ಭೋಪಾಲ್ (ಡಿ. 12): ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ತೀವ್ರಗಾಯಗೊಂಡು ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಆರೋಗ್ಯದಲ್ಲಿ ಏರಿಳಿತವಿದೆ. ಆದರೆ ಈ ಜೀವನ್ಮರಣ ಹೋರಾಟದಲ್ಲಿ ವರುಣ್ ಗೆದ್ದೇ ಗೆಲ್ಲುತ್ತಾರೆ. ಏಕೆಂದರೆ ಅವನೊಬ್ಬ ವೀರ ಸೇನಾನಿ, ಹೋರಾಟಗಾರ ಎಂದು ಅವರ ತಂದೆ ಕರ್ನಲ್ (ನಿವೃತ್ತ)ಕೆ.ಪಿ.ಸಿಂಗ್(KP Singh) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ವರುಣ್ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತಿದೆ. ಏನನ್ನೂ ಸ್ಪಷ್ಟವಾಗಿ ಹೇಳಲಾಗುತ್ತಿಲ್ಲ. ಪ್ರತಿ ಗಂಟೆಗೊಮ್ಮೆ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದೆ. ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಮತ್ತು ಶ್ರೇಷ್ಠ ತಜ್ಞರು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ವರುಣ್ ಈ ಜೀವನ್ಮರಣ ಹೋರಾಟದಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ವರುಣ್ ಚೇತರಿಕೆಗಾಗಿ ಇಡೀ ದೇಶವೇ ಪ್ರಾರ್ಥಿಸುತ್ತಿದೆ. ವರುಣ್ ಪರಿಚಯವೇ ಇಲ್ಲದ ಸಾಕಷ್ಟುಜನರು ಬಂದು ಭೇಟಿಯಾಗುತ್ತಿದ್ದಾರೆ. ಮಾತೆಯರು ವರುಣ್ ಅವರನ್ನು ನೋಡಬೇಕೆಂದು ಮನವಿ ಮಾಡುತ್ತಿದ್ದಾರೆ. ಅಂಥ ಪ್ರೀತಿ ಮತ್ತು ವಾತ್ಸಲ್ಯವನ್ನು ವರುಣ್ ಗಳಿಸಿದ್ದಾರೆ. ಅವರು ಚೇತರಿಕೆಯಾಗಿ ವಾಪಸ್ ಬಂದೇ ಬರುತ್ತಾರೆ. ಅವರೊಬ್ಬ ಹೋರಾಟಗಾರ ಎಂದು ಹೆಮ್ಮೆಯಿಂದ ಹೇಳಿದರು. ವರುಣ್ ಅವರಿಗೆ ಕಳೆದ ಆಗಸ್ಟ್‌ನಲ್ಲಿ ಶೌರ್ಯಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ತಮಿಳುನಾಡಿನ ಕೂನೂರಿ(Coonoor)ನಲ್ಲಿ ಬುಧವಾರ ಸಂಭವಿಸಿದ ಎಂಐ-17ವಿ5 ಸೇನಾ ಕಾಪ್ಟರ್ ಪತನದಲ್ಲಿ ಸಶಸ್ತ್ರ ಸೇನಾ ಪಡೆ ಮುಖ್ಯಸ್ಥ ಜ.ಬಿಪಿನ್ ರಾವತ್(Bipin Rawat) ಸೇರಿ 13 ಮಂದಿ ಸಾವಿಗೀಡಾಗಿದ್ದು, ವರುಣ್(Varun) ಒಬ್ಬರೇ ಉಳಿದುಕೊಂಡಿದ್ದರು.
IAF Chopper Crash: ಬದುಕುಳಿದ ಕ್ಯಾಪ್ಟನ್ ವರುಣ್ ಸಿಂಗ್ ಚಿಕಿತ್ಸೆಗೆ ಬೆಂಗ್ಳೂರಿಗೆ ಶಿಫ್ಟ್
ಹೆಲಿಕಾಪ್ಟರ್ ಅವಘಡದಲ್ಲಿ ಒಟ್ಟು 13 ಮಂದಿ ಸಾವನ್ನಪ್ಪಿದ್ದರು. ಮೂಲಗಳ ಪ್ರಕಾರ ಕ್ಯಾ. ವರುಣ್ ಸಿಂಗ್ ಅವರು ಶೇ.80ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಭಾರತದಲ್ಲಿ ವಾಯುಪಡೆ( Air Force) ಯ ನಿರ್ವಹಣೆಯ ಎರಡು ಆಸ್ಪತ್ರೆಗಳಿವೆ. ಒಂದು ಕೊಯಮತ್ತೂರಿ(Coimbatore)ನಲ್ಲಿರುವ ಏರ್‌ಫೋರ್ಸ್ ಆಸ್ಪತ್ರೆ. ಮತ್ತೂಂದು, ಬೆಂಗಳೂರಿನಲ್ಲಿರುವ ಕಮಾಂಡ್ ಆಸ್ಪತ್ರೆ. ಕ್ಯಾ. ವರುಣ್ ಸಿಂಗ್‌ರನ್ನು ಬೆಂಗಳೂರಿನ ಸೇನಾ ಆಸ್ಪತ್ರೆಗೆ ಸೇರಿಸಲಾಗಿದೆ. ಇಲ್ಲಿ ಸರ್ವವಿಧದ ಚಿಕಿತ್ಸೆ ಲಭ್ಯ ಬೆಂಗಳೂರಿನ ಕಮಾಂಡ್ ಹಾಸ್ಪಿಟಲ್‌ಗೆ ಸೇನಾ ವಲಯದಲ್ಲಿ ಭಾರೀ ಒಳ್ಳೆಯ ಹೆಸರಿದೆ. ಈ ಆಸ್ಪತ್ರೆಯಲ್ಲಿ ದೇಹಾರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ವಿಭಾಗಗಳ ಅತ್ಯುನ್ನತ ತಜ್ಞ ವೈದ್ಯರು ಲಭ್ಯವಿದ್ದು, ಪ್ರತಿಯೊಂದು ವಿಭಾಗದಲ್ಲೂ ತೃತೀಯ ಹಂತದ ಚಿಕಿತ್ಸೆಗೆ ಅವಕಾಶವಿದೆ. ಕಳೆದ ವರ್ಷ, ಅತ್ಯಾಧುನಿಕ ಹೃದಯ ಶಸ್ತ್ರಚಿಕಿತ್ಸಾ ವ್ಯವಸ್ಥೆಯನ್ನು ಅನಾವರಣಗೊಳಿಸಲಾಗಿದೆ.
IAF Helicopter Crash ಬೆಂಗಳೂರು ಕಮಾಂಡ್ ಆಸ್ಪತ್ರೆಯಲ್ಲಿರುವ ಕ್ಯಾಪ್ಟನ್ ವರುಣ್ ಸಿಂಗ್ ಹೆಲ್ತ್ ಬುಲೆಟಿನ್ ಬಿಡುಗಡೆ
ಈ ಆಸ್ಪತ್ರೆಯ ಅತ್ಯುನ್ನತ ವೈದ್ಯಕೀಯ ಸೇವೆಗಳಿಗಾಗಿ, ರೋಗಿಗಳ ಸುರಕ್ಷತಾ ಪಾಲನೆಗಾಗಿ ಈ ಆಸ್ಪತ್ರೆಗೆ ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ಸಂದಿದೆ. 1991, 2004, 2009 ಹಾಗೂ 2011ರಲ್ಲಿ ಈ ಪ್ರಶಸ್ತಿಗಳು ಈ ಆಸ್ಪತ್ರೆಗೆ ಸಂದಿದೆ. ದಕ್ಷಿಣ ಭಾರತದ ಮೂರು ಸಶಸ್ತ್ರ ಪಡೆಗಳ ಯೋಧರು, ಅಧಿಕಾರಿಗಳು, ಅವರ ಹೆತ್ತವರು ಹಾಗೂ ಕುಟುಂಬದವರು, ನಿವೃತ್ತ ಯೋಧರು, ನಿವೃತ್ತ ಅಧಿಕಾರಿಗಳು ಹಾಗೂ ಅವರ ಕುಟುಂಬದವರಿಗೆ ಇಲ್ಲಿ ಉಚಿತವಾಗಿ ಚಿಕಿತ್ಸೆ ಸಿಗುತ್ತದೆ. ಸುರಕ್ಷಾ ಕಾರ್ಯಕ್ರಮ ಹಾಗೂ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯಲ್ಲಿ ಶ್ರೇಷ್ಠವಾದ ವ್ಯವಸ್ಥೆಯನ್ನು ಹೊಂದಿದ್ದು ಇತರ ಆಸ್ಪತ್ರೆಗಳಿಗೆ ಮಾದರಿಯೆನಿಸಿದೆ. 1816ರಲ್ಲಿ ಬ್ರಿಟಿಷ್ ಪಡೆಗಳಲ್ಲಿನ ಯೋಧರಿಗಾಗಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತು. ಆರಂಭದಲ್ಲಿ 50 ಹಾಸಿಗೆ ಸಾಮರ್ಥ್ಯವಿದ್ದ ಈ ಆಸ್ಪತ್ರೆಯನ್ನು 2ನೇ ಮಹಾಯುದ್ಧದ ಸಂದರ್ಭದಲ್ಲಿ 300 ಹಾಸಿಗೆ ಸಾಮರ್ಥ್ಯಕ್ಕೆ ಉನ್ನತೀಕರಿಸಲಾಯಿತು. 1962ರಲ್ಲಿ ಈ ಸಾಮರ್ಥ್ಯವನ್ನು 602 ಹಾಸಿಗೆಗೆ ವಿಸ್ತರಿಸಲಾಯಿತು. 1968ರ ಮೇ 1ರಂದು ಭಾರತೀಯ ವಾಯುಪಡೆಯು ಇದರ ಜವಾಬ್ದಾರಿಯನ್ನು ವಹಿಸಿಕೊಂಡಿತು. 1977ರ ಡಿ. 2ರಂದು ಈ ಆಸ್ಪತ್ರೆಗೆ ಕಮಾಂಡ್ ಆಸ್ಪತ್ರೆ ಎಂದು ನಾಮಕರಣ ಮಾಡಲಾಯಿತು.