
ನವದೆಹಲಿ (ಜು.16): ಉತ್ತರ ಪ್ರದೇಶದ ಗಾಜಿಯಾಬಾದ್‌ನ ಕವಿ ನಗರ ಪ್ರದೇಶದ ವಸತಿ ಸೊಸೈಟಿಯ ಫ್ಲಾಟ್‌ನೊಳಗೆ ಭಾನುವಾರ ಬೆಳಿಗ್ಗೆ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ನಾಲ್ವರು ಅಪ್ರಾಪ್ತ ಹುಡುಗರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಾಲ್ವರು ಆರೋಪಿಗಳೂ 14 ರಿಂದ 17 ವರ್ಷದೊಳಗಿನ ಅಪ್ರಾಪ್ತ ವಯಸ್ಕರು. ಇಬ್ಬರು ಹುಡುಗರು, ಹುಡುಗಿಯ ಜೊತೆ ಅದೇ ಖಾಸಗಿ ಶಾಲೆಯಲ್ಲಿ ಓದುತ್ತಿದ್ದರೆ, ಉಳಿದ ಇಬ್ಬರು ಬೇರೆ ಬೇರೆ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಕವಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಬೆಳಿಗ್ಗೆ 11.30 ರ ಸುಮಾರಿಗೆ ಅಪಾರ್ಟ್‌ಮೆಂಟ್‌ನಲ್ಲಿ ಬಾಲಕಿ ಒಬ್ಬಳೇ ಮನೆಯಲ್ಲಿ ಇದ್ದಾಗ ಘಟನೆ ನಡೆದಿದೆ. ಆಕೆಯ ತಂದೆ ಎಂದಿನಂತೆ ಕೆಲಸಕ್ಕೆ ಹೋಗಿದ್ದರೆ, ತಾಯಿ ಹತ್ತಿರದ ಮಾರುಕಟ್ಟೆಗೆ ಹೋಗಿದ್ದರು. ಆರೋಪಿಗಳಲ್ಲಿ ಒಬ್ಬನಾದ ಹನ್ನೊಂದನೇ ತರಗತಿಯ ವಿದ್ಯಾರ್ಥಿ, ಬಾಲಕಿಗೆ ಮೊದಲೇ ಕರೆ ಮಾಡಿ ತಾನು ಭೇಟಿಯಾಗಲು ಬರುತ್ತಿರುವುದಾಗಿ ತಿಳಿಸಿದ್ದ ಎನ್ನಲಾಗಿದೆ. ಅವರು ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕದಲ್ಲಿದ್ದರು ಮತ್ತು ನಂತರ ತಂದೆ ಪೊಲೀಸರಿಗೆ ತಿಳಿಸಿದ್ದು, ಕಳೆದ ಎರಡು ದಿನಗಳಿಂದ ಹುಡುಗ ತನ್ನ ಮಗಳನ್ನು ಆನ್‌ಲೈನ್‌ನಲ್ಲಿ ಕಿರುಕುಳ ನೀಡುತ್ತಿದ್ದ. ಆಕೆಯನ್ನು ಭೇಟಿಯಾಗಲು ಪದೇ ಪದೇ ಒತ್ತಾಯಿಸುತ್ತಿದ್ದ ಎಂದು ತಿಳಿಸಿದ್ದಾರೆ.
'ಆಕೆ ಮನೆಯ ಬಾಗಿಲು ತೆರೆದಾಗ, ಪ್ರಮುಖ ಆರೋಪಿ ಇತರ ಮೂವರು ಹುಡುಗರೊಂದಿಗೆ ಇರುವುದನ್ನು ಆಕೆಯ ನೋಡಿದ್ದಳು. ಈ ವೇಳೆ ಅವರು ಬಲವಂತವಾಗಿ ಫ್ಲ್ಯಾಂಟ್‌ಗೆ ಪ್ರವೇಶಿಸಿದ್ದಾರೆ. ಆಕೆಯನ್ನು ಒಂದು ಕೋಣೆಗೆ ಎಳೆದುಕೊಂಡು ಹೋಗಿ, ಸರದಿಯಂತೆ ಅವಳ ಮೇಲೆ ಅತ್ಯಾಚಾರ ನಡೆಸಿದ್ದಾರೆ' ಎಂದು ವರದಿಯಾಗಿದೆ.
ಸ್ವಲ್ಪ ಸಮಯದ ನಂತರ, ಹುಡುಗಿಯ ತಾಯಿ ಮನೆಗೆ ಹಿಂತಿರುಗಿದಾಗ ಮುಂಭಾಗದ ಬಾಗಿಲು ತೆರೆದಿರುವುದನ್ನು ಕಂಡಳು. ಒಳಗೆ, ತನ್ನ ಮಗಳೊಂದಿಗೆ ನಾಲ್ವರು ಹುಡುಗರು ಇರುವುದನ್ನು ಆಕೆ ನೋಡಿದ್ದಾಳೆ. ಅವಳು ತಕ್ಷಣ ಫ್ಲಾಟ್ ಅನ್ನು ಒಳಗಿನಿಂದ ಲಾಕ್ ಮಾಡಿ, ಅಲಾರಾಂ ಒತ್ತಿ, ತನ್ನ ಪತಿಗೆ ಕರೆ ಮಾಡಿದ್ದಾರೆ.
ಪೊಲೀಸ್ ತುರ್ತು ಸಂಖ್ಯೆ 112 ಗೆ ಕರೆ ಮಾಡಿದರೂ, ಅಧಿಕಾರಿಗಳು ಬರುವ ಮೊದಲೇ ಹುಡುಗರು ಪರಾರಿಯಾಗುವಲ್ಲಿ ಯಶಸ್ವಿಯಾದರು. "ಸೊಸೈಟಿಯ ಕೆಲವು ನಿವಾಸಿಗಳು ನಮ್ಮ ಮನೆಗೆ ಬಂದು ಘಟನೆಯ ಬಗ್ಗೆ ನನ್ನ ಹೆಂಡತಿಯೊಂದಿಗೆ ಮಾತನಾಡುತ್ತಿದ್ದಾಗ, ಹುಡುಗರು ಪರಾರಿಯಾಗುವಲ್ಲಿ ಯಶಸ್ವಿಯಾದರು" ಎಂದು ತಂದೆ ಆರೋಪಿಸಿದ್ದಾರೆ ಎಂದು ವರದಿಯಾಗಿದೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ತ್ವರಿತವಾಗಿ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಭಾನುವಾರ ರಾತ್ರಿ 11.30 ರ ಸುಮಾರಿಗೆ ದಾಖಲಾಗಿರುವ ಎಫ್‌ಐಆರ್‌ನಲ್ಲಿ, ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 70(2) ರ ಅಡಿಯಲ್ಲಿ ಆರೋಪಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳನ್ನು ಸೇರಿಸಲಾಗಿದೆ.
ಘಟನೆಯ ತನಿಖೆಗಾಗಿ ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಎಸಿಪಿ ಕವಿ ನಗರ ಭಾಸ್ಕರ್ ವರ್ಮಾ ದೃಢಪಡಿಸಿದ್ದಾರೆ. "ನಾವು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದೇವೆ. ವರದಿಗಾಗಿ ಕಾಯುತ್ತಿದ್ದೇವೆ. ಮ್ಯಾಜಿಸ್ಟ್ರೇಟ್ ಮುಂದೆ ಆಕೆಯ ಹೇಳಿಕೆಯನ್ನು ಶೀಘ್ರದಲ್ಲೇ ದಾಖಲಿಸಲಾಗುವುದು. ಹೌಸಿಂಗ್ ಸೊಸೈಟಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಬಾಲಕಿ ದಾಖಲಾಗಿರುವ ಶಾಲೆಗೆ ಈ ವರ್ಷ ಪ್ರವೇಶ ಪಡೆದಿದ್ದರೂ ಇಲ್ಲಿಯವರೆಗೆ ಯಾವುದೇ ತರಗತಿಗಳಿಗೆ ಹಾಜರಾಗಿಲ್ಲ ಎಂದು ಹೇಳಿದೆ. "ನಮಗೆ ತಿಳಿದಿರುವಂತೆ, ಆಕೆಯ ಕುಟುಂಬ ಇತ್ತೀಚೆಗೆ ಗಾಜಿಯಾಬಾದ್‌ಗೆ ಸ್ಥಳಾಂತರಗೊಂಡಿತು. ಆದರೂ, ಬಾಲಕಿ ಪ್ರವೇಶ ಪಡೆದ ನಂತರ ಶಾಲೆಗೆ ಹೋಗಿಲ್ಲ. ನಮ್ಮ ಬಳಿ ದಾಖಲೆಗಳಿವೆ" ಎಂದು ಶಾಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಪ್ರಮುಖ ಆರೋಪಿಯು ಬಾಲಕಿ ಓದುತ್ತಿದ್ದ ಶಾಲೆಯಲ್ಲಿ ಓದದಿದ್ದರೂ, ಆಕೆಯ ಸಹೋದರನನ್ನು ತಿಳಿದಿದ್ದ ಎಂದು ವರದಿಯಾಗಿದೆ. ಆರೋಪಿ ಮತ್ತು ಸಂತ್ರಸ್ಥೆಯ ಸಹೋದರ ಇಬ್ಬರೂ ಹತ್ತನೇ ತರಗತಿಯವರೆಗೆ ಬೇರೆ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು, ಆದರೆ ಹನ್ನೊಂದನೇ ತರಗತಿಗೆ ಮುಂಚಿತವಾಗಿ ಶಾಲೆಯನ್ನು ಬದಲಾಯಿಸಿದರು ಎಂದು ಶಾಲಾ ಆಡಳಿತ ಮಂಡಳಿ ದೃಢಪಡಿಸಿದೆ.
ಪ್ರಮುಖ ಆರೋಪಿ ವೇವ್ ಸಿಟಿ ಪ್ರದೇಶದ ನಿವಾಸಿ ಎಂದು ಮೂಲಗಳು ತಿಳಿಸಿವೆ. ತನಿಖಾಧಿಕಾರಿಗಳು ಸೋಶಿಯಲ್ ಮೀಡಿಯಾ ಚಾಟ್‌ಗಳು ಮತ್ತು ಕರೆ ದಾಖಲೆಗಳು ಸೇರಿದಂತೆ ಡಿಜಿಟಲ್ ಹಾದಿಯನ್ನು ಸಹ ಪರಿಶೀಲಿಸುತ್ತಿದ್ದಾರೆ, ಇದು ದಾಳಿಯನ್ನು ಹೇಗೆ ಯೋಜಿಸಲಾಗಿದೆ ಮತ್ತು ಪೂರ್ವಯೋಜಿತವಾಗಿದೆಯೇ ಎನ್ನುವುದನ್ನೂ ಕೂಡ ಪತ್ತೆ ಮಾಡುತ್ತಿದ್ದಾರೆ.
"ಹುಡುಗರು ನನ್ನ ಮಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ದೀರ್ಘಕಾಲ ಕಿರುಕುಳ ನೀಡುತ್ತಿದ್ದರು. ಅವಳು ಮಾತನಾಡಲು ನಿರಾಕರಿಸಿದಾಗಲೆಲ್ಲಾ ಅವರು ಅವಳನ್ನು ಬೆದರಿಸುತ್ತಿದ್ದರು" ಎಂದು ಅವರು ಹೇಳಿದರು. ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ಪೊಲೀಸರು ನಾಲ್ವರು ಆರೋಪಿಗಳನ್ನು ಗುರುತಿಸುವ ಮತ್ತು ಪತ್ತೆಹಚ್ಚುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಹೇಳಿದರು. ಎಲ್ಲರೂ ಬಾಲಕಿಗೆ ಪರಿಚಿತರು ಎಂದು ನಂಬಲಾಗಿದೆ ಮತ್ತು ಎಫ್‌ಐಆರ್ ಪ್ರಸ್ತುತ ಒಬ್ಬ ವ್ಯಕ್ತಿಯ ಹೆಸರನ್ನು ಮಾತ್ರ ಉಲ್ಲೇಖಿಸಿದೆ . ಆಕೆ ಆನ್‌ಲೈನ್‌ನಲ್ಲಿ ಸಂವಹನ ನಡೆಸಿದ್ದ ಹನ್ನೊಂದನೇ ತರಗತಿಯ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಬಾಲಕಿ ಪ್ರಸ್ತುತ ವೈದ್ಯಕೀಯ ವೀಕ್ಷಣೆಯಲ್ಲಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ