ನನ್ನ ಪ್ರಶ್ನೆಗಳನ್ನು ಟೈಪ್ ಮಾಡಲು ದರ್ಶನ್ ಅವರ ಸಿಬ್ಬಂದಿಗೆ ನನ್ನ ಸಂಸತ್ ಐಡಿಯ ಪಾಸ್‌ವರ್ಡ್ ನೀಡಿದ್ದು ನಿಜ. ಆದರೆ ಒಟಿಪಿ ನನಗೆ ಬರುತ್ತಿತ್ತು. ನನ್ನ ಅನುಮೋದನೆಯ ನಂತರವೇ ಪ್ರಶ್ನೆ ಪೋಸ್ಟ್ ಆಗುತ್ತಿತ್ತು ಎಂದು ಮಹುವಾ ಮೊಯಿತ್ರಾ ಹೇಳಿದ್ದಾರೆ.
ನವದೆಹಲಿ (ಅಕ್ಟೋಬರ್ 28, 2023): ಪ್ರಧಾನಿ ನರೇಂದ್ರ ಮೋದಿ ಹಾಗೂ ಉದ್ಯಮಿ ಗೌತಮ್ ಅದಾನಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಉದ್ಯಮಿ ಹೀರಾನಂದಾನಿಯಿಂದ ಲಂಚ ಪಡೆದು ಪ್ರಶ್ನೆಗಳನ್ನು ಲೋಕಸಭೆಯಲ್ಲಿ ಕೇಳಿದ ಆರೋಪ ಹೊತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ತಮ್ಮ ಸಂಸತ್ತಿನ ಲಾಗಿನ್ ಐಡಿ ಹಾಗೂ ಪಾಸ್‌ವರ್ಡನ್ನು ಉದ್ಯಮಿಯ ಸಿಬ್ಬಂದಿ ಜತೆಗೆ ಹಂಚಿಕೊಂಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ಟಿವಿ ವಾಹಿನಿ ಜತೆ ಮಾತನಾಡಿದ ಅವರು, ‘ನನ್ನ ಪ್ರಶ್ನೆಗಳನ್ನು ಟೈಪ್ ಮಾಡಲು ದರ್ಶನ್ ಅವರ ಸಿಬ್ಬಂದಿಗೆ ನನ್ನ ಸಂಸತ್ ಐಡಿಯ ಪಾಸ್‌ವರ್ಡ್ ನೀಡಿದ್ದು ನಿಜ. ಆದರೆ ಒಟಿಪಿ ನನಗೆ ಬರುತ್ತಿತ್ತು. ನನ್ನ ಅನುಮೋದನೆಯ ನಂತರವೇ ಪ್ರಶ್ನೆ ಪೋಸ್ಟ್ ಆಗುತ್ತಿತ್ತು’ ಎಂದಿದ್ದಾರೆ. ಈ ಮೂಲಕ, ನನಗೆ ಗೊತ್ತಾಗದಂತೆ ಹೀರಾನಂದಾನಿ, ನನ್ನ ಪರ ಪ್ರಶ್ನೆ ಕೇಳುತ್ತಿದ್ದರು ಎಂಬ ಆರೋಪ ನಿರಾಕರಿಸಿದ್ದಾರೆ.
ಇದನ್ನು ಓದಿ: ಹಣ, ಉಡುಗೊರೆಗಾಗಿ ಸಂಸತ್ತಿನಲ್ಲಿ ಪ್ರಶ್ನೆ ಮಾಡ್ತಿದ್ದ ಟಿಎಂಸಿ ಸಂಸದೆ? ಏನಿದು ವಿವಾದ..? ಇಲ್ಲಿದೆ ವಿವರ..
ಇನ್ನು, ಸಂಸತ್ ಸಮಿತಿ ವಿಚಾರಣೆಗೆ ಅಕ್ಟೋಬರ್ 30ಕ್ಕೆ ಬರಲು ಆಗದು. ನವೆಂಬರ್ 5ರ ನಂತರ ಹೋಗುವೆ ಎಂದಿದ್ದಾರೆ. ಅದರೆ, ಈ ಬಗ್ಗೆ ತನಿಖೆ ನಡೆಸುತ್ತಿರುವ ಸಂಸತ್ತಿನ ನೈತಿಕ ಸಮಿತಿಯು ನವೆಂಬರ್ 2 ರಂದು ಹಾಜರಾಗುವಂತೆ ಮಹುವಾ ಮೊಯಿತ್ರಾಗೆ ಸಮನ್ಸ್ ನೀಡಿದೆ. ಅಕ್ಟೋಬರ್ 31 ರೊಳಗೆ ಹಾಜರಾಗುವಂತೆ ಈ ಹಿಂದೆ ನೋಟಿಸ್ ನೀಡಲಾಗಿತ್ತಾದ್ರೂ, ಆ ವೇಳೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಟಿಎಂಸಿ ಸಂಸದೆ ಹೇಳಿದ್ದರು.
ಅವರು ಹೊಸ ದಿನಾಂಕವನ್ನು ಕೋರಿದ ನಂತರ ದಿನಾಂಕವನ್ನು ಬದಲಾಯಿಸಲಾಗಿದೆ. ಆದರೆ ಸಂಸತ್ ನೈತಿಕ ಸಮಿತಿಯು ಹೆಚ್ಚಿನ ವಿಸ್ತರಣೆಯನ್ನು ನೀಡಲ್ಲ ಎಂದಿದ್ದು, ನವೆಂಬರ್ 2 ರಂದು ಹಾಜರಾಗುವಂತೆ ಸೂಚಿಸಿದೆ. ಉದ್ಯಮಿ ದರ್ಶನ್ ಹಿರಾನಂದನಿಗೆ ತನ್ನ ಲೋಕಸಭೆಯ ಲಾಗಿನ್ ಪಾಸ್‌ವರ್ಡ್ ಬಳಸಲು ಅವಕಾಶ ಮಾಡಿಕೊಟ್ಟಿದ್ದನ್ನು ಟಿವಿ ಮಾಧ್ಯಮಗಳಿಗೆ ಮಹುವಾ ಮೊಯಿತ್ರಾ ಒಪ್ಪಿಕೊಂಡ ಒಂದು ದಿನದ ನಂತರ ನವೆಂಬರ್ 2ರಂದು ಹಾಜರಾಗಲು ಸಮನ್ಸ್ ಬಂದಿದೆ.
ಇದನ್ನೂ ಓದಿ: ಸ್ಟೈಲಿಶ್ ಲುಕ್ ಫುಲ್ ಗಿಮಿಕ್: ಮೋದಿ ವಿರುದ್ಧ ಸದಾ ಕಿಡಿಕಾರ್ತಿದ್ದ ಟಿಎಂಸಿ ಸಂಸದೆ ಬಣ್ಣ ಬಯಲು ಮಾಡಿದ್ರಾ ಉದ್ಯಮಿ...!
ಪ್ರಶ್ನೆ ಕೇಳದಂತೆ ಅದಾನಿ ಲಂಚದ ಆಫರ್: ಮಹುವಾ
ಇನ್ನು, ಮೋದಿ, ಅದಾನಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಲಂಚ ಪಡೆದು ಪ್ರಶ್ನೆಗಳನ್ನು ಲೋಕಸಭೆಯಲ್ಲಿ ಕೇಳಿದ ಆರೋಪ ಹೊತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ‘ಪ್ರಶ್ನೆ ಕೇಳದಂತೆ ಇಬ್ಬರು ಸಂಸದರ ಮೂಲಕ ಅದಾನಿಯೇ ಹಣದ ಆಫರ್ ನೀಡಿದ್ದರು. ಅದನ್ನು ನಾನು ನಿರಾಕರಿಸಿದ್ದೆ’ ಎಂದು ಆರೋಪ ಹೊರಿಸಿದ್ದಾರೆ.