ಗೂಂಡಾ ಟ್ಯಾಕ್ಸ್ ನೀಡಲು ಗುತ್ತಿಗೆದಾರ ನಿರಾಕರಿಸಿದ್ದಕ್ಕೆ ಆತ ನಿರ್ಮಿಸಿದ್ದ 7 ಕಿಲೋಮೀಟರ್ ಹೊಸ ರಸ್ತೆಯನ್ನು ಬಿಜೆಪಿ ಶಾಸಕನ ಆಪ್ತ ಅಗೆದುಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ನವದೆಹಲಿ (ಅ.5): ಗುತ್ತಿಗೆದಾರರು ಗೂಂಡಾ ಟ್ಯಾಕ್ಸ್ ನೀಡಲು ನಿರಾಕರಿಸಿದ್ದ ಕಾರಣಕ್ಕೆ ಸ್ಥಳೀಯ ಶಾಸಕನ ಆಪ್ತರು, ಗುತ್ತಿಗೆದಾರ ನಿರ್ಮಾಣ ಮಾಡಿದ್ದ 7 ಕಿಲೋಮೀಟರ್ ಹೊಸ ರಸ್ತೆಯನ್ನು ಜೆಸಿಬಿ ಬಳಸಿ ಅಗೆದುಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಯುಪಿಯ ಶಹಜಹಾನ್‌ಪುರ ಜಿಲ್ಲೆಯಲ್ಲಿಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಸ್ಥಳೀಯ ಶಾಸಕರ ಸಹಚರರು ಎಂದು ಹೇಳಿಕೊಂಡು ಬಂದ ಜನರ ಗುಂಪೊಂದು ಜೆಸಿಬಿ ಬಳಸಿ 7 ಕಿಮೀ ರಸ್ತೆಯನ್ನು ನಾಶಪಡಿಸಿ, ಕಾರ್ಮಿಕರ ಮೇಲೆ ಹಲ್ಲೆ ನಡೆಸಿ ಯಂತ್ರಗಳಿಗೆ ಬೆಂಕಿ ಹಚ್ಚಿದೆ. ಘಟನೆ ಸಂಬಂಧ 20 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಸ್ಥಳೀಯ ಶಾಸಕರ ಆಪ್ತ/ಪ್ರತಿನಿಧಿ ಎಂದು ಹೇಳಿಕೊಂಡಿರುವ ಜಗವೀರ್ ಸಿಂಗ್ ಎಂಬಾತ ರಸ್ತೆ ನಿರ್ಮಾಣ ಕಾರ್ಯಕ್ಕೆ ಅಡ್ಡಿ ಮಾಡಿದ್ದಲ್ಲದೆ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ್ದಾನೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಊರಾದ ಗೋರಖ್‌ಪುರದ ಗುತ್ತಿಗೆದಾರರು ಆರೋಪಿಸಿದ್ದಾರೆ.
ಈ ವರ್ಷದ ಏಪ್ರಿಲ್‌ನಲ್ಲಿ ಮಾತನಾಡಿದ್ದ ಯೋಗಿ ಆದಿತ್ಯನಾಥ್ ತಮ್ಮ ಸರ್ಕಾರ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿದ್ದು, ಎಲ್ಲಾ ರೀತಿಯ ಗೂಂಡಾಗಳನ್ನು ಅಪರಾಧಿಗಳನ್ನ ನಿರ್ಮೂಲನೆ ಮಾಡಿದ್ದಾಗಿ ಹೇಳಿದ್ದರು. ಬೀದಿ ಬದಿ ವ್ಯಾಪಾರಿಗಳು ಹಾಗೂ ಜನರ ಬಳಿ ಗೂಂಡಾ ಟ್ಯಾಕ್ಸ್ ಎನ್ನುವ ಹೆಸರಲ್ಲಿ ಸುಲಿಗೆ ಮಾಡುತ್ತಿದ್ದರು ಎಂದು ಹೇಳಿದ್ದರು.
ಈ ಸಂಬಂಧ ಜಿಲ್ಲಾ ಮ್ಯಾಜಿಸ್ಟ್ರೇಸ್ ಉಮೇಶ್ ಪ್ರತಾಪ್ ಸಿಂಗ್ ಅವರು ತನಿಖೆ ಆರಂಭ ಮಾಡಿದ್ದಾರೆ. ಮುಖ್ಯ ಆರೋಪಿ ಜಗವೀರ್ ಸಿಂಗ್, ಕತ್ರಾದ ಬಿಜೆಪಿ ಶಾಸಕ ವೀರ್ ವಿಕ್ರಮ್ ಸಿಂಗ್ ಜತೆ ಅನೇಕ ಬಾರಿ ಕಾಣಿಸಿಕೊಂಡಿರುವುದು ಹೌದು ಎಂದು ಹೆಸರು ಬಹಿರಂಗಪಡಿಸಲು ಬಯಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಸ್ತೆ ನಿರ್ಮಾಣಕ್ಕೆ 12 ಕೋಟಿ ರೂ ವ್ಯಯಿಸಲಾಗುತ್ತಿತ್ತು. ಇದರಲ್ಲಿ ಭಾರಿ ಮೊತ್ತದ ಕಮಿಷನ್‌ಗೆ ಸ್ಥಳೀಯ ರಾಜಕಾರಣಿ ಒತ್ತಾಯಿಸಿದ್ದರು ಎಂದು ತಿಳಿಸಿದ್ದಾರೆ.
ಇನ್ನು ಘಟನೆಗೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿರುವ ಸಿಎಂ ಯೋಗಿ ಆದಿತ್ಯನಾಥ್, ಹೊಸದಾಗಿ ಡಾಂಬರು ಹಾಕಿದ್ದ ರಸ್ತೆಯನ್ನು ಸಂಪೂರ್ಣವಾಗಿ ಅಗೆದು ಹಾಕಿರುವ ಆರೋಪಿಗಳಿಂದ ಅದರ ಸಂಪೂರ್ಣ ವೆಚ್ಚವನ್ನು ವಸೂಲಿ ಮಾಡುವಂತೆ ತಿಳಿಸಿದ್ದಾರೆ ಎಂದು ಉತ್ತರ ಪ್ರದೇಶದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ವರದಿಯಾಗಿರುವ ಪ್ರಕಾರ, ರಸ್ತೆಗೆ ನೀಡಲಾಗಿರುವ ಬಜೆಟ್‌ನ ಶೇ.5ರಷ್ಟು ಮೊತ್ತವನ್ನು ತನಗೆ ಕಮೀಷನ್ ಆಗಿ ನೀಡಬೇಕು ಎಂದು ಜಗವೀರ್ ಹೇಳಿದ್ದ. ಆದರೆ, ಗುತ್ತಿಗೆದಾರ ಮಾತ್ರ ಇದಕ್ಕೆ ಸುತಾರಾಂ ಒಪ್ಪಿರಲಿಲ್ಲ. ಇದರಿಂದ ಸಿಟ್ಟಾದ ಜಗವೀರ್ ಸಿಂಗ್ 7 ಕಿ.ಮೀ ಉದ್ದದ ರಸ್ತೆಯ ಒಂದು ಭಾಗವನ್ನು ಸಂಪೂರ್ಣವಾಗಿ ಅಗೆದುಹಾಕಿದ್ದಾನೆ. ಜಗವೀರ್ ಸಿಂಗ್ ಮತ್ತು 15-20 ಅಪರಿಚಿತ ವ್ಯಕ್ತಿಗಳ ವಿರುದ್ಧ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಮತ್ತು IPC ಯ ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
'ಸನಾತನ ಅನ್ನೋದೇ ಏಕೈಕ ಧರ್ಮ, ಉಳಿದವೆಲ್ಲ..' ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತು
ಆರೋಪಕ್ಕೆ ಪ್ರತಿಕ್ರಿಯಿಸಿದ ಸ್ಥಳೀಯ ಶಾಸಕ ವೀರ್ ವಿಕ್ರಮ್ ಸಿಂಗ್, ‘ಗುತ್ತಿಗೆದಾರರು ರಸ್ತೆ ಮಾಡಲು ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿದ್ದು, ನಾನು ಈ ವಿಷಯವನ್ನು ಪ್ರಸ್ತಾಪಿಸಿದೆ, ಅವರೇ ರಸ್ತೆಯನ್ನು ಹಾನಿಗೊಳಿಸಬೇಕು ಮತ್ತು ವಿಮೆ ಕ್ಲೈಮ್ ಪಡೆಯಲು ಎಫ್‌ಐಆರ್ ದಾಖಲಿಸಿದ್ದಾರೆ' ಎಂದು ಆರೋಪಿಸಿದ್ದಾರೆ.
ರೀಲ್ಸ್ ಮಾಡುವ ವೇಳೆ ಚಲಿಸುವ ರೈಲಿಗೆ ಸಿಲುಕಿ 14 ವರ್ಷದ ಬಾಲಕ ಸಾವು: ಭಯಾನಕ ವೀಡಿಯೋ ವೈರಲ್