ನವದೆಹಲಿ(ಸೆ.27): ಹಬ್ಬಗಳ ಋುತು ಆರಂಭವಾಗುವುದಕ್ಕಿಂತ ಮುಂಚೆ ಕೇಂದ್ರ ಸರ್ಕಾರ ಇನ್ನೊಂದು ಬೃಹತ್ ಆರ್ಥಿಕ ಉತ್ತೇಜನಾ ಪ್ಯಾಕೇಜ್ ಘೋಷಿಸಲು ಸಿದ್ಧತೆ ಮಾಡಿಕೊಂಡಿದೆ. ಅಂದಾಜು ಇದರ ಮೊತ್ತ 35,000 ಕೋಟಿ ರು. ಆಗಿರಲಿದೆ ಎಂದು ಹೇಳಲಾಗಿದೆ.
ಮುಖ್ಯವಾಗಿ ಈ ಪ್ಯಾಕೇಜ್ ಉದ್ಯೋಗ ಸೃಷ್ಟಿಸಲು ಹಾಗೂ ಮಾರುಕಟ್ಟೆಯಲ್ಲಿ ಕುಸಿದಿರುವ ಬೇಡಿಕೆ ಹೆಚ್ಚಿಸಲು ಗಮನ ಕೇಂದ್ರೀಕರಿಸಲಿದೆ. ಕಷ್ಟದಲ್ಲಿರುವವರಿಗೆ ನೇರ ನಗದು ವರ್ಗಾವಣೆ ಮಾಡುವ ಯೋಜನೆಯೂ ಇದರಲ್ಲಿರಲಿದೆ. ಈ ಹಿಂದಿನ ಪಿಎಂ ಗರೀಬ್ ಕಲ್ಯಾಣ್ ಪ್ಯಾಕೇಜ್ ಮತ್ತು ಆತ್ಮನಿರ್ಭರ ಭಾರತ್ ಪ್ಯಾಕೇಜ್‌ನಿಂದ ಆಗಿರುವುದಕ್ಕಿಂತಲೂ ಹೆಚ್ಚು ನೇರ ನಗದು ಲಾಭ ಈ ಪ್ಯಾಕೇಜ್‌ನಿಂದ ಜನರಿಗೆ ಆಗಲಿದೆ ಎಂದು ಮೂಲಗಳು ಹೇಳುತ್ತಿವೆ.
ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ, ದೊಡ್ಡ ಪ್ರಮಾಣದಲ್ಲಿ ಮೂಲಸೌಕರ್ಯಗಳನ್ನು ಸೃಷ್ಟಿಸುವ 20-25 ಬೃಹತ್ ಯೋಜನೆಗಳು, ಗ್ರಾಮೀಣ ಹಾಗೂ ಕೃಷಿ ಸಂಬಂಧಿ ಉದ್ಯೋಗಗಳ ಸೃಷ್ಟಿಗೆ ಆದ್ಯತೆ ಮತ್ತು ಉಚಿತವಾಗಿ ಆಹಾರ ಹಾಗೂ ಹಣ ಹಂಚುವಂತಹ ಉಪಕ್ರಮಗಳು ಈ ಪ್ಯಾಕೇಜ್‌ನಲ್ಲಿರುವ ಸಾಧ್ಯತೆಯಿದೆ. ‘ಹಬ್ಬಗಳು ಶುರುವಾಗುವುದಕ್ಕಿಂತ ಮುಂಚೆ ಇದನ್ನು ಘೋಷಿಸುವ ಉದ್ದೇಶ ಹೊಂದಿದ್ದೇವೆ. ಜೊತೆಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲೂ ಇನ್ನಷ್ಟುಉದ್ಯೋಗ ಸೃಷ್ಟಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ’ ಎಂದು ಕೇಂದ್ರದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ಉಂಟಾದ ಆರ್ಥಿಕ ಆಘಾತವನ್ನು ಸರಿಪಡಿಸಲು 20 ಲಕ್ಷ ಕೋಟಿ ರು.ಗಳ ಆತ್ಮನಿರ್ಭರ ಭಾರತ್ ಪ್ಯಾಕೇಜನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ