ಕೊಟ್ಟಿರುವ ಬೀರು ಕಳಪೆ, ಕೆಲವೆಡೆ ಡ್ಯಾಮೇಜ್ ಆಗಿದೆ. ಕೇಳಿದ್ದಷ್ಟು ಕೊಟ್ಟಿಲ್ಲ, ಹಣ ಕೈಸೇರಿಲ್ಲ. ಈ ಮದುವೆ ನಡೆಯಲ್ಲ ಎಂದು ಮದುವೆ ದಿನವೇ ಕ್ಯಾನ್ಸಲ್ ಮಾಡಿದ ಘಟನೆ ನಡೆದಿದೆ. ವರ ಡಿಮ್ಯಾಂಡ್ ಮತ್ತಷ್ಟು ಇಂಟ್ರೆಸ್ಟಿಂಗ್.
ಹೈದರಾಬಾದ್(ಫೆ.20): ಭಾರತದಲ್ಲಿ ವರದಕ್ಷಿಣ ನಿಷೇಧ. ಆದರೂ ಕದ್ದು ಮುಚ್ಚಿ ವರದಕ್ಷಿಣೆ, ಕೊಡು ಕೊಳ್ಳುವಿಕೆ ನಡೆಯುತ್ತಲೇ ಇದೆ. ಮತ್ತೆ ಕೆಲವರು ಗಿಫ್ಟ್ ಅನ್ನೋ ಹೆಸರಿನಲ್ಲೂ ವರದಕ್ಷಿಣೆ ಸಂಪ್ರದಾಯ ಮುಂದುವರಿಸಿದ್ದಾರೆ. ಕಷ್ಟಪಟ್ಟು ವರನ ಕಡೆಯವರು ಕೇಳಿದ ವರದಕ್ಷಿಣೆ ಹೊಂದಿಸಿದ್ದಾರೆ. ಮದುವೆ ದಿನ ಬಂದೇ ಬಿಟ್ಟಿದೆ. ಬಿರಿಯಾನಿ ಸೇರಿದಂತೆ ಎಲ್ಲಾ ಅಡುಗೆಗಳು ತಯಾರಾಗಿದೆ. ಮದುವೆ ಸಮಯ ಆದರೂ ವರನ ಪತ್ತೆ ಇಲ್ಲ. ಫೋನ್ ಸ್ವೀಕರಿಸುತ್ತಿಲ್ಲ. ವಧುವಿನ ತಂದೆ ನೇರವಾಗಿ ವರನ ಮನೆಗೆ ತೆರಳಿದಾಗ ವರದಕ್ಷಿಣ ಸರಿಯಾಗಿಲ್ಲ, ನೀವು ಕೊಟ್ಟಿರುವ ಬೀರ ಕಳಪೆಯಾಗಿದೆ. ನಾವು ಕೇಳಿದ್ದು ಸಿಕ್ಕಿಲ್ಲ. ಹೀಗಾಗಿ ನಿಮ್ಮ ಮಗಳ ಮದುವೆಯಾಗಲ್ಲ ಎಂದಿದ್ದಾರೆ.ಈ ಘಟನೆ ನಡೆದಿರುವುದು ಹೈದರಾಬಾದ್‌ನಲ್ಲಿ.
22 ವರ್ಷದ ಹೀನಾ ಫಾತಿಮಾ ಮದುವೆ 25 ವರ್ಷದ ಚಾಲಕ ಮೊಹಮ್ಮದ್ ಝಾಕೀರ್ ಜೊತೆ ನಿಗದಿಯಾಗಿತ್ತು. ಮದುವೆ ನಿಶ್ಚಯ ದಿನ ವರನ ಕಡೆಯವರು ಹಲವು ಡಿಮಾಂಡ್ ಮಾಡಿದ್ದಾರೆ. ವರದಕ್ಷಿಣೆ ರೂಪದಲ್ಲಿ ಹಣ, ಮನೆ ವಸ್ತುಗಳನ್ನು ಕೇಳಿದ್ದಾರೆ. ಮದುವೆ, ಮಗಳ ಒಡವೆಗೆ ಹಣ ಖರ್ಚಾಗಿತ್ತು. ಹೀಗಾಗಿ ಹುಡುಗನ ಪೋಷಕರು ಕೇಳಿದ ಎಲ್ಲಾ ವಸ್ತುಗಳನ್ನು ಕೊಡಲು ಸಾಧ್ಯವಾಗಿಲ್ಲ. ಬೀರು, ಮಿಕ್ಸಿ ಸೇರಿದಂತೆ ಕೆಲ ವಸ್ತುಗಳನ್ನು ನೀಡಿದ್ದಾರೆ.
ಮಸೀದಿಯಲ್ಲಿ ಮದುವೆ ಆಯೋಜಿಸಲಾಗಿದೆ. ಇತ್ತ ಹುಡುಗಿ ಪೋಷಕರು ಮದುವೆಗೆ ಎಲ್ಲಾ ತಯಾರಿ ಮಾಡಿದ್ದಾರೆ. ಮದುವೆ ಸಂಪೂರ್ಣ ಖರ್ಚು ಕೂಡ ಹುಡುಗಿ ಪೋಷಕರೇ ಹಾಕಿದ್ದಾರೆ. ಮದುವೆ ದಿನ ಬಂದೇ ಬಿಟ್ಟಿದೆ. ಎಲ್ಲಾ ತಯಾರಿ ಮಾಡಿಕೊಂಡು ಮಸೀದಿಗೆ ಆಗಮಿಸಿದ ಹುಡುಗಿ ಕಡೆಯವರು ಅದೆಷ್ಟು ಹೊತ್ತು ಕಾದರೂ ವರನ ಕಡೆಯವರ ಪತ್ತೆ ಇಲ್ಲ. ಸಮಯ ಮೀರುತ್ತಿದ್ದರೂ ವರ ಯಾವುದೇ ಸುಳಿವಿಲ್ಲ.
ಫೋನ್ ಮಾಡಿದರೂ ಕೆಲವರ ಫೋನ್ ಸ್ವಿಚ್ ಆಫ್ ಆಗಿದ್ದರೆ, ಇತ್ತ ಹಲವರು ಫೋನ್ ಸ್ವೀಕರಿಸಿಲ್ಲ. ಇತ್ತ ಆತಿಥಿಗಳು ಆಗಮಿಸಿದ್ದಾರೆ. ಆದರೆ ವರನ ಪತ್ತೆ ಇಲ್ಲ. ಆತಂಕಗೊಂಡ ಹುಡಿಗಿಯ ತಂದೆ ನೇರವಾಗಿ ವರನ ಮನಗೆ ತೆರಳಿದ್ದಾರೆ. ಮದುವೆ ಇದ್ದರೂ ನೀವು ಬಂದಿಲ್ಲ ಯಾಕೆ? ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ನೀವು ವರದಕ್ಷಿಣೆಯಾಗಿ ಕೊಟ್ಟ ಬೀರು ತೀರಾ ಕಳಪೆಯಾಗಿದೆ. ಇದು ಸೆಕೆಂಡ್ ಹ್ಯಾಂಡ್ ಬೀರು. ಇನ್ನು ಕೊಟ್ಟಿರುವ ವಸ್ತುಗಳು ಸರಿಯಿಲ್ಲ. ನಾವು ಕೇಳಿದ ವಸ್ತುಗಳನ್ನು ತಲುಪಿಸಿಲ್ಲ. ಹಣ ಕೈಸೇರಿಲ್ಲ. ಹೀಗಾಗಿ ನಿಮ್ಮ ಮಗಳನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದಿದ್ದಾರೆ.
ಹುಡುಗ ಹಾಗೂ ಆತನ ಫೋಷಕರ ಮಾತು ಕೇಳಿ ಹುಡುಗಿಯ ತಂದೆ ದಂಗಾಗಿದ್ದಾರೆ. ಮದುವೆ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳಲಾಗಿದೆ. ಹಂತ ಹಂತವಾಗಿ ತಲುಪಿಸುತ್ತೇವೆ. ಮಗಳ ಭವಿಷ್ಯ ಹಾಳುಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಆದರೆ ಹುಡುಗ ಸುತಾರಾಂ ಒಪ್ಪಿಲ್ಲ. ಆಕ್ರೋಗೊಂಡ ಹುಡುಗಿ ತಂದೆ ದೂರು ದಾಖಲಿಸಿದ್ದಾರೆ. ವರದಕ್ಷಿಣ ಅಡಿ ಇದೀಗ ಪ್ರಕರಣ ದಾಖಲಾಗಿದೆ.