ಸಶಸ್ತ್ರ ಪಡೆ ಮುಖ್ಯಸ್ಥ ಹುದ್ದೆ ಸೃಷ್ಟಿ: ಸಚಿವ ಸಂಪುಟ ಐತಿಹಾಸಿಕ ನಿರ್ಧಾರ | ಭೂಸೇನೆ, ವಾಯುಸೇನೆ, ನೌಕಾಸೇನೆ ಮುಖ್ಯಸ್ಥರ ಮೇಲೆ ಹೊಸ ಹುದ್ದೆ |
ನವದೆಹಲಿ (ಡಿ. 25): ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆ ಮುಖ್ಯಸ್ಥರ ಹುದ್ದೆಗಳ ಮೇಲೆ ‘ಸಶಸ್ತ್ರಪಡೆ ಮುಖ್ಯಸ್ಥ’ ಎಂಬ ಹೊಸ ಹುದ್ದೆ ಸೃಷ್ಟಿಸುವ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ಸಭೆ ಮಂಗಳವಾರ ಕೈಗೊಂಡಿದೆ. ಮೂರೂಸೇನಾ ಪಡೆಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಸಶಸ್ತ್ರಪಡೆ ಮುಖ್ಯಸ್ಥರು ರಕ್ಷಣಾ ಸಚಿವರಿಗೆ ಪ್ರಧಾನ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಇದೇ ವೇಳೆ, ರಕ್ಷಣಾ ಸಚಿವಾಲಯದಡಿ ಮಿಲಿಟರಿ ವ್ಯವಹಾರಗಳು ಎಂಬ ಪ್ರತ್ಯೇಕ ಇಲಾಖೆಯನ್ನು ರಚಿಸಲು ಸರ್ಕಾರ ತೀರ್ಮಾನಿಸಿದೆ. ಅದಕ್ಕೆ ಸಶಸ್ತ್ರ ಪಡೆ ಮುಖ್ಯಸ್ಥರೇ ನೇತೃತ್ವ ವಹಿಸಲಿದ್ದಾರೆ.
ಉತ್ತಮ ಸಮನ್ವಯಕ್ಕಾಗಿ ಮೂರೂ ಸೇನಾಪಡೆಗಳ ಮುಖ್ಯಸ್ಥರ ಹುದ್ದೆಗಳ ಮೇಲೆ ಹೊಸ ಹುದ್ದೆ ಸೃಷ್ಟಿಸಲಾಗುವುದು ಎಂದು ಆ.15ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದರು. 20 ವರ್ಷ ಬಳಿಕ ಈ ಪ್ರಸ್ತಾವಕ್ಕೆ ಮುಕ್ತಿ ದೊರೆತಿದೆ.
ಯಲಬುರ್ಗಾ: ಈ ಊರಲ್ಲಿ ದಿನವೂ ನಡೆಯುತ್ತೆ ಯುದ್ಧದ ಕುರಿತು ರೋಚಕ ಚರ್ಚೆ!
ಸಶಸ್ತ್ರ ಪಡೆ ಮುಖ್ಯಸ್ಥ 4 ಸ್ಟಾರ್ ಜನರಲ್ ಆಗಿರಲಿದ್ದಾರೆ ಮತ್ತು ಅವರ ವೇತನ ಸೇನಾ ಪಡೆಗಳ ಮುಖ್ಯಸ್ಥರಿಗೆ ಸಮನಾಗಿರುತ್ತದೆ ಎಂದು ಸಂಪುಟ ಸಭೆಯ ಬಳಿಕ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗಾರರಿಗೆ ತಿಳಿಸಿದರು.
ದೇಶದ ಮೊದಲ ಸಶಸ್ತ್ರ ಪಡೆ ಮುಖ್ಯಸ್ಥರಾಗಿ ಬಿಪಿನ್?
ದೇಶದ ಮೊದಲ ಸಶಸ್ತ್ರ ಪಡೆ ಮುಖಸ್ಥರನ್ನು ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ ನೇಮಿಸಲಿದೆ. ಡಿ.31ರಂದು ನಿವೃತ್ತಿ ಆಗುತ್ತಿರುವ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಈ ಹುದ್ದೆಯ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ.
ಸಶಸ್ತ್ರ ಪಡೆ ಮುಖ್ಯಸ್ಥ ಹುದ್ದೆ ಸೃಷ್ಟಿ ಏಕೆ?
-ಭೂ ಸೇನೆ, ವಾಯು ಪಡೆ ಮತ್ತು ನೌಕಾ ಪಡೆಗಳ ಕಾರ್ಯಾಚರಣೆ, ಶಸ್ತ್ರಾಸ್ತ್ರ ಖರೀದಿ, ಸಿಬ್ಬಂದಿ ನೇಮಕ ಹಾಗೂ ತರಬೇತಿಗೆ ಸಂಬಂಧಿಸಿದಂತೆ ಸಮನ್ವಯ ಸಾಧಿಸುವುದು.
- ಮೂರೂ ಪಡೆಗಳ ಮುಖ್ಯಸ್ಥರಿಂದ ಮಾಹಿತಿ ಕಲೆ ಹಾಕಿ ಸರ್ಕಾರಕ್ಕೆ ಸಲಹೆಯನ್ನು ನೀಡುವುದು.
- ರಕ್ಷಣಾ ವಿಷಯಕ್ಕೆ ಸಂಬಂಧಿಸಿದಂತೆ ಪರಿಣತಿ ಸಾಧಿಸುವುದು.
ಶಸಸ್ತ್ರ ಪಡೆ ಮುಖ್ಯಸ್ಥರ ಪಾತ್ರವೇನು?
ಮೂರು ಸೇನೆಗಳಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವರಿಗೆ ಪ್ರಧಾನ ಸಲಹೆಗಾರಾಗಿ ಸಶಸ್ತ್ರ ಪಡೆ ಮುಖ್ಯಸ್ಥರು ಕಾರ್ಯನಿರ್ವಹಿಸಲಿದ್ದಾರೆ. ಇದೇ ವೇಳೆ ಮೂರು ಸೇನೆಯ ಮುಖಸ್ಥರು ತಮ್ಮ ಸೇವೆಗೆ ಸಂಬಂಧಿಸಿದಂತೆ ರಕ್ಷಣಾ ಸಚಿವರಿಗೆ ರಕ್ಷಣಾ ಸಚಿವರಿಗೆ ಸಲಹೆ ನೀಡುವುದನ್ನು ಮುಂದುವರಿಸಬಹುದಾಗಿದೆ.
Fact Check: ಭಾರತೀಯ ಸೇನೆಯಿಂದ ಕಾಶ್ಮೀರಿ ಮುಸ್ಲಿಮರಿಗೆ ಥಳಿತ?
- ಮೂರು ಸೇನಾ ಪಡೆಗಳು ಮತ್ತು ಅದರ ಮುಖ್ಯಸ್ಥರಿಗೆ ಯಾವುದೇ ಸೇನಾ ಆದೇಶ ನೀಡುವ ಅಧಿಕಾರ ಸಶಸ್ತ್ರ ಪಡೆ ಮುಖ್ಯಸ್ಥರಿಗೆ ಇರುವುದಿಲ್ಲ.
- ಮೂರು ಸೇನಾ ಪಡೆಗಳ ಆಡಳಿತ ಮುಖ್ಯಸ್ಥರಾಗಿ ಶಸಸ್ತ್ರ ಪಡೆ ಮುಖ್ಯಸ್ಥರು ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೇ ಬಾಹ್ಯಾಕಾಶ ಮತ್ತು ಸೈಬರ್‌ಗೆ ಸಂಬಂಧಿಸಿದ ವಿಷಯದ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ಹೊಂದಿರುತ್ತಾರೆ.