
ವಡೋದರಾ [ಡಿ.27] : ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಗುಜರಾತ್‌ನ ರೈತರಿಗ ಪಾಕಿಸ್ತಾನದ ಕಡೆಯಿಂದ ವಿನೂತನ ದಾಳಿಗೆ ತುತ್ತಾಗಿದ್ದಾರೆ. ಪಾಕಿಸ್ತಾನದ ಕಡೆಯಿಂದ ಗುಜರಾತ್‌ನ ಕೃಷಿ ಪ್ರದೇಶಗಳ ಮೇಲೆ ಲಕ್ಷಾಂತರ ಸಂಖ್ಯೆಯಲ್ಲಿ ಮಿಡತೆಗಳು ದಾಳಿ ಇಟ್ಟಿದ್ದು ಭಾರೀ ಪ್ರಮಾಣದಲ್ಲಿ ಬೆಳೆ ನಾಶ ಮಾಡಿವೆ. ಈ ಹಿನ್ನೆಲೆಯಲ್ಲಿ ಮಿಡತೆಗಳ ಹಾವಳಿ ತಡೆಗೆ ಕೇಂದ್ರ ಸರ್ಕಾರ 11 ತಂಡಗಳನ್ನು ಗುಜರಾತಿಗೆ ಕಳುಹಿಸಿಕೊಟ್ಟಿದೆ.
ಹೆಚ್ಚಿನ ದೂರದ ವರೆಗೆ ಹಾರಾಡುವ ಸಾಮರ್ಥ್ಯ ಹೊಂದಿರುವ ಸಹಸ್ರ ಸಹಸ್ರ ಸಂಖ್ಯೆಯ ಮಿಡತೆಗಳು ಬನಸ್ಕಾಂತ, ಮೆಹ್ಸಾನಾ, ಕಚ್, ಪಠಾಣ್ ಮತ್ತು ಸಬರ್‌ಕಾಂತ ಜಿಲ್ಲೆಗಳಲ್ಲಿ ಕೆಳೆದ ಕೆಲವು ದಿನಗಳಿಂದ ದಾಳಿ ನಡೆಸುತ್ತಿದ್ದು, ಸಾಸಿವೆ, ಜತ್ರೊಫಾ, ಹತ್ತಿ, ಜೀರಿಗೆ, ಬಟಾಟೆ ಮತ್ತು ಗೋಧಿ ಬೆಳೆಗಳನ್ನು ಹಾಳು ಮಾಡುತ್ತಿವೆ. ಈ ಮಿಡತೆಗಳು ಪಾಕಿಸ್ತಾನದ ಮರುಭೂಮಿ ಪ್ರದೇಶದಿಂದ ಗುಜರಾತಿಗೆ ಆಗಮಿಸುತ್ತಿವೆ. ಕಳೆದ ಒಂದು ತಿಂಗಳಲ್ಲಿ ಮಿಡತೆಗಳು ಎರಡನೇ ಬಾರಿಗೆ ನಮ್ಮ ಹೊಲದ ಮೇಲೆ ದಾಳಿ ನಡೆಸಿವೆ. ದಶಕಗಳ ಬಳಿಕ ಈ ರೀತಿಯ ವಿದ್ಯಮಾನ ಸಂಭವಿಸುತ್ತಿದೆ ಎಂದು ರೈತರು ಹೇಳಿದ್ದಾರೆ. ಬನಸ್ಕಾಂತ ಜಿಲ್ಲೆಯೊಂದರಲ್ಲೇ 5000 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ರೀತಿಯ ಬೆಳೆಗೆ ಹಾನಿಯಾಗಿದೆ.
ನಮ್ಮದೇ ಜಮೀನಲ್ಲಿ ನಾವು ಜೀತದಾಳು: ಧರ್ಮವೀರ್ ಸಂಕಟ ತರಿಸಿದ ಅಳು!..
ಮಿಡತೆಗಳ ಹಾವಳಿ ತಡೆಗೆ ಕೃಷಿ ಇಲಾಖೆ ಕ್ರಮ ಕೈಗೊಂಡಿದೆ. ಕೇಂದ್ರ ಸರ್ಕಾರ ಕೂಡಾ ತಜ್ಞರನ್ನು ಒಳಗೊಂಡ 11 ತಂಡಗಳನ್ನು ರಾಜ್ಯಕ್ಕೆ ಕಳುಹಿಸಿಕೊಟ್ಟಿದೆ. ಅಲ್ಲದೇ ಡ್ರೋನ್‌ಗಳ ಮೂಲಕ ಔಷಧ ಸಿಂಪಡನೆಗೆ ಉದ್ದೇಶಿಸಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ.
ಇದೇ ವೇಳೆ ಹೊಲಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚುವುದು, ಡ್ರಮ್ ಹಾಗೂ ಪಾತ್ರೆಗಳನ್ನು ಬಡಿಯುವುದು, ಮಿನಿ ಟ್ರಕ್, ವಾಹನಗಳ ಹಾರ್ನ್ ಬಾರಿಸಿ ಹಾಗೂ ಟೇಬಲ್ ಫ್ಯಾನ್‌ಗಳನ್ನು ಹಚ್ಚಿ ಹೊಲದಿಂದ ಮಿಡೆತೆಗಳನ್ನು ಓಡಿಸುವಂತೆ ರೈತರಿಗೆ ಕೃಷಿ ಇಲಾಖೆ ಸಲಹೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ