ಹುತಾತ್ಮ ಸೇನಾಧಿಕಾರಿ ಪ್ರಸಾದ್‌ ಪತ್ನಿ ಗೌರಿ ಒಟಿಎ ಪರೀಕ್ಷೆ ಪಾಸ್‌!

By Kannadaprabha NewsFirst Published Mar 8, 2020, 12:53 PM IST
Highlights

ಹುತಾತ್ಮ ಸೇನಾಧಿಕಾರಿ ಪ್ರಸಾದ್‌ ಪತ್ನಿ ಗೌರಿ ಒಟಿಎ ಪರೀಕ್ಷೆ ಪಾಸ್‌| 2019ರ ಏಪ್ರಿಲ್‌ನಿಂದ 59 ವಾರಗಳ ನಿರಂತರ ತರಬೇತಿಯಲ್ಲೂ ಉತ್ತೀರ್ಣರಾಗಿರುವ ಗೌರಿ ಪ್ರಸಾದ್‌

ನವದೆಹಲಿ[ಮಾ.08]: ಭಾರತೀಯ ಸೇನೆಯ ಹುತಾತ್ಮ ಸೇನಾಧಿಕಾರಿ ಮೇಜರ್‌ ಪ್ರಸಾದ್‌ ಮೆಹದಿಕ್‌ ಅವರ ಪತ್ನಿ ಗೌರಿ ಪ್ರಸಾದ್‌ ಮೆಹದಿಕ್‌ ಅವರು ಅಧಿಕಾರಿಗಳ ತರಬೇತಿ ಅಕಾಡೆಮಿ(ಒಟಿಎ)ಯಿಂದ ಉತ್ತೀರ್ಣರಾಗಿದ್ದಾರೆ. ತನ್ಮೂಲಕ ಇದೀಗ ಸೇನಾ ಅಧಿಕಾರಿಯಾಗಿ ಹೊರ ಹೊಮ್ಮಿದ್ದಾರೆ.

ಕಳೆದ ವರ್ಷವಷ್ಟೇ ಎಸ್‌ಎಸ್‌ಬಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಗೌರಿ ಪ್ರಸಾದ್‌ ಅವರು, ಚೆನ್ನೈನಲ್ಲಿರುವ ಒಟಿಎಯಲ್ಲಿ ತರಬೇತಿ ಪಡೆಯಲು ಅರ್ಹರಾಗಿದ್ದರು. 2019ರ ಏಪ್ರಿಲ್‌ನಿಂದ 59 ವಾರಗಳ ನಿರಂತರ ತರಬೇತಿಯಲ್ಲೂ ಉತ್ತೀರ್ಣರಾಗಿರುವ ಗೌರಿ ಪ್ರಸಾದ್‌ ಅವರು ಇದೀಗ ಭಾರತೀಯ ಸೇನೆ ಸೇರ್ಪಡೆಯಾಗಲಿದ್ದಾರೆ. ಗೌರಿ ಅವರ ಪತಿ ಮೇಜರ್‌ ಪ್ರಸಾದ್‌ ಮೆಹದಿಕ್‌ ಅರುಣಾಚಲ ಪ್ರದೇಶದ ಭಾರತ-ಚೀನಾ ಗಡಿ ಭಾಗದ ತವಾಂಗ್‌ನಲ್ಲಿ ಹತ್ಯೆಗೀಡಾಗಿದ್ದರು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಗೌರಿ ಪ್ರಸಾದ್‌ ಅವರು, ‘ಈ ಖುಷಿಯಲ್ಲಿ ನನ್ನ ಹುತಾತ್ಮ ಪತಿ ಮೆಹದಿಕ್‌ ಅವರು ನನ್ನ ಸುತ್ತಮುತ್ತಲೇ ಇದ್ದಾರೆ ಎಂದು ಅನ್ನಿಸುತ್ತದೆ. ಅಲ್ಲದೆ, ತನ್ನ ಪತಿಯಂತೆಯೇ ದೇಶಕ್ಕಾಗಿ ದುಡಿಯುವ ಆಕಾಂಕ್ಷೆಯನ್ನು ಬಿಚ್ಚಿಟ್ಟಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ನನಗೆ ಸೇನಾ ಪಡೆಗಳ ಸೇರ್ಪಡೆಗೆ ಅವಕಾಶವಿಲ್ಲ. ಆದರೆ, ಅವಕಾಶ ನೀಡಿದ್ದೇ ಆದಲ್ಲಿ, ನಾಳೆಯೇ ಸೇನಾ ಪಡೆಗಳನ್ನು ಸೇರುವುದಾಗಿ’ ಹೇಳಿದ್ದಾರೆ.

click me!