳ್ಯ, ಪುತ್ತೂರು, ಬೆಳ್ತಂಗಡಿ ಹಾಗೂ ಬಂಟ್ವಾಳ ಪ್ರದೇಶಗಳಲ್ಲಿ ಮಳೆಯಾಗಿದೆ. ಸಂಜೆ ವೇಳೆಯೂ ಮೋಡ, ಮಳೆ ಮುಂದುವರಿದಿದೆ.
Cyclone Biparjoy: ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ, ಹವಾಮಾನ ಇಲಾಖೆ ಮುನ್ಸೂಚನೆ!
ಚಂಡಮಾರುತ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರಿನ ಕಡಲ ಕಿನಾರೆಯಲ್ಲಿ ನೀರಿಗಿಳಿಯಲು ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಸಮುದ್ರದಲ್ಲಿ ಅಲೆಯಬ್ಬರ ತಕ್ಕಮಟ್ಟಿಗೆ ಕಾಣಿಸಿದೆ. ಚಂಡಮಾರುತ ಪ್ರಭಾವ ಎದುರಿಸಲು ಜಿಲ್ಲಾಡಳಿತ ಸನ್ನದ್ಧ ಸ್ಥಿತಿಯಲ್ಲಿದೆ.
ತುಂಬೆ ಡ್ಯಾಂ ನೀರಿನ ಮಟ್ಟ4.3 ಮೀಟರ್:
ಮಂಗಳೂರು ಮಹಾನಗರಕ್ಕೆ ನೀರು ಪೂರೈಸುವ ಬಂಟ್ವಾಳದ ತುಂಬೆ ಡ್ಯಾಂನಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ4.3 ಮೀಟರ್‌ನಲ್ಲಿದೆ. ಇನ್ನೆರಡು ದಿನಗಳಲ್ಲಿ ಮುಂಗಾರು ಮಳೆಯ ನಿರೀಕ್ಷೆ ಇರುವುದರಿಂದ ನದಿಯಲ್ಲಿ ನಾಲ್ಕು ಪಂಪ್‌ಗಳಿಂದ ಮಂಗಳೂರಿಗೆ ನೀರು ಪೂರೈಸಲಾಗುತ್ತಿದೆ. ಸದ್ಯ ಮಂಗಳೂರಿನಲ್ಲಿ ಎರಡು ದಿನಕ್ಕೊಮ್ಮೆ ನೀರಿನ ರೇಷನಿಂಗ್ ನಡೆಯುತ್ತಿದ್ದು, ಇದು ಮಳೆಗಾಲ ಶುರುವಾದರೆ ರದ್ದುಗೊಳ್ಳಲಿದೆ. ಪ್ರಸಕ್ತ ಸುರತ್ಕಲ್ ಮತ್ತಿತರ ಕಡೆಗಳಲ್ಲಿ ಎತ್ತರ ಪ್ರದೇಶಗಳಿಗೆ ನೀರು ಪೂರೈಕೆಗೆ ಶ್ರಮಿಸಲಾಗುತ್ತಿದೆ.
11ರಂದು ಮುಂಗಾರು ಪ್ರವೇಶ:
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಜೂ.11ರಂದು ಮುಂಗಾರು ಮಳೆ ಕೇರಳದಿಂದ ಕರ್ನಾಟಕ ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ ಜೂ.10 ಮತ್ತು 11ರಂದು ಯೆಲ್ಲೋ ಅಲರ್ಚ್ ಘೋಷಿಸಲಾಗಿದೆ.
2019ರಲ್ಲೂ ತಡವಾಗಿ ಮುಂಗಾರು ಆಗಮನ
ಕರಾವಳಿಗೆ ಮುಂಗಾರು ಪ್ರವೇಶ ವಿಳಂಬವಾಗಿರುವುದು ಇದೇ ಮೊದಲಲ್ಲ. 2019ರಲ್ಲೂ ಇದೇ ರೀತಿ ವಿಳಂಬವಾಗಿ ಮುಂಗಾರು ಆಗಮಿಸಿತ್ತು.
ಪ್ರತಿ ವರ್ಷ ಹೆಚ್ಚಾಗಿ ಜೂನ್ ಆರಂಭದಲ್ಲೇ ಮಳೆಗಾಲ ಆರಂಭವಾಗುವುದು ಕ್ರಮ. ಆದರೆ ಈ ಬಾರಿ ಭಾರತೀಯ ಹವಾಮಾನ ಇಲಾಖೆ ಪ್ರಕಾರ ಜೂ.11ರಂದು ದ.ಕ.ಜಿಲ್ಲೆಗೆ ಮುಂಗಾರು ಪ್ರವೇಶಿಸಲಿದೆ. ಅದಕ್ಕೂ ಮೊದಲೇ ಚಂಡಮಾರುತ ಪ್ರಭಾವದಿಂದ ದ.ಕ. ಜಿಲ್ಲೆಯ ಅಲ್ಲಲ್ಲಿ ಮಳೆಯಾಗಿದೆ.
2019ರಲ್ಲಿ ಮಳೆ ಒಂದು ವಾರ ತಡವಾಗಿ ದ.ಕ.ಜಿಲ್ಲೆಗೆ ಆಗಮಿಸಿತ್ತು. ಅಂದರೆ ಜೂ.11ರಂದು ಮುಂಗಾರು ಪ್ರವೇಶಿಸಿತ್ತು. ಅದಕ್ಕೂ ಮೊದಲು ಜೂ.3 ಮತ್ತು 6ರಂದು ಸಣ್ಣ ಪ್ರಮಾಣದಲ್ಲಿ ಮಳೆ ಬಂದಿತ್ತು. 2020-2021 ಮತ್ತು 2022ರಲ್ಲಿ ಮೇ ತಿಂಗಳಲ್ಲೇ ಬೇಸಗೆ ಮಳೆ ಬಂದಿತ್ತು. ಮೇ 30ರಿಂದಲೇ ಮಳೆಗಾಲ ಆರಂಭವಾದಂತಿತ್ತು. ಆದರೆ ಈ ಬಾರಿ ಮಾತ್ರ ಅಡಿಮೇಲಾಗಿದೆ. ಜೂನ್ ಬಂದರೂ ಮಳೆಗಾಗಿ ಕಾಯುವಂತಾಗಿದೆ.
ಜನವರಿಯಿಂದ ಡಿಸೆಂಬರ್ ವರೆಗೆ ಜಿಲ್ಲೆಯ ನಿರೀಕ್ಷಿತ ಒಟ್ಟು ಮಳೆ 4,006.40 ಮಿಲಿ ಮೀಟರ್ ಆಗಿದ್ದು, 2019ರಲ್ಲಿ 4,057 ಮಿ.ಮೀ, 2020ರಲ್ಲಿ 3,917.60 ಮಿ.ಮೀ, 2021ರಲ್ಲಿ 3,963.40 ಮಿ.ಮೀ. ಹಾಗೂ 2023ರಲ್ಲಿ ಜೂನ್ 7ರ ವರೆಗೆ 128.30 ಮಿ.ಮೀ. ಮಳೆ ದಾಖಲಾಗಿದೆ.
ನ್ಯಾನೋ ಯೂರಿಯಾ ಬಳಕೆಗೆ ಒತ್ತು
ದ.ಕ.ಜಿಲ್ಲೆಯಲ್ಲಿ ಭತ್ತ ಬೆಳೆಗೆ ಸಾಕಷ್ಟುರಸಗೊಬ್ಬರ ದಾಸ್ತಾನು ಇರಿಸಲಾಗಿದೆ. ಒಟ್ಟು 7,827.928 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು, ಇದರಲ್ಲಿ ಡಿಎಪಿ 146.7 ಮೆ.ಟನ್, ಎಂಒಪಿ 988.083 ಮೆ.ಟನ್, ಎನ್‌ಪಿಕೆಎಸ್ 4,898.939 ಮೆ.ಟನ್ ಹಾಗೂ ಯೂರಿಯಾ 1,413.132 ಮೆ.ಟನ್ ಇದೆ.
ಈ ಬಾರಿಯ ಮುಂಗಾರು ಬೇಡಿಕೆ ಒಟ್ಟು 31,035 ಮೆ.ಟನ್ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಯೂರಿಯಾ 3,181 ಮೆ.ಟನ್, ಡಿಎಪಿ 2,136 ಮೆ.ಟನ್, ಎಂಒಪಿ 3,773 ಮೆ.ಟನ್, ಎನ್‌ಪಿಕೆ 7,131 ಮೆ.ಟನ್, ಎಸ್‌ಎಸ್‌ಪಿ 784 ಮೆ.ಟನ್ ಹಾಗೂ ನ್ಯಾನೋ ಯೂರಿಯಾ 14,030 ಮೆ.ಟನ್ ಗುರಿ ಕಾಣಿಸಲಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ತಿಳಿಸಿದೆ.
ಒಂದು ವಾರ ತಡವಾಗಿ ಕೊನೆಗೂ ಕೇರಳಕ್ಕೆ ಕಾಲಿಟ್ಟ ಮುಂಗಾರು: ಕೃಷಿ ಚಟುವಟಿಕೆಗಳಿಗೆ ಚಾಲನೆ
ರೈತರ ಬೇಡಿಕೆಯ ಪ್ರಮಾಣದಷ್ಟುರಸಗೊಬ್ಬರ ದಾಸ್ತಾನು ಇದೆ. ಈ ಬಗ್ಗೆ ಎಲ್ಲ ಡೀಲರ್‌ಗಳನ್ನು ಸಂಪರ್ಕಿಸಿ ಖಚಿತಪಡಿಸಲಾಗಿದೆ. ಈ ಬಾರಿಯಿಂದ ನ್ಯಾನೋ ಯೂರಿಯಾ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರ ಬಳಕೆಯಿಂದ ರೈತರಿಗೆ ಸಾಕಾಟ ವೆಚ್ಚದಲ್ಲಿ ಕಡಿತ ಹಾಗೂ ಅನುಕೂಲವಾಗಲಿದ್ದು, ಸರ್ಕಾರಕ್ಕೂ ಸಬ್ಸಿಡಿಯಲ್ಲಿ ಉಳಿತಾಯವಾಗಲಿದೆ.
-ಕೆಂಪೇ ಗೌಡ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ದ.ಕ.