ಗಾಜಿಯಾಬಾದ್‌ನಲ್ಲಿ ಪೋಷಕರು ಪೊದೆಯಲ್ಲಿ ಬಿಸಾಡಿದ ನವಜಾತ ಹೆಣ್ಣು ಮಗುವನ್ನು ಸಬ್ ಇನ್ಸ್‌ಪೆಕ್ಟರ್ ಪುಷ್ಪೇಂದ್ರ ಸಿಂಗ್ ಮತ್ತು ಅವರ ಪತ್ನಿ ದತ್ತು ಪಡೆದಿದ್ದಾರೆ.
ಪೋಷಕರೇ ಹುಟ್ಟಿದ ಕೂಡಲೇ ಪೊದೆಗೆ ಎಸೆದ ಮಗುವೊಂದನ್ನು ಇನ್ಸ್‌ಪೆಕ್ಟರ್ ಒಬ್ಬರು ದತ್ತು ಪಡೆಯುವ ಮೂಲಕ ಮಾನವೀಯತೆ ಇನ್ನು ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಹೆಣ್ಣು ಮಗುವೊಂದನ್ನು ಪೋಷಕರೇ ಹುಟ್ಟಿದ ಕೂಡಲೇ ಪೊದೆ ಬಳಿ ತಂದು ಬಿಟ್ಟು ಹೋಗಿದ್ದರು. ಮಗುವಿನ ಅಳು ಕೇಳಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು.
ಸಬ್ ಇನ್ಸ್‌ಪೆಕ್ಟರ್ ಪುಷ್ಪೆಂದ್ರ ಸಿಂಗ್ ನೇತೃತ್ವದಲ್ಲಿ ಗಾಜಿಯಾಬಾದ್‌ನ ದುಧಿಯಾ ಪೀಪಲ್ ಪೊಲೀಸ್ ಔಟ್‌ಪೋಸ್ಟ್‌ನ ಪೊಲೀಸರು ಕೂಡಲೇ ಸಾರ್ವಜನಿಕರ ಕರೆಗೆ ಸ್ಪಂದಿಸಿ ಸ್ಥಳಕ್ಕಾಗಮಿಸಿ ಮಗುವನ್ನು ರಕ್ಷಣೆ ಮಾಡಿದರು. ಕೂಡಲೇ ಮಗುವನ್ನು ದಸ್ನಾದ ಸಮುದಾಯ ಆಸ್ಪತ್ರೆಗೆ ತಪಾಸಣೆಗಾಗಿ ಕರೆತಂದು ತಪಾಸಣೆ ಮಾಡಲಾಯ್ತು. ಈ ವೇಳೆ ಮಗುವಿನ ಪೋಷಕರು ಯಾರಿರಬಹುದು ಎಂದು ತಿಳಿಯಲು ಹಲವು ಪ್ರಯತ್ನ ಮಾಡಿದರಾದರು ಯಾವುದೇ ಪ್ರಯೋಜನವಾಗಲಿಲ್ಲ, ಯಾರು ಇದು ನಮ್ಮ ಮಗು ಎಂದು ಹೇಳಿಕೊಳ್ಳಲು ಸಿದ್ಧರಿರಲಿಲ್ಲ.
ಹೀಗಾಗಿ ಪರಿಸ್ಥಿತಿ ಅವಲೋಕಿಸಿದ ಸಬ್ ಇನ್ಸ್‌ಪೆಕ್ಟರ್ ಪುಷ್ಪೇಂದ್ರ ಸಿಂಗ್ ಅವರು ಹಾಗೂ ಅವರ ಪತ್ನಿ ರಾಶಿ ಈ ಪೋಷಕರು ತೊರೆದ ಮಗುವನ್ನು ದತ್ತು ಪಡೆಯಲು ಮುಂದಾದರು. ಇಬ್ಬರು ಈ ವಿಚಾರದ ಬಗ್ಗೆ ಪರಸ್ಪರ ಚರ್ಚಿಸಿದರು, ನಂತರ ಮಗು ದತ್ತು ಪಡೆಯಲು ಬೇಕಾದ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಶುರು ಮಾಡಿದರು. ಇನ್ಸ್‌ಪೆಕ್ಟರ್ ಪುಷ್ಪೇಂದ್ರ ಸಿಂಗ್ ಹಾಗೂ ಪತ್ನಿ ರಾಶಿ ಖನ್ನಾ ಅವರು 2018ರಲ್ಲಿ ಮದುವೆಯಾಗಿದ್ದು, ಮಕ್ಕಳಿರಲಿಲ್ಲ, ಆದರೆ ನವರಾತ್ರಿ ವೇಳೆ ಅವರಿಗೆ ಈ ಹೆಣ್ಣು ಮಗು ಸಿಕ್ಕಿದ್ದು, ಮಗುವಿನ ಈ ಆಗಮನವನ್ನು ದೇವರ ಆಶೀರ್ವಾದವೆಂದು ದಂಪತಿ ಬಣ್ಣಿಸಿದ್ದಾರೆ.
ಹಾಗೆಯೇ ದತ್ತು ತೆಗೆದುಕೊಳ್ಳಲು ಬೇಕಾದ ಎಲ್ಲಾ ಪ್ರಕ್ರಿಯೆಗಳನ್ನು ಇವರು ಮಾಡಿದ್ದಾರೆ ಎಂದು ಇನ್ಸ್‌ಪೆಕ್ಟರ್ ಅಂಕಿತ್ ಚೌಹಾಣ್ ಅವರು ಖಚಿತಪಡಿಸಿದ್ದಾರೆ. ಪ್ರಸ್ತುತ ಈ ಮಗು ಪುಷ್ಪೆಂದ್ರ ಸಿಂಗ್ ದಂಪತಿಯ ಆರೈಕೆಯಲ್ಲಿದೆ ಎಂದು ತಿಳಿದು ಬಂದಿದೆ. ಪುಷ್ಪೆಂದ್ರ ಹಾಗೂ ಪತ್ನಿ ಇಬ್ಬರು ಮಗು ದತ್ತು ಪಡೆಯಲು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲು ಕಾತುರದಿಂದ ಕಾಯುತ್ತಿದ್ದು, ಇದು ತಮ್ಮ ಮಗುವೆಂದು ಅಧಿಕೃತವಾಗಿ ಹೇಳಿಕೊಳ್ಳಲು ಉತ್ಸಾಹಿತರಾಗಿದ್ದಾರೆ. ಹೀಗಾಗಿ ಹೆತ್ತವರಿಗೆ ಬೇಡವಾದ ಮಗುವೊಂದಕ್ಕೆ ಈಗ ಸುಂದರವಾದ ಬದುಕು ಸಿಕ್ಕಿದ್ದು, ಪುಷ್ಪೇಂದ್ರ ಸಿಂಗ್ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.