ಗೃಹಲಕ್ಷ್ಮೀ ರೀತಿ 12 ರಾಜ್ಯದಲ್ಲಿ ಸ್ಕೀಂ : ₹1.7 ಲಕ್ಷ ಕೋಟಿ ವೆಚ್ಚ!

Sujatha NR   | Kannada Prabha
Published : Nov 06, 2025, 06:07 AM IST
money

ಸಾರಾಂಶ

ಮಹಿಳಾ ಮತದಾರರನ್ನು ಸೆಳೆಯುವ ಉದ್ದೇಶದಿಂದ ಕರ್ನಾಟಕದಲ್ಲಿ ಗೃಹಲಕ್ಷ್ಮೀ ಸೇರಿ ದೇಶಾದ್ಯಂತ 12 ರಾಜ್ಯಗಳು ಮಹಿಳಾ ಕೇಂದ್ರಿತ ನೇರ ಹಣ ವರ್ಗಾವಣೆ ಯೋಜನೆಗಳನ್ನು ಜಾರಿ ಮಾಡಿದ್ದು, ಇದರಡಿ 2025-26ನೇ ಸಾಲಿನಲ್ಲಿ ಒಟ್ಟಾರೆ 1.68 ಲಕ್ಷ ಕೋಟಿ ರು.ನಷ್ಟು ವಿನಿಯೋಗ ಮಾಡಲಾಗುತ್ತಿದೆ ಎಂದು ವರದಿಯೊಂದು ಹೇಳಿದೆ.

ನವದೆಹಲಿ : ಮಹಿಳಾ ಮತದಾರರನ್ನು ಸೆಳೆಯುವ ಉದ್ದೇಶದಿಂದ ಕರ್ನಾಟಕದಲ್ಲಿ ಗೃಹಲಕ್ಷ್ಮೀ ಸೇರಿ ದೇಶಾದ್ಯಂತ 12 ರಾಜ್ಯಗಳು ಮಹಿಳಾ ಕೇಂದ್ರಿತ ನೇರ ಹಣ ವರ್ಗಾವಣೆ ಯೋಜನೆಗಳನ್ನು ಜಾರಿ ಮಾಡಿದ್ದು, ಇದರಡಿ 2025-26ನೇ ಸಾಲಿನಲ್ಲಿ ಒಟ್ಟಾರೆ 1.68 ಲಕ್ಷ ಕೋಟಿ ರು.ನಷ್ಟು ವಿನಿಯೋಗ ಮಾಡಲಾಗುತ್ತಿದೆ ಎಂದು ವರದಿಯೊಂದು ಹೇಳಿದೆ.

3 ವರ್ಷಗಳ ಹಿಂದೆ ಎರಡು ರಾಜ್ಯಗಳಿಗಷ್ಟೇ ಇಂಥ ಯೋಜನೆ ಸೀಮಿತವಾಗಿತ್ತು. ಇದೀಗ 12 ರಾಜ್ಯಗಳಿಗೆ ವಿಸ್ತರಣೆಯಾಗಿದ್ದು, ಅವುಗಳಲ್ಲಿ 6 ರಾಜ್ಯಗಳಲ್ಲಿ ಮಹಿಳಾ ಕೇಂದ್ರಿತ ಕಲ್ಯಾಣ ಯೋಜನೆಗಳಿಂದಾಗಿ ಈ ಹಣಕಾಸು ವರ್ಷದಲ್ಲಿ ಆದಾಯ ಕೊರತೆಯ ಅಂದಾಜು ಮಾಡಲಾಗಿದೆ. ಇಂಥ ಯೋಜನೆಗಳಿಂದ ರಾಜ್ಯಗಳ ಆರ್ಥಿಕತೆ ಮೇಲೆ ಭಾರೀ ಒತ್ತಡ ಹೆಚ್ಚಾಗುತ್ತಿದೆ ಎಂದು ‘ಪಿಆರ್‌ಎಸ್‌ ಲಿಜಿಸ್ಲೇಟಿವ್‌ ರೀಸರ್ಚ್‌’ ಎಂಬ ಚಿಂತಕರ ಚಾವಡಿಯ ವರದಿಯಲ್ಲಿ ಹೇಳಲಾಗಿದೆ.

ವೆಚ್ಚ ಜಿಗಿತ:

‘ಈ ಷರತ್ತು ರಹಿತ ಹಣ ವರ್ಗಾವಣೆ (ಯುಸಿಟಿ) ಯೋಜನೆಗಳಡಿ ಬಡ ಮಹಿಳೆಯರ ಖಾತೆಗೆ ನೇರವಾಗಿ ನಿರ್ದಿಷ್ಟ ಪ್ರಮಾಣದ ಹಣ ಹಾಕಲಾಗುತ್ತದೆ. ಈ ಮೂಲಕ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸುವ ಗುರಿ ಹೊಂದಲಾಗಿವೆ. 2022-23ರಲ್ಲಿ ಈ ಯೋಜನೆ ಕೇವಲ ಎರಡು ರಾಜ್ಯಗಳಿಗಷ್ಟೇ ಸೀಮಿತವಾಗಿತ್ತು. 2 ವರ್ಷಗಳ ಹಿಂದೆ ಈ ಯೋಜನೆಗಳಿಗೆ ಮಾಡುತ್ತಿದ್ದ ವೆಚ್ಚ ದೇಶದ ಜಿಡಿಪಿಯ ಶೇ.0.2ರಷ್ಟಿತ್ತು. ಇದೀಗ ಅದು ಶೇ.0.5ರಷ್ಟಾಗಿದೆ’ ಎಂದು ವರದಿ ತಿಳಿಸಿದೆ.

ಸಾಮಾನ್ಯವಾಗಿ ಈ ಯೋಜನೆಯ ಪ್ರಾಥಮಿಕ ಫಲಾನುಭವಿಗಳನ್ನು ಆದಾಯ, ವಯಸ್ಸು ಮತ್ತು ಇತರೆ ಅಂಶಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಇನ್ನು ಸದ್ಯದಲ್ಲೇ ವಿಧಾನಸಭೆ ಚುನಾವಣೆ ಎದುರಿಸುವ ರಾಜ್ಯಗಳಲ್ಲಿ ಈ ಯೋಜನೆಗೆ ಮಾಡುವ ವೆಚ್ಚದಲ್ಲೂ ದಿಢೀರ್‌ ಏರಿಕೆ ಕಂಡುಬಂದಿದೆ. ಉದಾಹರಣೆಗೆ ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಯೋಜನೆಯಡಿ ಮಹಿಳೆಯರಿಗೆ ನೀಡಲಾಗುತ್ತಿದ್ದ ಆರ್ಥಿಕ ನೆರವಿನ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕ್ರಮವಾಗಿ ಶೇ.31 ಮತ್ತು ಶೇ.15ರಷ್ಟು ಏರಿಕೆ ಮಾಡಲಾಗಿದೆ.

ಆರ್ಥಿಕ ಹೊರೆ:

ಕರ್ನಾಟಕದ ಗೃಹ ಲಕ್ಷ್ಮೀ, ತಮಿಳುನಾಡಿನ ಕಲೈನಾರ್‌ ಮಗಳಿರ್‌ ಉರಿಮೈ ಥೋಗೈ ಥಿಟ್ಟಂ, ಮಧ್ಯಪ್ರದೇಶದ ಲಾಡ್ಲಿ ಬೆಹನ್‌ ಯೋಜನೆಗಳಡಿ ಮಹಿಳೆಯರ ಖಾತೆಗೆ 1 ಸಾವಿರ ರು.ನಿಂದ 2 ಸಾವಿರ ರು. ವರೆಗೆ ನೇರವಾಗಿ ನಗದು ವರ್ಗಾವಣೆ ಮಾಡಲಾಗುತ್ತಿದೆ. ಆದರೆ, ಈ ಯೋಜನೆಗಳು ಮಹಿಳೆಯರಿಗೆ ವರವಾದರೂ ರಾಜ್ಯದ ಖಜಾನೆ ಮೇಲೆ ಭಾರೀ ಆರ್ಥಿಕ ಹೊರೆ ಸೃಷ್ಟಿಸುತ್ತಿರುವುದಂತು ಸ್ಪಷ್ಟ ಎಂದು ವರದಿ ಎಚ್ಚರಿಕೆ ನೀಡಿದೆ.

ಫ್ರೀ ಸ್ಕೀಂ ಕೈಬಿಟ್ರೆ ಕರ್ನಾಟಕ ಮಿಗತೆ ರಾಜ್ಯ:

ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ ಗೃಹ ಲಕ್ಷ್ಮೀ ಯೋಜನೆಯನ್ನು ಹೊರಗಿಟ್ಟು ನೋಡಿದರೆ ‘0.3ರಷ್ಟು ಆದಾಯ ಕೊರತೆ ರಾಜ್ಯ’ದಿಂದ ಶೇ.0.6ರಷ್ಟು ಆದಾಯ ಮಿಗತೆ ರಾಜ್ಯವಾಗಿ ಕರ್ನಾಟಕ ಬದಲಾಗಲಿದೆ. ಅದೇ ರೀತಿ ಮಧ್ಯಪ್ರದೇಶ ಕೂಡ 0.4 ಆದಾಯ ಮಿಗತೆ ರಾಜ್ಯದಿಂದ ಶೇ.1.1ರಷ್ಟು ಆದಾಯ ಮಿಗತೆ ರಾಜ್ಯವಾಗಿ ಹೊರಹೊಮ್ಮಲಿದೆ ಎಂದು ವರದಿ ತಿಳಿಸಿದೆ.

ಆರ್‌ಬಿಐ ಕೂಡ ಇತ್ತೀಚೆಗಷ್ಟೇ ಸಬ್ಸಿಡಿಗಳು ಮತ್ತು ಮಹಿಳೆಯರು, ಯುವಕರು ಮತ್ತು ರೈತರಿಗೆ ನೇರ ನಗದು ವರ್ಗಾವಣೆ ಮಾಡುವ ಯೋಜನೆಗಳಿಗೆ ಮಾಡುವ ವೆಚ್ಚದಿಂದಾಗಿ ದೇಶದ ಉತ್ಪಾಕತಾ ವೆಚ್ಚ ಕಡಿಮೆಯಾಗಲಿದೆ ಎಂದು ಎಚ್ಚರಿಸಿತ್ತು.

3 ವರ್ಷದ ಹಿಂದೆ 2 ರಾಜ್ಯಗಳಿಗೆ ಸೀಮಿತವಾಗಿದ್ದ ಮಹಿಳಾ ಕೇಂದ್ರೀತ ಯೋಜನೆ ಇದೀಗ 12 ರಾಜ್ಯಕ್ಕೆ ವಿಸ್ತರಣೆ. ಇದಕ್ಕೆ ವಾರ್ಷಿಕ 1.68 ಲಕ್ಷ ಕೋಟಿ ರು.ವೆಚ್ಚ

ಮಹಿಳಾ ಕೇಂದ್ರಿತ ಕಲ್ಯಾಣ ಯೋಜನೆಗಳಿಂದಾಗಿ ಈ ಹಣಕಾಸು ವರ್ಷದಲ್ಲಿ 6 ರಾಜ್ಯಗಳಲ್ಲಿ ಆದಾಯ ಕೊರತೆಯ ಅಂದಾಜು: ಪಿಆರ್‌ಎಸ್‌ ಸಂಸ್ಥೆಯ ವರದಿ

ಕರ್ನಾಟಕದಲ್ಲಿ ಗೃಹಲಕ್ಷ್ಮೀ ಯೋಜನೆ ರದ್ದು ಮಾಡಿದರೆ ಶೇ.0.3ರಷ್ಟು ಕೊರತೆ ಬಜೆಟ್‌ನಿಂದ ಶೇ.0.6ರಷ್ಟು ಮಿಗತೆ ಬಜೆಟ್‌ ಹೊಂದಿದ ರಾಜ್ಯವಾಗಿ ಬದಲು

ಸಬ್ಸಿಡಿ, ಮಹಿಳೆಯರು, ಯುವಕರು, ರೈತರಿಗೆ ನೇರ ನಗದು ವರ್ಗಾವಣೆ ಯೋಜನೆ ವೆಚ್ಚದಿಂದಾಗಿ ದೇಶದ ಉತ್ಪಾಕತಾ ವೆಚ್ಚ ಕಡಿಮೆ ಎಂದು ಎಚ್ಚರಿಸಿದ್ದ ಆರ್‌ಬಿಐ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಾಕ್ ಹೋಗಿದ್ದ 79 ವರ್ಷದ ಅಜ್ಜಿ ನಾಪತ್ತೆ: ನೆಕ್ಲೇಸ್‌ಗೆ ಮೊಮ್ಮಗ ಅಳವಡಿಸಿದ ಜಿಪಿಎಸ್‌ನಿಂದ ಪತ್ತೆ
ಯಾವ ಭಯವೂ ಇಲ್ಲದೆ ಬೇಲಿ ಹಾರಿ ಭಾರತ ಪ್ರವೇಶಿಸುತ್ತಿದ್ದಾರೆ ಬಾಂಗ್ಲಾದೇಶಿಗಳು, ವಿಡಿಯೋ ವೈರಲ್