ಜಾಯಿಂಟ್ ವ್ಹೀಲ್‌ನಲ್ಲಿ ಕುಳಿತು ಆಟವಾಡಲು ಮುಂದಾದ ಹುಡುಗಿಯೊಬ್ಬಳ ತಲೆ ಕೂದಲು ಜಾಯಿಂಟ್ ವ್ಹೀಲ್‌ನ ಚಕ್ರಕ್ಕೆ ಸಿಲುಕಿಕೊಂಡ ಘಟನೆ ಗುಜರಾತ್‌ನ ಹಳ್ಳಿಯೊಂದರ ಜಾತ್ರೆಯಲ್ಲಿ ನಡೆದಿದೆ.
ದ್ವಾರಕಾ: ಜಾಯಿಂಟ್ ವ್ಹೀಲ್‌ನಲ್ಲಿ ಕುಳಿತು ಆಟವಾಡಲು ಮುಂದಾದ ಹುಡುಗಿಯೊಬ್ಬಳ ತಲೆ ಕೂದಲು ಜಾಯಿಂಟ್ ವ್ಹೀಲ್‌ನ ಚಕ್ರಕ್ಕೆ ಸಿಲುಕಿಕೊಂಡ ಘಟನೆ ಗುಜರಾತ್‌ನ ಹಳ್ಳಿಯೊಂದರ ಜಾತ್ರೆಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಹುಡುಗಿ ಹೆಚ್ಚೇನು ಆಘಾತವಿಲ್ಲದೇ ಪಾರಾಗಿದ್ದಾಳೆ. ಈ ಆಘಾತಕಾರಿ ದೃಶ್ಯದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಆಟೋಮೇಟೆಡ್ ಈ ಮನೋರಂಜನಾ ಯಂತ್ರಗಳು ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುತ್ತಿದೆ.
ಅಮೇಜಿಂಗ್ ದ್ವಾರಕಾ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ವೀಡಿಯೋದಲ್ಲಿ 3 ರಿಂದ 4 ಜನ ಯುವಕರು ಜಾಯಿಂಟ್ ವ್ಹೀಲ್‌ಗೆ ಸಿಲುಕಿದ ಹುಡುಗಿಯ ತಲೆಕೂದಲನ್ನು ಅಲ್ಲಿಂದ ಬಿಡಿಸಲು ಹರಸಾಹಸ ಪಡುತ್ತಿದ್ದಾರೆ.
ದೇವಭೂಮಿ ದ್ವಾರಕಾದ ಖಂಭಲಿಯಾ ನಗರದಲ್ಲಿ ಈ ಘಟನೆ ನಡೆದಿದೆ ಎಂದು ಈ ವೀಡಿಯೋವನ್ನು ಪೋಸ್ಟ್ ಮಾಡಿದ ಇನ್ಸ್ಟಾ ಪೇಜ್‌ನಲ್ಲಿ ಮಾಹಿತಿ ಇದೆ. ಗಣೇಶ ಹಬ್ಬದ ಅಂಗವಾಗಿ ಸ್ಥಳೀಯವಾಗಿ ಆಯೋಜಿಸಿದ್ದ ದೊಡ್ಡ ಸಮಾರಂಭದಲ್ಲಿ ಜನರಿಗೆ ಮನೋರಂಜನೆಗಾಗಿ ಈ ಜಾಯಿಂಟ್ ವ್ಹೀಲ್ ಬಂದಿತ್ತು. ಎಂಜಾಯ್ ಮಾಡುವುದಕ್ಕಾಗಿ ಈ ಜಾಯಿಂಟ್ ವ್ಹೀಲ್ ಏರಿದ ಹುಡುಗಿಯೊಬ್ಬಳು ಕೂದಲನ್ನು ಕಟ್ಟದೇ ಹಾಗೆ ಬಿಟ್ಟಿದ್ದಳು. ಈ ಕೂದಲು ಜಾಯಿಂಟ್ ವ್ಹೀಲ್‌ನ ಚಕ್ರಕ್ಕೆ ಸಿಲುಕಿದ್ದು, ಕೂಡಲೇ ಹುಡುಗಿ ಜೋರಾಗಿ ಬೊಬ್ಬೆ ಹೊಡೆಯಲು ಶುರು ಮಾಡಿದ್ದಾಳೆ. ಹುಡುಗಿಯ ಬೊಬ್ಬೆ ಕೇಳಿ ಕೂಡಲೇ ಎರಡು ಸುತ್ತಿನ ನಂತರ ಜಾಯಿಂಟ್ ವ್ಹೀಲ್ ನಿಂತಿದೆ. ಕೂಡಲೇ ಜಾಯಿಂಟ್ ವ್ಹೀಲ್‌ನಲ್ಲಿದ್ದ ಇತರರನ್ನು ಕೆಳಗೆ ಇಳಿಸಿದ್ದಾರೆ.
ಬಳಿಕ ಕೆಲವರು ಯುವಕರು ಜಾಯಿಂಟ್ ವ್ಹೀಲ್ ಮೇಲೇರಿ ಹುಡುಗಿಯ ಕೂದಲನ್ನು ಕತ್ತರಿಸುವ ಮೂಲಕ ಆಕೆಯನ್ನು ಅನಾಹುತದಿಂದ ಪಾರು ಮಾಡಿದ್ದಾರೆ. ಒಬ್ಬ ಯುವಕ ಹುಡುಗಿಯ ತಲೆ ಹಿಡಿದುಕೊಂಡಿದ್ದರೆ, ಮತ್ತೊರ್ವ ಚಾಕುವಿನಿಂದ ಕೂದಲನ್ನು ಕತ್ತರಿಸುವುದನ್ನು ಕಾಣಬಹುದು. ಇತ್ತ ಜಾತ್ರೆಗೆ ಬಂದ ಜನ ಕೆಳಗೆ ನಿಂತುಕೊಂಡು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿಯುತ್ತಿರುವ ದೃಶ್ಯವನ್ನೂ ಕೂಡ ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ವೀಡಿಯೋ ನೋಡಿದ ಅನೇಕರು ಆಘಾತಗೊಂಡಿದ್ದು, ಇಂತಹ ಮನರೋರಂಜನಾ ಉಪಕರಣಗಳಲ್ಲಿ ಕೂರುವ ಮೊದಲು ಜಾಗರೂಕರಾಗಿರಬೇಕು ಎಂದು ಹಲವರು ಸಲಹೆ ನೀಡಿದ್ದಾರೆ. ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಇದು ತಮಾಷೆಯಂತೂ ಅಲ್ಲ, ಇದು ಯಾರ ಜೀವವನ್ನಾದರು ತೆಗೆಯಬಹುದು . ನಾನು ಕೂಡ ಕೆಲ ತಿಂಗಳ ಹಿಂದೆ ಇದೇ ಸ್ಥಿತಿಯಲ್ಲಿದ್ದೆ. ಈ ಜಾಲಿರೈಡ್ ತುಂಬಾ ಅಪಾಯಕಾರಿಯಾಗಿದ್ದು, ನನ್ನ ಕೂದಲು ಕೂಡ ಹೀಗೆ ಸಿಲುಕಿತ್ತು. ನಂತರ ಕೂದಲು ಕತ್ತರಿಸಿ ಅಲ್ಲಿಂದ ಬಿಡಿಸಲಾಯ್ತು ಎಂದು ಒಬ್ಬರು ತಮ್ಮ ಅನುಭವ ಹೇಳಿಕೊಂಡಿದ್ದಾರೆ.
ಇಂತಹ ರೈಡ್‌ಗಳು ಎಷ್ಟು ಸುರಕ್ಷಿತ ಎಂದು ಕೆಲವರು ಪ್ರಶ್ನೆ ಮಾಡಿದ್ದು, ಕೂದಲನ್ನು ಕಟ್ಟದೇ ಬಿಟ್ಟು ಇಂತಹ ಮನೋರಂಜನಾ ಯಂತ್ರಗಳಲ್ಲಿ ಕುಳಿತುಕೊಳ್ಳಬಾರದು, ಅದು ಬಲು ಅಪಾಯಕಾರಿ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಹುಡುಗಿಯರು ಒಪನ್ ಹೇರ್ ಬಿಟ್ಟು ಶೋಕಿ ಮಾಡಲು ಹೋಗಿ ಅನಾಹುತವನ್ನು ಮೈಗೆ ಎಳೆದುಕೊಳ್ಳುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಇಂತಹ ಮನೋರಂಜನಾ ಆಟಗಳು ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುತ್ತಿವೆ.