
ಪೆಸಿಪಿಕ್ ಮಹಾಸಮುದ್ರದಲ್ಲಿ ಏರ್ಪಾಟ್ಟ ಎಲ್ ನಿನೋ ಪ್ರಭಾವ ದೇಶದಾದ್ಯಂತ ಭಾರೀ ಪ್ರಮಾಣದಲ್ಲಿ ಮಳೆ ಕಡಿಮೆಯಾಗಿದೆ ಎಂದು ನಮಗೆ ಈಗಾಗಲೇ ತಿಳಿದಿದೆ. ಆದರೆ ಈ ಎಲ್ ನಿನೋ ಅನ್ನೋದು ದಿನದಿಂದ ದಿನಕ್ಕೆ ಮತ್ತಷ್ಟು ಬಲಗೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ಇದು ಗಾಡ್ಜಿಲ್ಲ ಎಲ್ ನಿನೋ ಆಗಿ ಬದಲಾವಣೆ ಆಗುವ ಅಪಾಯ ನಮ್ಮ ಮುಂದಿದೆ ಎಂದು ಇತ್ತೀಚೆಗೆ ಇಸ್ರೋ ಉಡಾವಣೆ ಮಾಡಿದ್ದEOS-06 ಎಂಬ ಉಪಗ್ರಹ ಕಂಡು ಹಿಡಿದಿದೆ. ಸಮುದ್ರ ವಾತಾವರಣ, ಅವುಗಳಿಂದ ಬೀಸುವ ಗಾಳಿಯಲ್ಲಿ ಉಂಟಾಗುವ ಬದಲಾವಣೆಗಳ ಆಧಾರದ ಮೇರೆಗೆ ಉಪಗ್ರಹ ಇದನ್ನು ಅಂದಾಜು ಮಾಡಿದೆ ಎಂದು ತಜ್ಞರು ಹೇಳಿದ್ದಾರೆ.
ಭೂಮಿಯ ಮೇಲೆ ಆಗುತ್ತಿರುವ ಬದಲಾವಣೆಗಳನ್ನು ಕಂಡುಕೊಳ್ಳಲು ಹಾಗೂ ಅವುಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲು ಇಸ್ರೋ ಕಳುಹಿಸಿದ್ದ EOS-06 (ಓಷನ್‌ಶಾಟ್-3) ಉಪಗ್ರಹ ಉತ್ತಮವಾಗಿ ಕೆಲಸ ಮಾಡುತ್ತಿದೆ. ಭೂಮಿಗೆ 741 ಕಿಲೋ ಮೀಟರ್ ಎತ್ತರದ ಕಕ್ಷೆಯಲ್ಲಿರುವ ಈ ಉಪಗ್ರಹ, ಪೆಸಿಫಿಕ್ ಮಹಾಸಮುದ್ರದಲ್ಲಿ ಬಲಗೊಳ್ಳುತ್ತಿರುವ ಶಕ್ತಿವಂತ ಗಾಡ್ಜಿಲ್ಲಾ ಎಲ್ ನಿನೋ ಪ್ರಾರಂಭವಾಗುತ್ತಿರುವ ಸಂಕೇತಗಳನ್ನು ಗುರುತಿಸಿದೆ. ವಾತಾವರಣದಲ್ಲಿರುವ ಉಂಟಾಗುತ್ತಿರುವ ಬದಲಾವಣೆಗಳು, ಮಳೆಯ ಪ್ರಮಾಣದಲ್ಲಿರುವ ಬದಲಾವಣೆಗಳು ಸ್ಟಷ್ಟವಾಗಿ ಕಾಣುವ ಮುನ್ನವೇ ಸಮುದ್ರದ ವಾತಾವರಣದಲ್ಲಿ, ಗಾಳಿಯಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ಉಪಗ್ರಹ ಗುರುತಿಸಿದೆ.
ಎಡ್ಲ್ಯೂಎಂಒ ಅಂದಾಜಿನ ಅನ್ವಯ, ಜೂನ್-ಆಗಸ್ಟ್ ನಡುವೆ ಎಲ್ ನಿನೋ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಶೇಖಡಾ 80ರಷ್ಟು ಅವಕಾಶವಿದೆ. ಇದು ಆಗಸ್ಟ್-ಅಕ್ಟೋಬರ್ ವೇಳೆಗೆ ಮತ್ತಷ್ಟು ತೀವ್ರಗೊಳ್ಳುತ್ತದೆ. 2027ರ ಆರಂಭದ ವರೆಗೂ ಮುಂದುವರೆಯುವ ಅಪಾಯವಿದೆ ಎಂದು ಹೇಳಿತ್ತು. ಆದರೆ ಈಗ EOS-06 ನೀಡಿರುವ ಮುನ್ಸೂಚನೆಗಳು ಕೂಡ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್‌ನ ಎನ್‌ಆರ್‌ಎಸ್‌ಸಿ ಗುರುತಿಸಿರುವಂತೆ, 2024 ಮತ್ತು 2025ಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ ಪರಿಸ್ಥಿತಿ ಬಹಳ ಭಿನ್ನವಾಗಿದೆ. ಪೆಸಿಫಿಕ್ ಸಾಗರದಲ್ಲಿರುವ ಆಹಾರ ಸರಪಳಿಯ ಮೂಲಾಧಾರವಾಗಿರುವ ಸೂಕ್ಷ್ಮ ಗಾತ್ರದ ಸಾಗರ ಸಸ್ಯಗಳಲ್ಲಿ ಕಂಡುಬರುವ ಕ್ಲೋರೊಫಿಲ್ ಮಟ್ಟ ಭಾರೀ ಇಳಿಕೆ ಕಂಡು ಬಂದಿದೆ. ಇದರ ಅರ್ಥ ಏನು ಅಂದರೆ, ಮೇಲ್ಮೈ ತಾಪಮಾನ ಸಾಮಾನ್ಯ ಸ್ಥಿತಿಗೆ ಮರಳಲು ಕೆಲವು ವಾರಗಳ ಸಮಯ ಬೇಕಾಗುತ್ತದೆ. ಆದರೆ ಕ್ಲೋರೊಫಿಲ್‌ನಲ್ಲಿನ ಬದಲಾವಣೆಗಳು ತಕ್ಷಣವೇ ಗೋಚರಿಸುತ್ತವೆ. ಇದನ್ನ ಮೊದಲೇ ಇಸ್ರೋ ಉಪಗ್ರಹ ಪತ್ತೆ ಮಾಡಿದ್ದು, ಮುಂದಿನ ದಿನಗಳಲ್ಲಿ ಪೆಸಿಫಿಕ್ ಮಹಾಸಾಗರದಲಲಿ ಕಡಿಮೆ ಕ್ಲೋರೊಫಿಲ್ ಪ್ರದೇಶ ಹೆಚ್ಚು ಸ್ಪಷ್ಟವಾಗಿ ಕಂಡು ಬರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಭಾರತ ತನ್ನ ಮಳೆಗಾಲದ ಅವಧಿಯಲ್ಲಿ ಪಡೆದುಕೊಳ್ಳುವ ಬಹುತೇಕ ಮಳೆ ನೈಋತ್ಯ ಮಾನ್ಸೂನ್ ಮೇಲೆ ಎಲ್ ನಿನೋ ತೀವ್ರ ಪರಿಣಾಮವನ್ನು ಬೀರುತ್ತದೆ. ಆದರೆ ಪ್ರತಿಬಾರಿ ಎಲ್ ನಿನೋ ಎದುರಾಗ ಭಾರತದಲ್ಲಿ ಮಳೆ ಕಡಿಮೆ ಆಗುವುದಿಲ್ಲ. ಆದರೆ ಎಲ್ ನಿನೋ ಸಾಮರ್ಥ್ಯ ಹೆಚ್ಚಾಗಿ ಬಲಗೊಳ್ಳುತ್ತಿದ್ದಂತೆ ಭಾರತದಲ್ಲಿ ನೈಋತ್ಯ ಮಾನ್ಸೂನ್ ದುರ್ಬಲಗೊಳ್ಳುತ್ತದೆ, ಮಳೆ ಕಡಿಮೆಯಾಗಿ ಕೃಷಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಸದ್ಯ ಸಮಭಾಜಕ ವೃತ್ತದ ಪೆಸಿಫಿಕ್‌ನಲ್ಲಿ ಪ್ರಸ್ತುತ ಮಧ್ಯಮ ಎಲ್ ನಿನೋ ಪರಿಸ್ಥಿತಿ ಇದ್ದರೂ, ಇದು ಮುಂಬರುವ ತಿಂಗಳಿನಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಎಲ್ ನಿನೋ ಪ್ರಭಾವ ಭಾರತದ ಮೇಲೆ ಮಾತ್ರ ಉಂಟಾಗುತ್ತಿಲ್ಲ. ವಿಶ್ವ ಹವಾಮಾನ ಸಂಸ್ಥೆಯು ಈಗಾಗಲೇ ಬಲವಾದ ಎಲ್ ನಿನೋ ಎಚ್ಚರಿಕೆ ನೀಡಿದ್ದರೆ, ಈಗ ಭಾರತ ಉಪಗ್ರಹ 2027ರ ಆರಂಭವರೆಗೂ ಎಲ್ ನಿನೋ ಪ್ರಭಾವ ಮುಂದುವರೆಯುವ ಮುನ್ಸೂಚನೆ ನೀಡಿದೆ. ಇದರೊಂದಿಗೆ EOS-06 ಉಪಗ್ರಹದ ಕಾರ್ಯವೂ ಮುಂಬರುವ ಹವಾಮಾನ ವಿಪತ್ತುಗಳು ಮತ್ತು ತೀವ್ರವಾದ ಎಲ್ ನಿನೋ ಪರಿಣಾಮವನ್ನು ವೇಗವಾಗಿ ಭಾರತ ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ.
ಎಲ್ ನಿನೋ ಎಂದರೇನು ಅಂತ ನೋಡುವುದಾದರೆ, ಪೆಸಿಫಿಕ್ ಮಹಾಸಾಗರ ಮೇಲ್ಮೈ ನೀರನ್ನು ಬೆಚ್ಚಗಾಗಿಸುವ ನೈಸರ್ಗಿಕ ವಿದ್ಯಮಾನವಾಗಿದೆ. ಸಾಮಾನ್ಯವಾಗಿ, ಮಾನ್ಸೂನ್ ಮಾರುತಗಳು ಬೆಚ್ಚಿನ ನೀರಿನ್ನು ಪಶ್ಚಿಮಕ್ಕೆ ತಳುತ್ತವೆ. ಇದು ದಕ್ಷಿಣ ಅಮೆರಿಕ ಕರಾವಳಿಯಲ್ಲಿ ಶೀತ, ಸಮೃದ್ಧ ನೀರನ್ನು ಮೇಲಕ್ಕೆ ತರುತ್ತದೆ. ಆದರೆ ಎಲ್ ನಿನೋ ಸಮಯದಲ್ಲಿ ಈ ಗಾಳಿ ದುರ್ಬಲಗೊಳ್ಳುತ್ತವೆ, ಹಿಮ್ಮುಖವಾಗಿ ಚಲಿಸುತ್ತದೆ. ಇದರಿಂದ ಬೆಚ್ಚಗಿನ ನೀರು ಪೂರ್ವ ಪೆಸಿಫಿಕ್ ಮಹಾಸಾಗರಕ್ಕೆ ಹರಡುತ್ತದೆ. ಇದರ ಪರಿಣಾಮ ಫೈಟೊಪ್ಲಾಂಕ್ಟನ್ ಉತ್ಪಾದನೆ ಕಡಿಮೆಯಾಗುತ್ತದೆ. ಇದು ಸಮುದ್ರ ಜೀವಿಗಳ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ತೀವ್ರ ಬರಗಾಲ ಜೊತೆಗೆ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಿ ಪ್ರವಾಹದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಇದರ ಪರಿಣಾಮ ಈ 2027ರ ಆರಂಭವರೆಗೂ ಮುಂದುವರಿಯುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
El Niño is leaving its fingerprint on the ocean—and ISRO’s satellite is watching!
ISRO’s EOS-06 (Oceansat-3) is detecting a reduction in ocean Chlorophyll-a for the month of June 2026, indicating changes in tiny marine plants (phytoplankton), along with a shift in surface… pic.twitter.com/tMRR8pdBuD— ISRO (@isro) September 11, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ