ಏಷ್ಯಾದ ಉದ್ದದ ರೋಪ್ ವೇ ಆರಂಭ| 2.3 ಕಿ.ಮೀ. ಉದ್ದದ ಗುಜರಾತ್ ರೋಪ್ ವೇಗೆ ಮೋದಿ ಚಾಲನೆ
ಅಹಮದಾಬಾದ್(ಅ.25): ಏಷ್ಯಾದ ಅತಿ ಉದ್ದದ ರೋಪ್ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವರ್ಚುವಲ್ ಕಾರ್ಯಕ್ರಮದ ಮೂಲಕ ಉದ್ಘಾಟನೆ ಮಾಡಿದ್ದಾರೆ. ಇದೇ ವೇಳೆ ಮೋದಿ ಅವರು ಗುಜರಾತಿನ ಮೂರು ಕೃಷಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ತಮ್ಮ ಸರ್ಕಾರ ಕೃಷಿ ಕ್ಷೇತ್ರವನ್ನು ಬಲಗೊಳಿಸಲು ಕ್ರಮಗಳನ್ನು ಕೈಗೊಂಡಿದ್ದು, ರೈತರಿಗೆ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂದು ಭರವಸೆ ನೀಡಿದರು.
ಜುನಾಗಢ ಜಿಲ್ಲೆಯ ಗಿರ್ನಾರ್ ಗುಡ್ಡದ ಮೇಲೆ ನಿರ್ಮಿಸಿರುವ 2.3 ಕಿ.ಮೀ. ಉದ್ದದ ಈ ರೋಪ್ ವೇ ಅಂಬಾ ದೇವಾಲಯ, ದತ್ತಾತ್ರೇಯ ದೇವಾಲಯ, ಜೈನ ದೇವಾಲಯಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರಯಾಣಿಕರನ್ನು ಸಾಗಿಸುವ ಏಷ್ಯಾದ ಅತಿ ಉದ್ದದ ರೋಪ್ ವೇ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಸಿಕ್ಕಿಂನ ಗ್ಯಾಂಗ್ಟಕ್‌ನಲ್ಲಿರುವ 1 ಕಿ.ಮೀ. ಉದ್ದದ ರೋಪ್‌ವೇ ಇದುವರೆಗೆ ಏಷ್ಯಾದ ಅತಿ ಉದ್ದದ ಪ್ರಯಾಣಿಕ ರೇಪ್ ವೇ ಎನಿಸಿಕೊಂಡಿತ್ತು.
undefined
2.3 ಕಿ.ಮೀ.ಗೆ 7.5 ನಿಮಿಷ
ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಗಿರ್ನಾರ್ ರೋಪ್‌ವೇಗೆ ಶಂಕು ಸ್ಥಾಪನೆ ನೆರವೇರಿಸಿದ್ದರು. 2018ರಲ್ಲಿ ರೋಪ್‌ವೇ ನಿರ್ಮಾಣ ಕಾರ್ಯ ಆರಂಭ ಆಗಿತ್ತು. ಇದೀಗ 130 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಈ ರೋಪ್‌ವೇ 2.3 ಕಿ.ಮೀ. ದೂರವನ್ನು 7.5 ನಿಮಿಷದಲ್ಲಿ ಕ್ರಮಿಸಲಿದೆ. ಇಷ್ಟುದಿನ ಅಂಬಾ ದೇವಾಲಯಕ್ಕೆ ಭಕ್ತರು 5000 ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಿತ್ತು. ರೋಪ್‌ವೇಯಿಂದ ಜನರಿಗೆ ಗುಡ್ಡವನ್ನು ಏರುವುದು ತಪ್ಪಲಿದೆ. 900 ಮೀಟರ್ ಎತ್ತರದ ಸ್ಥಳಕ್ಕೆ ಈ ರೋಪ್ ವೇ ಜನರನ್ನು ತಲುಪಿಸಲಿದೆ. ಇದರಲ್ಲಿ ಗಂಟೆಗೆ 800 ಜನರು ಅತ್ತಿಂದಿತ್ತ ಪ್ರಯಾಣಿಸಬಹುದಾಗಿದೆ.