
ನವದೆಹಲಿ[ಜ.13]: 2008ರಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ್ದ ಲಷ್ಕರ್ ಎ ತೊಯ್ಬಾ ಉಗ್ರರನ್ನು ಸಂಹಾರ ಮಾಡಿದ ಖ್ಯಾತಿಯ ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ಜಿ) ಯೋಧರಿಗೆ ವಿಐಪಿಗಳ ಭದ್ರತೆಯಿಂದ ಮುಕ್ತಿ ಕೊಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶದ ಗಣ್ಯಾತಿಗಣ್ಯ ವ್ಯಕ್ತಿಗಳ ಭದ್ರತಾ ಹೊಣೆಯನ್ನು ಎನ್ಎಸ್ಜಿ ಬದಲಿಗೆ ಸಿಆರ್ಪಿಎಫ್ ಹಾಗೂ ಸಿಐಎಸ್ಎಫ್ನಂತಹ ಅರೆಸೇನಾ ಪಡೆಗಳಿಗೆ ವಹಿಸಲು ಸರ್ಕಾರ ಚಿಂತನೆ ನಡೆಸಿದೆ.
ಭಯೋತ್ಪಾದನೆ ಹಾಗೂ ವಿಮಾನ ಅಪಹರಣ ಪ್ರಕರಣಗಳ ನಿಗ್ರಹದ ಮುಖ್ಯ ಉದ್ದೇಶದೊಂದಿಗೆ 1984ರಲ್ಲಿ ಎನ್ಎಸ್ಜಿಯನ್ನು ರಚನೆ ಮಾಡಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಸರ್ಕಾರಗಳು ಈ ಮೂಲ ಉದ್ದೇಶವನ್ನು ಮರೆತು, ‘ಬ್ಲ್ಯಾಕ್ ಕ್ಯಾಟ್’ ಎಂದೇ ಹೆಸರುವಾಸಿಯಾಗಿರುವ ಎನ್ಎಸ್ಜಿ ಯೋಧರನ್ನು ವಿಐಪಿಗಳ ಭದ್ರತೆಗೆ ನಿಯೋಜಿಸುವ ಪರಿಪಾಠ ಆರಂಭಿಸಿದರು.
ರಕ್ಷಣಾ ಸಚಿವ ರಾಜನಾಥ ಸಿಂಗ್, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಾಜಿ ಮುಖ್ಯಮಂತ್ರಿಗಳಾದ ಮಾಯಾವತಿ, ಮುಲಾಯಂ ಸಿಂಗ್ ಯಾದವ್, ಚಂದ್ರಬಾಬು ನಾಯ್ಡು, ಪ್ರಕಾಶ್ ಸಿಂಗ್ ಬಾದಲ್, ಫಾರೂಕ್ ಅಬ್ದುಲ್ಲಾ, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಲ್, ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಸೇರಿ 13 ಮಂದಿ ಸದ್ಯ ಎನ್ಎಸ್ಜಿ ಭದ್ರತೆ ಪಡೆಯುತ್ತಿದ್ದಾರೆ.
ಅರೆಸೇನಾ ಪಡೆ ವಿಲೀನಕ್ಕೆ ಕೇಂದ್ರ ಸರ್ಕಾರ ಚಿಂತನೆ!
ಈ ನಾಯಕರ ಭದ್ರತೆಯನ್ನು ಅರೆಸೇನಾಪಡೆಗಳಿಗೆ ವಹಿಸಿದರೆ ಸುಮಾರು 450 ಕಮಾಂಡೋಗಳು ಭದ್ರತಾ ಜವಾಬ್ದಾರಿಯಿಂದ ಮುಕ್ತರಾಗುತ್ತಾರೆ. ಎನ್ಎಸ್ಜಿಯನ್ನು ಅದು ಸ್ಥಾಪನೆಯಾದ ನೈಜ ಉದ್ದೇಶಕ್ಕೆ ಬಳಸುವ ಉದ್ದೇಶದಿಂದಲೇ ವಿಐಪಿ ಭದ್ರತಾ ಜವಾಬ್ದಾರಿಯನ್ನು ಆ ಪಡೆಯಿಂದ ವರ್ಗಾಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2008ರ ನವೆಂಬರ್ನಲ್ಲಿ ನಡೆದ ಮುಂಬೈ ದಾಳಿ ವೇಳೆ ಕಾರ್ಯಾಚರಣೆಗೆ 400 ಕಮಾಂಡೋಗಳನ್ನು ನಿಯೋಜಿಸಲಾಗಿತ್ತು. ಒಂದೇ ಬಾರಿ ಹಲವು ಕಡೆ ಉಗ್ರರ ದಾಳಿ ನಡೆದರೆ ಎನ್ಎಸ್ಜಿ ಕಮಾಂಡೋಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗುತ್ತಾರೆ. ಆದರೆ ಕಮಾಂಡೋಗಳು ಸೀಮಿತ ಸಂಖ್ಯೆಯಲ್ಲಿರುವ ಕಾರಣ ಸರ್ಕಾರ ವಿಐಪಿ ಭದ್ರತೆಯಿಂದ ಅವರಿಗೆ ಮುಕ್ತಿ ಕೊಡಿಸುತ್ತಿದೆ ಎಂದು ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ