Dr. Madhavi Latha: ಶೌಚಾಲಯದ ಹೋರಾಟದಿಂದ ವಿಶ್ವದ ಎತ್ತರದ ಸೇತುವೆ ನಿರ್ಮಾಣದವರೆಗೆ- ಕರುನಾಡ ಮಹಿಳೆಯ ಸ್ಟೋರಿ ಇದು...

Published : Jun 07, 2025, 02:18 PM IST
IIScs Dr Madhavi Latha

ಸಾರಾಂಶ

ಜಮ್ಮು ಕಾಶ್ಮೀರದಲ್ಲಿ ಚಿನಾಬ್ ನದಿಗೆ ನಿರ್ಮಿಸಲಾಗಿರುವ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆ ನಿನ್ನೆ ಲೋಕಾರ್ಪಣಗೊಂಡಿದ್ದು, ಅದರ ಹಿಂದಿರುವ ಶಕ್ತಿಗಳಲ್ಲಿ ಒಬ್ಬರು ಬೆಂಗಳೂರಿನ ಡಾ.ಮಾಧವಿ ಲತಾ. ಅವರ ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ...

ಜಮ್ಮು ಕಾಶ್ಮೀರದಲ್ಲಿ ಚಿನಾಬ್ ನದಿಗೆ ನಿರ್ಮಿಸಲಾಗಿರುವ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯನ್ನು ನಿನ್ನೆ ಅಂದರೆ ಜೂನ್​ 6ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಸುಮಾರು 1,400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಚಿನಾಬ್ ಸೇತುವೆಯು ವಿಶ್ವದ ಅತಿ ಎತ್ತರದ ರೈಲು ಮತ್ತು ಕಮಾನು ಸೇತುವೆಯಾಗಿದ್ದು, ನದಿಯ ತಳದಿಂದ 359 ಮೀಟರ್ ಎತ್ತರವಿದೆ. ಇದು ಪ್ಯಾರಿಸ್‌ನ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಾಗಿದೆ. 1,315 ಮೀ. ಉದ್ದದ ಸೇತುವೆ ಇದಾಗಿದ್ದು, ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಭಾರತದ ಇತ್ತೀಚಿನ ಅದ್ಭುತವೆಂದು ಪರಿಗಣಿಸಲಾಗಿದೆ. ಈ ಮೂಲಕ ಇಡೀ ವಿಶ್ವದ ಕಣ್ಣು ಭಾರತದತ್ತ ನೆಟ್ಟಿದೆ. ಈ ಸೇತುವೆ ಭೂಕಂಪ ವಲಯ-5 ರಲ್ಲಿ ಸ್ಥಿತವಾಗಿದ್ದು, ರಿಕ್ಟರ್ ಮಾಪಕದಲ್ಲಿ 8 ತೀವ್ರತೆಯ ಭೂಕಂಪವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಮಾತ್ರವಲ್ಲದೇ ಶತಮಾನಕ್ಕೂ ಹೆಚ್ಚು ಕಾಲ ಅತ್ಯಂತ ಕಠಿಣ ನೈಸರ್ಗಿಕ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ಇದರ ಜೊತೆಗೆ, ಗಂಟೆಗೆ 266 ಕಿಲೋಮೀಟರ್ ವೇಗದ ಗಾಳಿಯನ್ನು ಸಹ ಇದು ತಡೆಯಬಲ್ಲದು.

ಇಂಥದ್ದೊಂದು ಸೇತುವೆಯ ನಿರ್ಮಾಣಕ್ಕೆ ಸಹಸ್ರಾರು ಮಂದಿಯ ಪರಿಶ್ರಮ ಇದ್ದೇ ಇರುತ್ತದೆ. ತಂತ್ರಜ್ಞರು ಸೇರಿದಂತೆ ಹಲವರು ಇದಕ್ಕಾಗಿ ಹಗಲೂ ರಾತ್ರಿ ದುಡಿಯುವುದು ಕೂಡ ವಿಶೇಷವಲ್ಲ. ಆದರೆ ಇವರಲ್ಲಿ ಒಬ್ಬರು ಬೆಂಗಳೂರಿನ IISc (ಭಾರತೀಯ ವಿಜ್ಞಾನ ಸಂಸ್ಥೆ)ಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್, ರಾಕ್ ಎಂಜಿನಿಯರಿಂಗ್ ತಜ್ಞೆ ಡಾ. ಮಾಧವಿ ಲತಾ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಹಿಂದೊಮ್ಮೆ ಮಹಿಳೆಯರ ಶೌಚಾಲಯದ ನಿರ್ಮಾಣಕ್ಕಾಗಿ ಹೋರಾಟ ಮಾಡಿದ್ದ ಮಾಧವಿ ಲತಾ ಇಂದು ವಿಶ್ವವೇ ಬೆರಗುಗಣ್ಣುಗಳಿಂದ ನೋಡುವಂಥ ಸೇತುವೆ ನಿರ್ಮಾಣಕ್ಕೆ ಮಹತ್ವದ ಪಾತ್ರ ವಹಿಸುವ ಮೂಲಕ ಮಹಿಳಾ ಶಕ್ತಿಯನ್ನು ಅನಾವರಣಗೊಳಿಸಿದ್ದಾರೆ. ಡಾ. ಲತಾ ಐಐಎಸ್‌ಸಿಗೆ ಸೇರಿದಾಗ, ಅವರು ಮೊದಲ ಮಹಿಳಾ ಅಧ್ಯಾಪಕ ಸದಸ್ಯರಾಗಿದ್ದರು. ಆದಾಗ್ಯೂ, ಅದಕ್ಕಿಂತಲೂ ಮುಖ್ಯವಾಗಿ ಅವರಿಗೆ ಸವಾಲಾಗಿದ್ದು, ಮಹಿಳೆಯರಿಗೆ ವಿಶೇಷ ಶೌಚಾಲಯಗಳು ಇರದಿದ್ದದ್ದು! ಪುರುಷರ ಶೌಚಾಲಯಗಳು ಮಾತ್ರ ಇದ್ದವು. ಆ ಸಂದರ್ಭದಲ್ಲಿ ಮಹಿಳೆಯರಿಗೆ ಶೌಚಾಲಯ ಬೇಕು ಎಂದು ಹೋರಾಟ ಮಾಡಿ ಅದನ್ನು ಸಾಧಿಸಿದ್ದ ಛಲಗಾತಿ ಇದೇ ಮಾಧವಿ ಲತಾ, ಇದಕ್ಕಾಗಿ ಅವರು ಪಟ್ಟ ಶ್ರಮ ಇಂದಿಗೂ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ದಾಖಲಾಗಿದೆ.

ಇದೇ ಮಾಧವಿ ಲತಾ ಇಂದು ಚಿನಾಬ್​ ಸೇತುವೆ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸುಮಾರು 17 ವರ್ಷಗಳಿಂದ ಕಾಮಗಾರಿಗೆ ಸಲಹೆ ಸೂಚನೆ ನೀಡುತ್ತಿದ್ದಾರೆ. ಸೇತುವೆಯ ಗುತ್ತಿಗೆ ಪಡೆದಿರುವ ಆಫ್ಕಾನ್ಸ್ ಸಂಸ್ಥೆಯ ಮನವಿಯ ಮೇರೆಗೆ ಮಾಧವಿ ಲತಾ ಇದಕ್ಕೆ ಮಾರ್ಗದರ್ಶಕರಾಗಿದ್ದಾರೆ. ಇಳಿಜಾರು ಸ್ಥಿರೀಕರಣ ಮತ್ತು ಸೇತುವೆಯ ಅಡಿಪಾಯದ ಕುರಿತು ಮಾಧವಿ ಲತಾ ಅವರು ಮಾರ್ಗದರ್ಶನ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಈ ಕುರಿತು ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಮಾಧವಿ ಲತಾ ಅವರು, 'ಇಳಿಜಾರು ಸ್ಥಿರೀಕರಣ ಮತ್ತು ಅಡಿಪಾಯಕ್ಕೆ IISc ಸಂಸ್ಥೆ ಸಲಹೆ ನೀಡಿತ್ತು. ಉಕ್ಕಿನ ಕಮಾನು ತಯಾರಿಕೆಯಲ್ಲಿ ವಿದೇಶಿ ಸಂಸ್ಥೆಗಳು ನೆರವಾಗಿದ್ದವು. ಸೇತುವೆಯ ಯೋಜನೆ 2005 ರಲ್ಲಿ ಆರಂಭಗೊಂಡಿತ್ತು. 2022 ರಲ್ಲಿ ಪೂರ್ಣ ವೇಗದ ರೈಲುಗಳ ಪ್ರಾಯೋಗಿಕ ಓಡಾಟ ಯಶಸ್ವಿಯಾಗಿ ನೆರವೇರುವುದರೊಂದಿಗೆ ಕಾಮಗಾರಿ ಪೂರ್ಣಗೊಂಡಿತು' ಎಂದಿದ್ದಾರೆ.

 

ಸೇತುವೆಯ ಅಡಿಭಾಗದಲ್ಲಿ ಬರುವ ಬಂಡೆಗಳ ನಡುವೆ ಹೆಚ್ಚಿನ ಅಂತರವಿದ್ದು, ಇಳಿಜಾರುಗಳು ತುಂಬಾ ಕಡಿದಾಗಿತ್ತು. ಹೀಗಾಗಿ ಇಳಿಜಾರುಗಳಲ್ಲಿ ಕಮಾನು ಆಧಾರಸ್ತಂಭಗಳು ಮತ್ತು ಕಂಬಗಳಿಗೆ ಅಡಿಪಾಯಗಳ ನಿರ್ಮಾಣವು ಪ್ರಾಥಮಿಕ ಸವಾಲುಗಳಲ್ಲಿ ಒಂದಾಗಿತ್ತು. ಗಂಟೆಗೆ 220 ಕಿ.ಮೀ. ವೇಗದಲ್ಲಿ ಬೀಸುವ ಗಾಳಿಯನ್ನು ತಡೆದುಕೊಳ್ಳಲು ಸೇತುವೆಯ ಅಡಿಪಾಯವನ್ನು ದೊಡ್ಡದಾಗಿ ಮತ್ತು ಹೆಚ್ಚು ಆಳದಿಂದಲೇ ಮಾಡಲಾಗಿತ್ತು. ಅಲ್ಲದೆ ಈ ಸೇತುವೆ ಇರುವ ಪ್ರದೇಶ ಭೂಕಂಪನ ವಲಯದಲ್ಲಿ ಬರುತ್ತಿದ್ದು, ಎಂಜಿನಿಯರ್​​​ಗಳಿಗೆ ಹೆಚ್ಚಿನ ಸವಾಲು ಒಡ್ಡಿತ್ತು ಎಂದು ಅವರು ತಿಳಿಸಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ನಿನ್ನೆ ಭಾಷಣದಲ್ಲಿ ಸವಾಲುಗಳ ಬಗ್ಗೆ ಉಲ್ಲೇಖಿಸಿದ್ದರು.

 

ಇನ್ನು ಮಾಧವಿ ಲತಾ ಕುರಿತು ಹೇಳುವುದಾದರೆ, ಆಂಧ್ರ ಮೂಲದವರಾಗಿರುವ ಇವರು, ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್‌ನ ಹಳೆಯ ವಿದ್ಯಾರ್ಥಿನಿ. ಡಾ. ಲತಾ, 2004 ರಲ್ಲಿ ಐಐಎಸ್‌ಸಿಗೆ ಸೇರುವ ಮೊದಲು ಐಐಟಿ-ಗುವಾಹಟಿಯಲ್ಲಿ ಬೋಧಕರಾಗಿದ್ದರು. ಅವರ ಸಂಶೋಧನಾ ಆಸಕ್ತಿಗಳು ಜಿಯೋಮೆಕಾನಿಕ್ಸ್‌ನ ಮೈಕ್ರೋ ಟು ಮ್ಯಾಕ್ರೋ, ಸುಸ್ಥಿರ ಮಣ್ಣಿನ ಬಲವರ್ಧನೆ, ಭೂಕಂಪ ಭೂತಾಂತ್ರಿಕ ಎಂಜಿನಿಯರಿಂಗ್ ಮತ್ತು ರಾಕ್ ಎಂಜಿನಿಯರಿಂಗ್ ಅನ್ನು ಒಳಗೊಂಡಿವೆ. ಅವರು ಭಾರತೀಯ ಜಿಯೋಟೆಕ್ನಿಕಲ್ ಸೊಸೈಟಿಯಿಂದ ಜಿಯೋಟೆಕ್ನಿಕಲ್ ಎಂಜಿನಿಯರಿಂಗ್‌ನಲ್ಲಿ ಅತ್ಯುತ್ತಮ ಮಹಿಳಾ ಸಂಶೋಧಕಿ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿ. ಅವರು ಐಐಎಸ್‌ಸಿಯ ಪ್ರೊ. ಎಸ್‌ಕೆ ಚಟರ್ಜಿ ಅತ್ಯುತ್ತಮ ಸಂಶೋಧಕ ಪ್ರಶಸ್ತಿ, ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್‌ನಿಂದ ಮಹಿಳಾ ಸಾಧಕಿ ಪ್ರಶಸ್ತಿ ಮತ್ತು ಎಸ್‌ಇಆರ್‌ಬಿ ಪವರ್ ಫೆಲೋಶಿಪ್ ಅನ್ನು ಸಹ ಪಡೆದಿದ್ದಾರೆ. ಅವರು ಸ್ಟೀಮ್ ಆಫ್ ಇಂಡಿಯಾದ ಟಾಪ್ 75 ಮಹಿಳೆಯರ ಲಿಸ್ಟ್​ಗೆ ಸೇರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್