ಶ್ರೀಮಂತರನ್ನು ಹೊರಗಿಟ್ಟು ಮೀಸಲಾತಿ ಪರಿಷ್ಕರಿಸಿ: ಸುಪ್ರೀಂ

By Kannadaprabha NewsFirst Published Apr 24, 2020, 9:27 AM IST
Highlights

ಮೀಸಲಾತಿಯೆಂಬುದು ‘ಪರಮ ಪವಿತ್ರವೂ ಅಲ್ಲ, ಬದಲಿಸಬಾರದ್ದೂ ಅಲ್ಲ.’ ಶ್ರೀಮಂತರನ್ನು ಹೊರಗಿಟ್ಟು ಸರ್ಕಾರದ ನೆರವಿನ ಅಗತ್ಯವಿರುವವರನ್ನು ಹೊಸತಾಗಿ ಸೇರಿಸುವ ಮೂಲಕ ಮೀಸಲು ಪಟ್ಟಿಯನ್ನು ಪರಿಷ್ಕರಿಸಬೇಕು ಎಂದು ಸುಪ್ರೀಂಕೋರ್ಟ್‌ ಸೂಚಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಏ.24): ಶ್ರೀಮಂತರನ್ನು ಹೊರಗಿಟ್ಟು ಸರ್ಕಾರದ ನೆರವಿನ ಅಗತ್ಯವಿರುವವರನ್ನು ಹೊಸತಾಗಿ ಸೇರಿಸುವ ಮೂಲಕ ಮೀಸಲು ಪಟ್ಟಿಯನ್ನು ಪರಿಷ್ಕರಿಸಬೇಕು ಎಂದು ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಮೀಸಲಾತಿಯೆಂಬುದು ‘ಪರಮ ಪವಿತ್ರವೂ ಅಲ್ಲ, ಬದಲಿಸಬಾರದ್ದೂ ಅಲ್ಲ.’ ಮೀಸಲಾತಿ ಪಡೆದ ಸಮುದಾಯಗಳಲ್ಲೇ ಎಲ್ಲರಿಗೂ ಅದರ ಲಾಭ ಸಿಗದಿರುವ ಬಗ್ಗೆ ಅವಕಾಶವಂಚಿತರು ಅತೃಪ್ತಿ ಹೊಂದಿದ್ದಾರೆ ಎಂದೂ ಕೋರ್ಟ್‌ ಹೇಳಿದೆ.

ಆಂಧ್ರಪ್ರದೇಶದಲ್ಲಿ 20 ವರ್ಷಗಳ ಹಿಂದೆ ಗುಡ್ಡಗಾಡು ಪ್ರದೇಶಗಳ ಶಾಲೆಗೆ ಪರಿಶಿಷ್ಟಪಂಗಡದ ಶಿಕ್ಷಕರನ್ನು ಮಾತ್ರ ನೇಮಿಸಬೇಕು ಎಂದು ಆದೇಶ ಹೊರಡಿಸಿ ಅಂದಿನ ಸರ್ಕಾರ ಮೀಸಲಾತಿಯ ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚಿಸಿದ್ದ ಕ್ರಮವನ್ನು ಬುಧವಾರ ರದ್ದುಪಡಿಸಿದ ಸುಪ್ರೀಂಕೋರ್ಟ್‌ನ ಐವರು ಸದಸ್ಯರ ಪೀಠ, ತನ್ನ ತೀರ್ಪಿನಲ್ಲಿ ಮೀಸಲಾತಿ ಪಟ್ಟಿಪರಿಷ್ಕರಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.

ನ್ಯಾ.ಅರುಣ್‌ ಮಿಶ್ರಾ ಅವರ ಪಂಚಸದಸ್ಯ ಪೀಠ, ಕಳೆದ 70 ವರ್ಷಗಳಿಂದ ಮೀಸಲಾತಿಯ ಲಾಭವನ್ನು ಕೆಲ ಸಮುದಾಯಗಳು ಪಡೆದು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮೇಲೆ ಬಂದಿವೆ. ಆದರೆ, ಮೀಸಲು ಸಮುದಾಯದ ಒಳಗೇ ಈ ಲಾಭ ಎಲ್ಲರಿಗೂ ದೊರೆತಿಲ್ಲ. ಹೀಗಾಗಿ ಸ್ಥಿತಿವಂತರನ್ನು ಹೊರಗಿಟ್ಟು, ಅಗತ್ಯವಿರುವವರನ್ನು ಮೀಸಲು ಪಟ್ಟಿಗೆ ಸೇರಿಸಬೇಕು ಎಂದು ತಿಳಿಸಿದೆ.

ಕರ್ನಾಟಕ ಬಂದ್: ಸರೋಜಿನಿ ಮಹಿಷಿ ವರದಿಯಲ್ಲೇನಿದೆ?, ಕನ್ನಡಿಗರಿಗೇನು ಲಾಭ?

ಸುಪ್ರೀಂಕೋರ್ಟ್‌ನ ಈ ಆದೇಶ ದೇಶದಲ್ಲಿ ಹೊಸ ವಿವಾದ ಹುಟ್ಟುಹಾಕುವ ಸಾಧ್ಯತೆಯಿದೆ. ಏಕೆಂದರೆ ಈ ಹಿಂದೆಯೇ ಮೀಸಲು ಸಮುದಾಯಗಳಿಂದ ಸ್ಥಿತಿವಂತರನ್ನು ಹೊರಗಿಡಲು ಕೆನೆಪದರ ನೀತಿ ಅಳವಡಿಸಿಕೊಳ್ಳಬೇಕು ಎಂಬ ಬೇಡಿಕೆ ಇತ್ತು. ಇತರೆ ಹಿಂದುಳಿದ ವರ್ಗಗಳ ಮೀಸಲಿನಲ್ಲಿ ಮಾತ್ರ ಇರುವ ಈ ವ್ಯವಸ್ಥೆಯನ್ನು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಕ್ಕೂ ಅನ್ವಯಿಸಬೇಕು ಎಂಬ ಕೂಗೆದ್ದಿತ್ತು. ಆಗ ಸಾಕಷ್ಟುವಿವಾದವಾಗಿತ್ತು. ಇನ್ನು, ಎರಡು ವರ್ಷಗಳ ಹಿಂದೆ ದಲಿತರ ಮೇಲಿನ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಾದ ತಕ್ಷಣ ಆರೋಪಿಗಳನ್ನು ಬಂಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪಿಗೂ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗಿ, ನಂತರ ಕೋರ್ಟ್‌ ತನ್ನ ತೀರ್ಪನ್ನೇ ಪರಿಷ್ಕರಿಸಿತ್ತು.

ಶೇ.50ರ ಮೀಸಲಿನೊಳಗೇ ಪಟ್ಟಿಪರಿಷ್ಕರಿಸಿ:

ಈಗ ಇರುವ ಶೇ.50ರ ಮೀಸಲಾತಿ ಮಿತಿಯನ್ನು ಬದಲಿಸದೆ, ಸ್ಥಿತಿವಂತರನ್ನು ಮೀಸಲಿನ ವ್ಯಾಪ್ತಿಯಿಂದ ಹೊರಗಿಟ್ಟು ಅವಕಾಶವಂಚಿತರನ್ನು ಮೀಸಲು ಪಟ್ಟಿಗೆ ಸೇರಿಸಬಹುದು. ಕಾಲಕಾಲಕ್ಕೆ ಇಂತಹ ಪರಿಷ್ಕರಣೆ ಮಾಡುವುದು ಸರ್ಕಾರದ ಕರ್ತವ್ಯ. ಪರಿಶಿಷ್ಟಜಾತಿಗಳ ಪಟ್ಟಿಯಿಂದ ಯಾವುದೇ ಜಾತಿಯನ್ನು ಕೈಬಿಡಲು ಮತ್ತು ಪಟ್ಟಿಗೆ ಯಾವುದೇ ಹೊಸ ಜಾತಿಯನ್ನು ಸೇರಿಸಲು ಸಂಸತ್ತಿಗೆ ಸಂವಿಧಾನದ 341(1)ನೇ ಪರಿಚ್ಛೇದದಡಿ ಅಧಿಕಾರವಿದೆ. ಹಾಗೆಯೇ, ಪರಿಶಿಷ್ಟಪಂಗಡದ ಪಟ್ಟಿಯಿಂದ ಯಾವುದೇ ಜಾತಿಯನ್ನು ಕೈಬಿಟ್ಟು ಇನ್ನಾವುದೇ ಜಾತಿಯನ್ನು ಸೇರಿಸಲು ಸಂವಿಧಾನದ 342ಎ ಅಡಿ ಅಧಿಕಾರವಿದೆ ಎಂದೂ ಸುಪ್ರೀಂಕೋರ್ಟ್‌ ಹೇಳಿದೆ.
 

click me!