
ಚೆನ್ನೈ(ಆ.28): ದೇಶದಲ್ಲಿ ನಕಲಿ ಮಾಧ್ಯಮ, ನಕಲಿ ಪತ್ರಕರ್ತ, ಪೇಯ್ಡ್ ನ್ಯೂಸ್, ದುರುದ್ದೇಶಪೂರಿತ ಸುದ್ದಿ ಸೇರಿದಂತೆ ಹಲವು ಅಕ್ರಮಗಳು ನಕಲಿ ಮೀಡಿಯಾ ಹೆಸರಿನಲ್ಲಿ ನಡೆಯುತ್ತಿದೆ. ಈ ನಕಲಿ ಮಾಧ್ಯಮ, ಪತ್ರಕರ್ತ, ನಕಲಿ ಸುದ್ದಿಗಳಿಗೆ ಬ್ರೇಕ್ ಹಾಕಲು ಇದೀಗ ಮದ್ರಾಸ್ ಹೈಕೋರ್ಟ್, ತಮಿಳುನಾಡು ಸರ್ಕಾರಕ್ಕೆ ಮಹತ್ವದ ಸೂಚನೆ ನೀಡಿದೆ. ರಾಜ್ಯದ ಮಾಧ್ಯಮಗಳನ್ನು ನಿಯಂತ್ರಿಸುವ, ಪೇಯ್ಡ್ ನ್ಯೂಸ್, ನಕಲಿ ಪತ್ರಕರ್ತರನ್ನು ಪತ್ತೆ ಹಚ್ಚಿ ನಿಯಂತ್ರಿಸಲು ತಮಿಳುನಾಡು ಪ್ರೆಸ್ ಕೌನ್ಸಿಲ್ ಆರಂಭಿಸಲು ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿದೆ.
ಜಸ್ಟೀಸ್ ಎನ್ ಕಿರುಬಾಕರನ್ ಹಾಗೂ ಜಸ್ಟೀಸ್ ಪಿ ವೆಲ್ಮುರುಗನ್ ಅವರ ದ್ವಿಸದಸ್ಯ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ಸದ್ಯ ಭಾರತದಲ್ಲಿ ಹಲವು ಮಾಧ್ಯಮಗಳು ಸುದ್ದಿಯ ಮೇಲೆ ತಮ್ಮ ಅಭಿಪ್ರಾಯ, ಸಿದ್ಧಾಂತವನ್ನು ಬಿತ್ತರಿಸುತ್ತದೆ. ಮಾಧ್ಯಮ ತಮ್ಮ ಅಭಿಪ್ರಾಯ, ಸಿದ್ಧಾಂತದ ಪ್ರಕಾರ ಸುದ್ದಿಗಳನ್ನು ವರದಿ ಮಾಡುತ್ತಿದೆ. ಯಾವುದೇ ಮಾಧ್ಯಮ ಸಿದ್ಧಾಂತ, ತಮ್ಮದೇ ಆದ ದೃಷ್ಟಿಕೋನ ಹೊಂದಿರಬಹುದು. ಆದರೆ ಅದು ಸುದ್ದಿಯ ವಿಷಯದೊಂದಿಗೆ ಬೆರೆಯಬಾರದು. ಇದು ಇತರರ ಮೇಲೆ ಮಾಧ್ಯಮ ತನ್ನ ಅಭಿಪ್ರಾಯವನ್ನು ಹೇರಿದಂತಾಗುತ್ತದೆ ಎಂದು ಪೀಠ ಹೇಳಿದೆ.
ನಕಲಿ ಪತ್ರಕರ್ತರ ಸಂಖ್ಯೆ ಹೆಚ್ಚಾಗಿದೆ. ಪತ್ರಕರ್ತರ ಸೋಗಿನಲ್ಲಿ ಅಕ್ರಮ, ಭ್ರಷ್ಟಾಚಾರ ಎಸಗುವ ಪತ್ರಕರ್ತರಿಂದ ಅಸಲಿ ಪತ್ರಕರ್ತರಿಗೆ ತಮ್ಮ ಗುರುತು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಮ್ಮ ಮೇಲೆ ಎಲ್ಲಿ ದಾಳಿಯಾಗುತ್ತದೆ ಎಂಬ ಭಯ ಆಸಲಿ ಪತ್ರಕರ್ತರಿಗಿದೆ. ಅಸಲಿ ಹಾಗೂ ನಕಲಿ ಪತ್ರಕರ್ತರ ಕುರಿತು ಜನರಿಗೆ ತಿಳಿದಿದೆ. ಆದರೆ ಅವರು ಸುಮ್ಮನಿದ್ದಾರೆ.
ಮಂಗಳೂರು: ಮಾಧ್ಯಮದ ಹೆಸರಲ್ಲಿ ಕೇರಳದಿಂದ ಬಂದವರ ಬಂಧನ
ನಕಲಿ ಪತ್ರಕರ್ತರು ಹಾಗೂ ಸಮಾಜಕ್ಕಿರುವ ಆತಂಕದ ಕುರಿತು ಮದ್ರಾಸ್ ಹೈಕೋರ್ಟ್ ದ್ವಿಸದಸ್ಯ ಪೀಠ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಘಟನೆಯನ್ನು ಉಲ್ಲೇಖಿಸಿದೆ. ರಾಜೀವ್ ಗಾಂಧಿ ಹಂತಕರಲ್ಲಿ ಶಿವರಾಸನ್ ತಾನು ಪತ್ರಕರ್ತ ಸೋಗಿನಲ್ಲಿ ರಾಜೀವ್ ಗಾಂಧಿ ಹತ್ತಿರ ತೆರಳಿದ್ದಾನೆ. ಬಳಿಕ ನಡೆದ ದುರಂತ ಎಲ್ಲರಿಗೂ ತಿಳಿದಿದೆ. ಹೀಗಾಗಿ ನಕಲಿ ಪತ್ರಕರ್ತರಿಂದ ಸಮಾಜಕ್ಕಿರುವ ಆತಂಕ, ಅಪಾಯವನ್ನು ತಪ್ಪಿಸಲು ಪ್ರೆಸ್ ಕೌನ್ಸಿಲ್ ಅಗತ್ಯವಾಗಿದೆ ಎಂದು ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ಸುದ್ದಿಯನ್ನು ಸರಿಯಾಗಿ ಗ್ರಹಿಸಿ ಯಥಾವತ್ತಾಗಿ ಜನರಿಗೆ ತಲುಪಿಸುವ ಜವಾಬ್ದಾರಿಯುತ ಮಾಧ್ಯಮ ಅತೀ ಅಗತ್ಯವಾಗಿದೆ. ಇದೇ ಕಾರಣಕ್ಕೆ ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದೇ ಕರೆಯಲಾಗುತ್ತದೆ. ಮಾಧ್ಯಮ ಸಂವೇದನೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಬದ್ಧವಾಗಿರಬೇಕು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಮಾಧ್ಯಮದ ಈ ಪಾತ್ರ ರಾಷ್ಟ್ರವಿರೋಧಿಗಳಿಗೆ, ವಂಚಕರು, ಬ್ಲಾಕ್‌ಮೇಲ್ ಮಾಡುವವರ ಕೈಯಲ್ಲಿ ಹಾಳಾಗಬಾರದು ಎಂದಿದೆ
ಸರ್ಕಾರದಿಂದ ಮಾನ್ಯತೆ ಪಡೆದ ಅಸಲಿ ಪತ್ರಕರ್ತ, ಮಾಧ್ಯಮಗಳ ಕಾರ್ಯನಿರ್ವಹಣೆ ಮೇಲ್ವಿಚಾರಣೆ ಹಾಗೂ ನಕಲಿ ಮಾಧ್ಯಮ, ಪತ್ರಕರ್ತ ಪತ್ತೆ ಹಚ್ಚಿ ನಿಯಂತ್ರಿಸುವ ಕೆಲಸ ಸರ್ಕಾರದ ಜವಾಬ್ದಾರಿಯಾಗಿದೆ. ಹೀಗಾಗಿ ಪ್ರೆಸ್ ಕೌನ್ಸಿಲ್ ಸ್ಥಾಪಿಸಿ ಸುಗಮ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು. ಸಾಮಾಜಿಕ ಜಾಲತಾಣಗಳನ್ನು ಹಣ ಮಾಡುವ ಅಥವಾ ದುರುದ್ದೇಶಪೂರಿತ ಸುದ್ದಿ ಹರಡುವ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಸರ್ಕಾರ ಕಣ್ಮುಚ್ಚಿ ಕುಳಿತರೆ ಸಾಧ್ಯವಿಲ್ಲ. ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಸುವರ್ಣ ನ್ಯೂಸ್ ಹೆಸರಿನಲ್ಲಿ ಬ್ಲಾಕ್‌ಮೇಲ್: ನಕಲಿ ಪತ್ರಕರ್ತನ ವಿರುದ್ಧ ದೂರು
ಇದೇ ವೇಳೆ ಪ್ರೆಸ್ ಕೌನ್ಸಿಲ್ ತಮಿಳುನಾಡು ರಚನೆಗೆ ಕೆಲ ನಿರ್ದೇಶನವನ್ನು ಮದ್ರಾಸ್ ಹೈಕೋರ್ಟ್ ನೀಡಿದೆ. ತಿಮಿಳುನಾಡು ಪ್ರೆಸ್ ಕೌನ್ಸಿಲ್ ಮುಖ್ಯಶ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು ಆಗಿರಬೇಕು. ಇನ್ನು ಈ ತಂಡದಲ್ಲಿ ಅನುಭವಿ ಅಥವಾ ಮಾಜಿ ಪತ್ರಕರ್ತರು ಇರಬೇಕು. ಸಿವಿಲ್ ಸರ್ವೆಂಟ್, ಐಎಎಸ್ ಅಥವಾ ಐಪಿಎಸ್ ಪೊಲೀಸ್ ಅಧಿಕಾರಿ ಈ ತಂಡದಲ್ಲಿ ಇರಬೇಕು. 3 ತಿಂಗಳಲ್ಲಿ ತಮಿಳುನಾಡು ಪ್ರೆಸ್ ಕೌನ್ಸಿಲ್ ಸ್ಥಾಪಿಸಬೇಕು ಎಂದು ಕೋರ್ಟ್ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ