ಏಪ್ರಿಲ್‌ನಿಂದ ಎನ್‌ಪಿಆರ್ | ಮಾಹಿತಿ ಪರಿಷ್ಕರಣೆ ಪ್ರಕ್ರಿಯೆಗೆ .39000 ಕೋಟಿ: ಕೇಂದ್ರ ಸಂಪುಟ | 6 ತಿಂಗಳಿಂದ ದೇಶದಲ್ಲಿ ವಾಸಿಸುತ್ತಿರುವ ಎಲ್ಲರ ವಿವರ ಸಂಗ್ರಹ | ಎನ್‌ಪಿಆರ್‌ಗೂ ಎನ್‌ಆರ್‌ಸಿಗೂ ಸಂಬಂಧ ಇಲ್ಲ: ಜಾವಡೇಕರ್ | ಜನಗಣತಿ ಮನೆ ಪಟ್ಟಿಸಿದ್ಧಪಡಿಸುವಾಗಲೇ ಆ್ಯಪ್ ಮೂಲಕ ವಿವರ ಸಂಗ್ರಹ
ನವದೆಹಲಿ (ಡಿ. 25): ಕೇಂದ್ರ ಸರ್ಕಾರವು ಮಹತ್ವದ ‘ರಾಷ್ಟ್ರೀಯ ಜನಸಂಖ್ಯಾ ನೋಂದಣಿ’ (ಎನ್‌ಪಿಆರ್) ಪರಿಷ್ಕರಣೆ ಪ್ರಕ್ರಿಯೆಯನ್ನು 2020ರ ಏಪ್ರಿಲ್‌ನಿಂದ ಆರಂಭಿಸಲು ನಿರ್ಧರಿಸಿದ್ದು, ಇದಕ್ಕಾಗಿ 3941.35 ಕೋಟಿ ರು.ಗಳನ್ನು ತೆಗೆದಿರಿಸಲು ತೀರ್ಮಾನಿಸಿದೆ. ಈ ಪ್ರಕ್ರಿಯೆ ಅಡಿ, ಭಾರತೀಯರೇ ಆಗಲಿ, ವಿದೇಶಿಗರೇ ಆಗಲಿ ದೇಶದಲ್ಲಿ ನೆಲೆಸಿರುವ ಎಲ್ಲ ನಿವಾಸಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
ರಾಷ್ಟ್ರೀಯ ನಾಗರಿಕತ್ವ ನೋಂದಣಿ (ಎನ್‌ಆರ್‌ಸಿ) ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ವಿವಾದ ಸೃಷ್ಟಿಯಾಗಿರುವ ನಡುವೆಯೇ, ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಮಹತ್ವದ ಪ್ರಕ್ರಿಯೆಯಾದ ಎನ್‌ಪಿಆರ್‌ಗೆ ಅನುಮೋದನೆ ನೀಡಿದೆ. ಆದರೆ ಎನ್‌ಆರ್‌ಸಿಗೂ ಎನ್‌ಪಿಆರ್‌ಗೂ ಸಂಬಂಧವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪರಿಷ್ಕರಣೆ ಪ್ರಸ್ತಾವನೆಗೆ ಕೇಂದ್ರ ಒಪ್ಪಿಗೆ!
2010ರಲ್ಲಿ ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 2011ರ ಜನಗಣತಿಯ ಮನೆಪಟ್ಟಿಸಿದ್ಧಪಡಿಸುವ ಪ್ರಕ್ರಿಯೆಯ ಜತೆ ಎನ್‌ಪಿಆರ್ ಅನ್ನು ಆರಂಭಿಸಿತ್ತು. ಬಳಿಕ 2015ರಲ್ಲಿ ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸಿ ದತ್ತಾಂಶ ಪರಿಷ್ಕರಿಸಲಾಗಿತ್ತು. ಈಗ ಮತ್ತೊಮ್ಮೆ ಪರಿಷ್ಕರಣೆ ಗುರಿ ಹಾಕಿಕೊಂಡಿರುವ ಮೋದಿ ಸರ್ಕಾರ, ಆ ಪ್ರಕ್ರಿಯೆಗೆ ಚಾಲನೆ ನೀಡಲಿದೆ.
2021ರ ಜನಗಣತಿ ಮುನ್ನ, ಅಂದರೆ 2020ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಎನ್‌ಪಿಆರ್ ಪ್ರಕ್ರಿಯೆ ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ ಎಂದು ಜನಗಣತಿ ಆಯುಕ್ತರ ಕಚೇರಿಯ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಆಗಸ್ಟ್‌ನಲ್ಲೇ ಈ ಕುರಿತ ಗೆಜೆಟ್ ಅಧಿಸೂಚನೆ ಹೊರಬಿದ್ದಿತ್ತು.
ಎನ್‌ಪಿಆರ್‌ಗೆ ವಿವರ ಕಡ್ಡಾಯ:
ಸಂಪುಟ ಸಭೆ ಬಳಿಕ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್, ‘ಒಂದು ಪ್ರದೇಶದಲ್ಲಿ ಕನಿಷ್ಠ 6 ತಿಂಗಳು ಅಥವಾ 6 ತಿಂಗಳಿಗಿಂತ ಹೆಚ್ಚು ಅವಧಿಯವರೆಗೆ ಇರುವವರು ಅಥವಾ ಒಂದೇ ಪ್ರದೇಶದಲ್ಲಿ ಇನ್ನೂ 6 ತಿಂಗಳು ಇರಲು ಬಯಸುವವರು ಎನ್‌ಪಿಆರ್‌ಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು. ಒಂದು ಪ್ರದೇಶದಲ್ಲಿ 6 ತಿಂಗಳಿಗೂ ಹೆಚ್ಚು ಕಾಲ ವಿದೇಶೀಯರಿದ್ದರೆ ಅವರ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತದೆ. ಎನ್‌ಪಿಆರ್‌ಗೆ ನೋಂದಣಿ ಮಾಡಿಸುವುದು 1955ರ ಪೌರತ್ವ ಕಾಯ್ದೆಯಡಿ ಕಡ್ಡಾಯ.
ಮಂಗಳೂರು ಹಿಂಸಾಚಾರದ ಹಿಂದಿನ Exclusive ದೃಶ್ಯಾವಳಿಗಳು!
ಆದರೆ, ‘ಎನ್‌ಆರ್‌ಸಿಗೂ ಎನ್‌ಪಿಆರ್‌ಗೂ ಸಂಬಂಧವಿದೆಯೇ? 2014ರಲ್ಲಿ ಅಂದಿನ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು, ಎನ್‌ಪಿಆರ್ ದತ್ತಾಂಶದ ಆಧಾರದಲ್ಲಿ ಎನ್‌ಆರ್‌ಸಿ ಪ್ರಕ್ರಿಯೆ ನಡೆಸಲಿದೆ ಎಂದು ಸಂಸತ್ತಿನಲ್ಲಿ ಹೇಳಿದ್ದರು’ ಎಂಬುದನ್ನು ಪತ್ರಕರ್ತರು ಜಾವಡೇಕರ್ ಅವರ ಗಮನಕ್ಕೆ ತಂದಾಗ, ‘ಎನ್‌ಆರ್‌ಸಿಗೂ ಎನ್‌ಪಿಆರ್‌ಗೂ ಸಂಬಂಧವಿಲ್ಲ. ಎನ್‌ಪಿಆರ್‌ಅನ್ನು ಎನ್‌ಆರ್‌ಸಿಗೆ ಬಳಸುವುದಾಗಿ ನಾವು ಯಾವತ್ತೂ ಹೇಳಿಲ್ಲ. ಎಷ್ಟುಗೊಂದಲವನ್ನು ನೀವು ಸೃಷ್ಟಿಸುತ್ತೀರಿ?’ ಎಂದು ಮರುಪ್ರಶ್ನೆ ಹಾಕಿದರು. ಏತನ್ಮಧ್ಯೆ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, ‘ಎನ್‌ಪಿಆರ್ ದತ್ತಾಂಶವನ್ನು ಎನ್‌ಆರ್‌ಸಿಗೆ ಬಳಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಈವರೆಗೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.
‘ಎನ್‌ಪಿಆರ್ ಎಂಬುದು ಸರಳ ಪ್ರಕ್ರಿಯೆಯಾಗಿದೆ. ಉದ್ದುದ್ದವಾದ ಅರ್ಜಿ ತುಂಬುವ ಅಗತ್ಯವಿಲ್ಲ. ಆ್ಯಪ್ ಮೂಲಕ ಗಣತಿದಾರರು ನಿವಾಸಿಗಳ ಮಾಹಿತಿ ಸಂಗ್ರಹಿಸುತ್ತಾರೆ. ಇದಕ್ಕೆ ಯಾವುದೇ ದಾಖಲೆಗಳನ್ನು, ಗುರುತು ಪತ್ರಗಳನ್ನು ನಿವಾಸಿಗಳು ನೀಡಬೇಕಿಲ್ಲ. ಬಯೋಮೆಟ್ರಿಕ್ (ಬೆರಳಚ್ಚು) ಕೂಡ ಬೇಕಿಲ್ಲ. ಕೇವಲ ತಮ್ಮ ವಿವರ ನೀಡಿದರೆ ಸಾಕು’ ಎಂದರು.
‘ಎಲ್ಲ ರಾಜ್ಯಗಳು ಎನ್‌ಪಿಆರ್‌ಗೆ ಒಪ್ಪಿವೆ. ಎಲ್ಲ ರಾಜ್ಯಗಳು ಅಧಿಸೂಚನೆಯನ್ನೂ ಹೊರಡಿಸಿವೆ’ ಎಂದು ಅವರು ಹೇಳಿಕೊಂಡರು.
‘ಮನಮೋಹನ ಸಿಂಗ್ ಸರ್ಕಾರ, ಎನ್‌ಪಿಆರ್ ಅಡಿ ನೋಂದಣಿಯಾದ ಜನರಿಗೆ ಕಾರ್ಡ್‌ಗಳನ್ನು ನೀಡಿತ್ತು. ರಾಜ್ಯಗಳು ಈ ಎನ್‌ಪಿಆರ್ ದತ್ತಾಂಶವನ್ನು ಈಗಾಗಲೇ ಬಳಸಿಕೊಳ್ಳುತ್ತಿವೆ. ಇದು ಯುಪಿಎ ಸರ್ಕಾರವೇ ಆರಂಭಿಸಿದ ಕಾರ್ಯಕ್ರಮ. ನಾವು ಅದನ್ನು ಮುಂದುವರಿಸುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.