ದಿಲ್ಲಿಯಲ್ಲಿ ತಲೆಯೆತ್ತಲಿದೆ ಹೊಸ ರಾಷ್ಟ್ರೀಯ ಸಂಗ್ರಹಾಗಾರ!

By Suvarna NewsFirst Published Oct 17, 2021, 9:41 AM IST
Highlights

* ಮ್ಯೂಸಿಯಂಗಳಲ್ಲಿ ಪ್ರದರ್ಶನಕ್ಕಿಡದ ವಸ್ತುಗಳ ಸಂಗ್ರಹಕ್ಕೆ ಕೇಂದ್ರೀಕೃತ ವ್ಯವಸ್ಥೆ

* ದಿಲ್ಲಿಯಲ್ಲಿ ತಲೆಯೆತ್ತಲಿದೆ ಹೊಸ ರಾಷ್ಟ್ರೀಯ ಸಂಗ್ರಹಾಗಾರ

* 2 ಲಕ್ಷ ಚದರಡಿ ವಿಸ್ತೀರ್ಣ

* 100 ವರ್ಷದ ದೂರದೃಷ್ಟಿಇರಿಸಿಕೊಂಡು ನಿರ್ಮಾಣ

ನವದೆಹಲಿ(ಅ.17): ದೆಹಲಿಯಲ್ಲಿನ ರಾಷ್ಟ್ರೀಯ ವಸ್ತು ಸಂಗ್ರಹಾಲಯ(National Museum) ಸೇರಿದಂತೆ ದೇಶದ ಯಾವುದೇ ಮ್ಯೂಸಿಯಂಗಳಲ್ಲಿ(Museum) ಪ್ರದರ್ಶನಕ್ಕೆ ಇಡದ ಲಕ್ಷಾಂತರ ಪ್ರಾಚ್ಯವಸ್ತುಗಳನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಕೇಂದ್ರೀಕೃತ ಸಂಗ್ರಹಾಗಾರವೊಂದನ್ನು ನಿರ್ಮಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪುರಾತನ ಮತ್ತು ಐತಿಹಾಸಿಕ ವಸ್ತುಗಳನ್ನು ಜತನವಾಗಿ ಕಾಪಾಡಲು ವಿದೇಶಗಳಲ್ಲಿ ಈಗಾಗಲೇ ಬಳಕೆಯಲ್ಲಿರುವ ಈ ಮಾದರಿಯನ್ನೂ ದೇಶದಲ್ಲೂ ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಮಹತ್ವದ ಸೆಂಟ್ರಲ್‌ ವಿಸ್ತಾ ಯೋಜನೆಯ ಅಂಗವಾಗಿ, ಶೀಘ್ರವೇ ರಾಷ್ಟ್ರೀಯ ವಸ್ತು ಸಂಗ್ರಹಾಲಯ ಸ್ಥಳಾಂತರ ಆಗಬೇಕಿದೆ. ಹೀಗಾಗಿ ಅಲ್ಲಿದ್ದ 1.95 ಲಕ್ಷ ಪ್ರಾಚೀನ ವಸ್ತುಗಳ ಕಥೆ ಏನಾಗಬಹುದು ಎಂಬುದು ಎಲ್ಲರ ಕಳವಳವಾಗಿತ್ತು. ಇಂಥ ಈಗಿನ ಕಳವಳ ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ಕಳವಳವನ್ನು ದೂರ ಮಾಡಲೆಂದೇ ಇದೀಗ ದೆಹಲಿಯ ಹೊರವಲಯದಲ್ಲಿ ಸುಮಾರು 2 ಲಕ್ಷ ಚದರ ಅಡಿ ವ್ಯಾಪ್ತಿ ಪ್ರದೇಶದಲ್ಲಿ ಬಹುದೊಡ್ಡ ರಾಷ್ಟ್ರೀಯ ಪ್ರಾಚ್ಯವಸ್ತು ಸಂಗ್ರಹಾಗಾರ ನಿರ್ಮಿಸಲು ಸರ್ಕಾರ ಮುಂದಾಗಿದೆ. ಅಗತ್ಯ ಬಿದ್ದರೆ ಇದನ್ನು 5 ಲಕ್ಷ ಚದರ ಅಡಿಗಳಿಗೂ ವಿಸ್ತರಿಸಬಹುದಾಗಿದೆ.

ಹಾಲಿ ದೆಹಲಿಯ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿನ 2.06 ಲಕ್ಷ ಪ್ರಾಚ್ಯವಸ್ತುಗಳ ಪೈಕಿ ಕೇವಲ 7000 ವಸ್ತುಗಳನ್ನು ಮಾತ್ರವೇ ಪ್ರದರ್ಶನಕ್ಕೆ ಇಡಲಾಗಿದೆ. ಉಳಿದವುಗಳನ್ನು ಹಾಗೆಯೇ ಸಂಗ್ರಹಿಸಿ ಇಡಲಾಗಿದೆ. ದೇಶದ ಇತರೆ ಹಲವು ಮ್ಯೂಸಿಯಂಗಳಲ್ಲೂ ಇದೇ ಕಥೆ ಇದೆ. ಹೀಗಾಗಿ ಮೂಲೆ ಸೇರಿರುವ ಅಂಥ ಪ್ರಾಚ್ಯ ವಸ್ತುಗಳನ್ನು ಹೊಸ ಸಂಗ್ರಹಾಗಾರದಲ್ಲಿ ರಕ್ಷಿಸುವುದು ಸರ್ಕಾರ ದ ಉದ್ದೇಶ. ಈಗ ದೇಶಾದ್ಯಂತ ಇರುವ ಇಂಥ ವಸ್ತುಗಳ ಜೊತೆಗೆ ಮುಂದಿನ 100 ವರ್ಷಗಳಲ್ಲಿ ಬರಬಹುದಾದ ವಸ್ತುಗಳನ್ನು ಇಡುವ ರೀತಿಯಲ್ಲಿ ಹೊಸ ಕೇಂದ್ರ ನಿರ್ಮಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಈಗಿರುವ ನ್ಯಾಷನಲ್‌ ಮ್ಯೂಸಿಯಂ ಕಟ್ಟಡ(National Museum Building) 1960ರಲ್ಲಿ ಕಟ್ಟಿದ್ದಾಗಿದೆ. 45 ಸಾವಿರ ಚದರಡಿ ಪ್ರದೇಶದಲ್ಲಿ ಸಂಗ್ರಹಾಗಾರವಿದ್ದು, 1.5 ಲಕ್ಷ ಚದರಡಿ ಪ್ರದೇಶದಲ್ಲಿ ಪ್ರದರ್ಶನ ಸ್ಥಳವಿದೆ. ಆದರೆ ಪ್ರಾಚ್ಯವಸ್ತುಗಳ ಸಂಖ್ಯೆ ಹೆಚ್ಚಾದಂತೆ ಇಲ್ಲಿ ಸ್ಥಳಾವಕಾಶದ ಕೊರತೆ ಉಂಟಾಗಿದೆ. ಅಲ್ಲದೆ, ಈಗಿನ ಕಟ್ಟಡವು ದುರಂತಗಳು ಸಂಭವಿಸಿದರೆ ಸುರಕ್ಷಿತವಾಗಿಲ್ಲ. ಹೀಗಾಗಿ ಹೊಸ ವಸ್ತುಸಂಗ್ರಹಾಲಯ ನಿರ್ಮಾಣ ಅತ್ಯಗತ್ಯವಾಗಿತ್ತು ಎಂದು ಯೋಜನಾ ವರದಿ ತಿಳಿಸಿದೆ.

click me!