Jammu Kashmir Politics: ಬಂಡೆದ್ದ ಗುಲಾಂ ನಬಿ ಆಜಾದ್‌ ಶೀಘ್ರ ಹೊಸ ಪಕ್ಷ ಸ್ಥಾಪನೆ ಸುಳಿವು!

By Kannadaprabha NewsFirst Published Dec 6, 2021, 6:34 AM IST
Highlights

* ಈಗಾಗಲೇ 20 ಆಪ್ತರಿಂದ ಕಾಂಗ್ರೆಸ್‌ಗೆ ರಾಜೀನಾಮೆ

* ಬಂಡೆದ್ದ ಗುಲಾಂ ನಬಿ ಆಜಾದ್‌ ಶೀಘ್ರ ಹೊಸ ಪಕ್ಷ ಸ್ಥಾಪನೆ ಸುಳಿವು

* ಮುಂದೇನಾಗುತ್ತೆ ಅಂತ ಹೇಳಲು ಆಗದು: ಕಾಂಗ್ರೆಸ್ಸಿಗ

* ಹಿರಿಯ್ಟಸಲಹೆ ಸ್ವೀಕರಿಸಲು ಕಾಂಗ್ರೆಸ್‌ ಸಿದ್ಧವಿಲ್ಲ

ನವದೆಹಲಿ(ಡಿ.06): ಕಾಂಗ್ರೆಸ್ಸಿನ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ (Ghulam Nabi Azad) ಅವರು ಶೀಘ್ರದಲ್ಲೇ ಪಕ್ಷ ತೊರೆಯುವ ಸಾಧ್ಯತೆ ಕಂಡುಬರುತ್ತಿದೆ. ಜಮ್ಮು-ಕಾಶ್ಮೀರದಲ್ಲಿ (Jammu Kashmir) ಅವರು ಹಲವು ಸರಣಿ ಸಭೆಗಳನ್ನು ನಡೆಸುತ್ತಿದ್ದು, ಹೊಸ ಪಕ್ಷ ಸ್ಥಾಪಿಸುವ ಕುರಿತು ದಟ್ಟವದಂತಿ ಹಬ್ಬಿದೆ. ಇದಕ್ಕೆ ಪುಷ್ಟಿ ನೀಡುವಂತೆ ಈಗಾಗಲೇ ಆಜಾದ್‌ ಅವರಿಗೆ ನಿಷ್ಠರಾಗಿರುವ 20 ನಾಯಕರು ವಾರಗಳ ಅಂತರದಲ್ಲಿ ಕಾಂಗ್ರೆಸ್ಸಿಗೆ (Congress) ಗುಡ್‌ಬೈ ಹೇಳಿದ್ದಾರೆ. ಪಕ್ಷದಲ್ಲಿ ಸುಧಾರಣೆಯಾಗಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.

ಈ ಮಧ್ಯೆ, ತಾವು ಹೊಸ ಪಕ್ಷ ಸ್ಥಾಪಿಸುತ್ತಿಲ್ಲ ಎಂದು ಆಜಾದ್‌ ಹೇಳಿದ್ದಾರೆ. ಇದೇ ವೇಳೆ, ಭವಿಷ್ಯದ ರಾಜಕಾರಣದಲ್ಲಿ ಏನಾಗುತ್ತದೆ ಎಂದು ಹೇಳಲು ಆಗುವುದಿಲ್ಲ ಎನ್ನುವ ಮೂಲಕ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಜೊತೆಗೆ ಈಗಿರುವ ಕಾಂಗ್ರೆಸ್‌ನಲ್ಲಿ ಸಲಹೆ ಒಪ್ಪಿಕೊಳ್ಳಲು ತಯಾರಿಲ್ಲ. ಹಿರಿಯ ನಾಯಕರು ಸಲಹೆ ನೀಡಿದರೆ ಅದನ್ನು ಅಪರಾಧ ಅಥವಾ ಬಂಡಾಯ ಎನ್ನುವಂತೆ ನೋಡುತ್ತಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ಸಿನಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕು ಎಂದು ಕಳೆದ ವರ್ಷ ಅಧ್ಯಕ್ಷರಿಗೆ ಪತ್ರ ಬರೆದ 23 ನಾಯಕರಲ್ಲಿ ಆಜಾದ್‌ ಕೂಡ ಮುಂಚೂಣಿಯಲ್ಲಿದ್ದರು. ಈಗಿರುವ ಸರ್ಕಾರ 370ನೇ ವಿಧಿಯನ್ನು ರದ್ದುಗೊಳಿಸಿದೆ. ಇದನ್ನು ಕಾಂಗ್ರೆಸ್‌ ಮರುಜಾರಿಗೊಳಿಸುತ್ತದೆ ಎಂದು ಭರವಸೆ ನೀಡಲಾರೆ. ಏಕೆಂದರೆ ಮುಂದಿನ 2024ರ ಚುನಾವಣೆಯಲ್ಲಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಕಾಂಗ್ರೆಸ್‌ ಗೆದ್ದು ಅಧಿಕಾರ ಹಿಡಿಯುತ್ತದೆ ಎಂಬುದಕ್ಕೆ ಖಾತ್ರಿ ಇಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು.

2024ಕ್ಕೆ ಪಕ್ಷ ಅಧಿಕಾರಕ್ಕೆ ಬರೋದು ಅನುಮಾನ: ಕಾಂಗ್ರೆಸ್ಸಿಗ ಆಜಾದ್‌!

ಪ್ರಮುಖ ಪ್ರತಿಪಕ್ಷವಾಗಿ ಕಾಂಗ್ರೆಸ್‌ನ ನಾಯಕತ್ವ, ಯುಪಿಎ (UPA) ಅಸ್ತಿತ್ವದ ಬಗ್ಗೆ ಮಮತಾ ಬ್ಯಾನರ್ಜಿ ಪ್ರಶ್ನೆ ಬೆನ್ನಲ್ಲೇ, 2024ರ ಲೋಕಸಭಾ ಚುನಾವಣೆಯಲ್ಲಿ (Loksabha Elections) ಕಾಂಗ್ರೆಸ್‌ ಗೆದ್ದು ಅಧಿಕಾರಕ್ಕೆ ಬರುವ ಬಗ್ಗೆ ಸ್ವತಃ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಅನುಮಾನ ವ್ಯಕ್ತಪಡಿಸಿದ್ದಾರೆ.

ಪೂಂಚ್‌ನಲ್ಲಿ ಕಾಂಗ್ರೆಸ್‌ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಆಜಾದ್‌ ‘ಈಡೇರಿಸಲಾಗದ ವಿಷಯದ ಬಗ್ಗೆ ನಾನು ಸುಳ್ಳು ಭರವಸೆ ನೀಡಲಾರೆ. ಸಂವಿಧಾನದ 370ನೇ ವಿಧಿ ವಿಷಯ ಸುಪ್ರೀಂಕೋರ್ಟ್‌ನಲ್ಲಿದೆ (Supreme Court). ಹೀಗಾಗಿ ಕೇವಲ ಜನರನ್ನು ಮೆಚ್ಚಿಸಲು ನಾನು ಸುಳ್ಳು ಭರವಸೆ ನೀಡಲಾರೆ. ಕೋರ್ಟ್‌ಗೆ ಹೊರತಾಗಿ ಯಾರಾದರೂ 370ನೇ ವಿಧಿ ಮರು ಜಾರಿ ಬಗ್ಗೆ ಏನಾದರು ಮಾಡಬಹುದಾದರೆ ಅದು ಕೇಂದ್ರ ಸರ್ಕಾರ. ಆದರೆ ಅವರೇ ವಿಧಿಯನ್ನು ರದ್ದು ಮಾಡಿರುವುದು. ಹೀಗಾಗಿ ಕಾಯ್ದೆ ಮರು ಜಾರಿಗೆ ನಮಗೆ ಲೋಕಸಭೆಯಲ್ಲಿ 300 ಸ್ಥಾನಗಳ ಕೊರತೆ ಇದೆ. 2024ರಲ್ಲೂ ಕಾಂಗ್ರೆಸ್‌ 300 ಸದಸ್ಯರನ್ನು ಗೆಲ್ಲಿಸಬಹುದು ಎಂಬುದನ್ನೂ ನಾನು ಹೇಳಲಾರೆ. ದೇವರು ಬಯಸಿದರೆ ನಾವು 300 ಸ್ಥಾನ ಗೆಲ್ಲಬಹುದು. ಆದರೆ ಅಂಥ ಬೆಳವಣಿಗೆಯನ್ನು ಸದ್ಯಕ್ಕಂತೂ ನಾನು ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

20 ಆಜಾದ್‌ ಬೆಂಬಲಿಗರ ರಾಜೀನಾಮೆ

ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ, ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಆಜಾದ್‌ ಅವರ ಆಪ್ತರು ಎನ್ನಲಾದ ಮಾಜಿ ಸಚಿವರು ಹಾಗೂ ಸಚಿವರು ಸೇರಿದಂತೆ 20 ಮುಖಂಡರು ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ತಮ್ಮ ರಾಜೀನಾಮೆ ಪ್ರತಿಯನ್ನು ರವಾನಿಸಿರುವ ಕಾಂಗ್ರೆಸ್‌ ನಾಯಕರು, ‘ಕಾಂಗ್ರೆಸ್‌ ರಾಜ್ಯ ನಾಯಕ ಜಿ.ಎ ಮೀರ್‌ ಅವರು ಪಕ್ಷದ ಸಂಘಟನೆ ವಿಚಾರದಲ್ಲಿ ನಮ್ಮ ಅಭಿಪ್ರಾಯ ಕೇಳುತ್ತಿಲ್ಲ. ಜತೆಗೆ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಹೀಗಾಗಿ ರಾಜೀನಾಮೆ ಸಲ್ಲಿಸಬೇಕಾಯಿತು’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇತ್ತೀಚೆಗೆ ಆಜಾದ್‌ ಅವರು ಸೋನಿಯಾ ವಿರುದ್ಧ ಪರೋಕ್ಷವಾಗಿ ದನಿ ಎತ್ತಿದ್ದರು ಎಂಬುದು ಇಲ್ಲಿ ಗಮನಾರ್ಹ.

click me!