Vijay Mallya Eviction: ಸಾಲ ಕಟ್ಟದ ಮಲ್ಯ ಲಂಡನ್‌ನಲ್ಲೂ 'ದಿವಾಳಿ', ಮನೆಯಿಂದ ಹೊರಹಾಕಲು ಆದೇಶ

By Suvarna NewsFirst Published Jan 19, 2022, 7:20 AM IST
Highlights

* ಮಲ್ಯ ಲಂಡನ್‌ ಮನೆ ಜಪ್ತಿಗೆ ಕೋರ್ಟ್‌ ಆದೇಶ

* ಸಾಲ ಕಟ್ಟದ ಮಲ್ಯಗೆ ಲಂಡನ್‌ನಲ್ಲೂ ಗೃಹಭಂಗ

* 2012ರಲ್ಲಿ ಸ್ವಿಸ್‌ ಬ್ಯಾಂಕಿಂದ ಮಲ್ಯಗೆ 200 ಕೋಟಿ ರು. ಸಾಲ

* ಸಾಲ ಕಟ್ಟದೇ ಲಂಡನ್‌ ಮನೆ ಕಳೆದುಕೊಂಡ ಮದ್ಯ ದೊರೆ

ಲಂಡನ್‌(ಜ.19): ಭಾರತದಲ್ಲಿ 9 ಸಾವಿರ ಕೋಟಿ ರು. ಸಾಲ ಮಾಡಿ ಬ್ರಿಟನ್‌ಗೆ ಪರಾರಿಯಾಗಿದ್ದ ಉದ್ಯಮಿ ವಿಜಯ ಮಲ್ಯ, ತಮ್ಮ ಬ್ರಿಟನ್‌ ಮನೆಯನ್ನೂ ಕಳೆದುಕೊಂಡಿದ್ದಾರೆ. ಸಾಲ ಕಟ್ಟದ ಮಲ್ಯ ಅವರ ಲಂಡನ್‌ ನಿವಾಸವನ್ನು ವಶಕ್ಕೆ ಪಡೆಯಲು ಸ್ವಿಸ್‌ ಬ್ಯಾಂಕ್‌ ‘ಯುಬಿಎಸ್‌’ ಸಲ್ಲಿಸಿದ ಅರ್ಜಿಯನ್ನು ಬ್ರಿಟನ್‌ ನ್ಯಾಯಾಲಯ ಮಾನ್ಯ ಮಾಡಿದೆ.

ಈ ಪ್ರಕಾರ ಲಂಡನ್‌ನ ರೆಜಿಂಟ್‌ ಉದ್ಯಾನದಲ್ಲಿರುವ ಕಾರ್ನ್‌ವಾಲ್‌ ಟೆರೇಸ್‌ ಹೆಸರಿನ ಮಲ್ಯ ಅವರ ಐಷಾರಾಮಿ ನಿವಾಸವು ಸ್ವಿಸ್‌ ಬ್ಯಾಂಕ್‌ ಯುಬಿಎಸ್‌ ವಶವಾಗಲಿದೆ. ತನ್ಮೂಲಕ ಮಲ್ಯ, ಅವರ ಪುತ್ರ ಸಿದ್ಧಾರ್ಥ ಮತ್ತು ತಾಯಿ ಲಲಿತಾ ಅವರು ಈ ಮನೆಯಿಂದ ಹೊರಬೀಳಲಿದ್ದಾರೆ.

ಏನಿದು ಪ್ರಕರಣ?:

ಬ್ರಿಟಿಷ್‌ ವರ್ಜಿನ್‌ ಐಲ್ಯಾಂಡ್‌ನಲ್ಲಿ ಮಲ್ಯ ಕುಟುಂಬದ ಹೆಸರಲ್ಲಿ ನೋಂದಣಿ ಆಗಿರುವ ರೋಸ್‌ ಕ್ಯಾಪಿಟಲ್‌ ಕಂಪನಿಯು 2012ರಲ್ಲಿ ಸ್ವಿಸ್‌ ಬ್ಯಾಂಕ್‌ನಿಂದ 200 ಕೋಟಿ ರು. ಸಾಲ ಪಡೆದಿತ್ತು. 5 ವರ್ಷಗಳ ಅವಧಿಯ ಈ ಸಾಲಕ್ಕೆ ಮಲ್ಯ ಅವರು ಲಂಡನ್‌ನಲ್ಲಿರುವ ಐಷಾರಾಮಿ ಮನೆಯನ್ನು ಅಡಮಾನ ಇಟ್ಟಿದ್ದರು. ಈ ಪ್ರಕಾರ 2017ರ ಮಾ.26ರ ಒಳಗೆ ಈ ಸಾಲವನ್ನು ಮರುಪಾವತಿ ಮಾಡಬೇಕಿತ್ತು. ಆದರೆ ಸಾಲ ಕಟ್ಟದ ಕಾರಣ ಮಲ್ಯ ಮನೆ ಬ್ಯಾಂಕ್‌ ಪಾಲಾಗಿದೆ.

ಸಾಲ ಮರುಪಾವತಿ:

ಎಸ್‌ಬಿಐ ನೇತೃತ್ವದ ಒಕ್ಕೂಟದ ಪರವಾಗಿ ಸಾಲ ಮರುಪಡೆಯುವಿಕೆ ನ್ಯಾಯಮಂಡಳಿ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್‌ನ ಷೇರುಗಳನ್ನು 5824.50 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಆ ಮೂಲಕ ಜೂನ್ 25ರೊಳಗೆ ಷೇರುಗಳ ಮಾರಾಟದಿಂದ 800 ಕೋಟಿ ರೂ.ಗಳ ಹೆಚ್ಚಿನ ಪಡೆಯುವ ಬಗ್ಗೆ ನಿರೀಕ್ಷಿಸಲಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಈಗಾಗಲೇ ಷೇರುಗಳನ್ನು ಮಾರಾಟ ಮೂಲಕ 1357 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡಿಕೊಂಡಿವೆ.

ಸಾಲ ವಸೂಲಾತಿ ನ್ಯಾಯಾಧಿಕರಣ (DRT) ನಡೆಸಿಕೊಟ್ಟ ಹರಾಜಿನಲ್ಲಿ ಪಾಲ್ಗೊಂಡಿದ್ದ ಹೈದರಾಬಾದ್ ಮೂಲದ ಸ್ಯಾಟ್ರನ್ ರಿಯಲ್ಟರ್ಸ್ ಸಂಸ್ಥೆ ಮುಂಬೈನ ಐಷಾರಾಮಿ ಬಡಾವಣೆಯಲ್ಲಿರುವ ಕಿಂಗ್ ಫಿಷರ್ ಹೌಸ್ ಬಂಗಲೆಯನ್ನು 52.25 ಕೋಟಿ ರು ಗೆ ಖರೀದಿಸಿದೆ. ದಿವಾಳಿಯಾಗಿರುವ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಯ ಕೇಂದ್ರ ಕಚೇರಿಯನ್ನು ಇದೇ ಕಿಂಗ್ ಫಿಷರ್ ಹೌಸ್ ಹೊಂದಿತ್ತು.

ಸುಸ್ತಿದಾರನಾಗಿ ದೇಶಭ್ರಷ್ಟ ಎನಿಸಿಕೊಂಡಿರುವ ಮಲ್ಯ ಅವರ ಆಸ್ತಿ ಹರಾಜಿಗೆ ಕೋರ್ಟ್ ಅನುಮತಿ ಸಿಕ್ಕ ಬಳಿಕ ಸರಿ ಸುಮಾರು 9 ಬಾರಿ ಈ ಹೌಸ್ ಹರಾಜಿಗೆ ಬಂದಿತ್ತು. ಆದರೆ, ಮಾರಾಟವಾಗಿರಲಿಲ್ಲ. ರಿಸರ್ವ್ಡ್ ಬೆಲೆ 135 ಕೋಟಿ ರು ಗಿಂತ ಕಡಿಮೆ ಬೆಲೆಗೆ 52.25 ಕೋಟಿ ರೂಪಾಯಿಗೆ ಮಾರಾಟವಾಗಿದೆ.

click me!